ADVERTISEMENT

ಏಜೆಂಟರ ಹಾವಳಿ ತಪ್ಪಿಸಲು ಸೂಚನೆ

ಅಧಿಕಾರಿಗಳಿಗೆ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಖಡಕ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 6:10 IST
Last Updated 19 ಜೂನ್ 2018, 6:10 IST
ಗೋಕಾಕ ನಗರಸಭೆ ಸಭಾ ಭವನದಲ್ಲಿ ಸೋಮವಾರ ಸಚಿವ ರಮೇಶ ಜಾರಕಿಹೊಳಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಗೋಕಾಕ ನಗರಸಭೆ ಸಭಾ ಭವನದಲ್ಲಿ ಸೋಮವಾರ ಸಚಿವ ರಮೇಶ ಜಾರಕಿಹೊಳಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಗೋಕಾಕ: ‘ಕೆಲವೊಂದು ಸರ್ಕಾರಿ ಇಲಾಖೆಗಳಲ್ಲಿ ಏಜೆಂಟರ ಹಾವಳಿ ಅತಿಯಾಗಿದ್ದು, ಅಧಿಕಾರಿಗಳು ಅಂಥ ವರ ಕೆಲಸಗಳಿಗೆ ಆದ್ಯತೆ ನೀಡದೆ, ಸಾಮಾನ್ಯ ಜನರಿಗೆ ಆದ್ಯತೆ ನೀಡಬೇಕು’ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿಯ ನಗರಸಭೆ ಸಭಾ ಭವನದಲ್ಲಿ ಸೋಮವಾರ ಜರುಗಿದ ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಂದಾಯ, ಸಾರಿಗೆ, ಸಮಾಜ ಕಲ್ಯಾಣ, ಭೂ ಸೇನಾ ನಿಗಮ, ಭೂ ಮಾಪನ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಏಜೆಂಟರ ಹಾವಳಿ ಅತಿಯಾಗಿದೆ. ಚುನಾಯಿತ ಜನಪ್ರತಿ ನಿಧಿಗಳಿಗೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಏಜೆಂಟರ್ ಮೂಲಕ ಬಂದ ಕೆಲಸಗಳನ್ನು ಬೇಗನೆ ಮಾಡಲಾಗುತ್ತಿದೆ ಎನ್ನುವ ದೂರುಗಳು ಬಂದಿವೆ ಎಂದು ಅವರು ಹೇಳಿದರು.

ADVERTISEMENT

‘ಸರ್ಕಾರದ ಯೋಜನೆಗಳನ್ನು ಬಡ ಜನರಿಗೆ ತಲುಪಿಸುವ ಮಹ ತ್ತರ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು. ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸವೆಂದು ಅರಿತು ಕಾರ್ಯ ನಿರ್ವಹಿಸಬೇಕು. ಕಳೆದ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 23 ತಿಂಗಳು ಸಚಿವನಾಗಿದ್ದಾಗ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಈ ರೀತಿಯಾಗುವುದಿಲ್ಲ. ಕಾಲಕಾಲಕ್ಕೆ ಸಭೆ ನಡೆಸುತ್ತೇನೆ’ ಎಂದು ಹೇಳಿದರು.

‘ನಮ್ಮ ವಿರುದ್ಧ ಕೆಲವರು ಅಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಜಾತಿ ರಾಜಕಾರಣ, ಸುಳ್ಳು ಪ್ರಚಾರ ಹಾಗೂ ಹಿಂದುತ್ವದ ಬಗ್ಗೆ ಮಾತನಾಡುವವರ ಬಗ್ಗೆ ಗಮನ ವಿರಲಿ. ನಾನು ಕೂಡಾ ಹಿಂದೂ ಆಗಿದ್ದೇನೆ. ಹಿಂದುತ್ವ ಮತ್ತು ಜಾತಿ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದ್ದು ಅಂಥವರ ಮಾತಿಗೆ ಸಾರ್ವಜನಿಕರು ಮರುಳಾಗಬಾರದು’ ಎಂದು ಮನವಿ ಮಾಡಿದರು.

‘ಅಂಕಲಗಿ ಮತ್ತು ಅಕ್ಕತಂ ಗೇರಹಾಳ ಗ್ರಾಮ ಪಂಚಾಯ್ತಿ ಸೇರ್ಪಡೆ ಮಾಡಿ ಪಟ್ಟಣ ಪಂಚಾಯ್ತಿ ಮಾಡುವ ಕುರಿತು ಸದ್ಯದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯ್ತಿಗೆ ಧುಪದಾಳ ಗ್ರಾಮ ಪಂಚಾಯ್ತಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಸಚಿವರು ತಿಳಿಸಿದರು.

ಪ್ರತ್ಯೇಕ ಸಭೆ: ನಗರಸಭೆ ಮತ್ತು ಪೊಲೀಸ್ ಇಲಾಖೆಗಳ ಸಭೆಯನ್ನು ಸಚಿವರು ಪ್ರತ್ಯೇಕವಾಗಿ ನಡೆಸಿದರು. ಪೊಲೀಸ್‌ ಮತ್ತು ನಗರಸಭೆ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಇದರಿಂದಾಗಿ ನನಗೆ ರಾಜಕೀಯವಾಗಿ ಹಿನ್ನಡೆಯಾಗಿದೆ ಎಂದು ರಮೇಶ ಜಾರಕಿಹೊಳಿ ಅಧಿಕಾರಿಗಳನ್ನು ತರಾ ಟೆಗೆ ತಗೆದುಕೊಂಡರು.

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ 24 X 7 ಕುಡಿಯುವ ನೀರು ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಾಸ್ಟರ್ ಪ್ಲ್ಯಾನ್ ಕಾರ್ಯ ನಡೆದ ಕಡೆಗಳಲ್ಲಿ ದುರಸ್ತಿ ಕೆಲಸಗಳು ಆಮೆ ಗತಿ ಯಲ್ಲಿ ಸಾಗುತ್ತಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅವುಗ ಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಲು ಕಾರ್ಯ ಪ್ರವರ್ತರಾಗಬೇಕೆಂದು ಸೂಚಿಸಿದರು.

ತಾಲ್ಲೂಕು ಆಡಳಿತ ವತಿಯಿಂದ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಹಶೀಲ್ದಾರ್‌ ಜಿ.ಎಸ್.ಮಳಗಿ, ಡಿ.ವೈ.ಎಸ್ಪಿ. ಪ್ರಭು ಡಿ.ಟಿ, ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ, ತಾಲ್ಲೂಕು ಪಂಚಾಯ್ತಿ ಇ.ಓ. ಎಫ್.ಜಿ.ಚಿನ್ನನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.