ADVERTISEMENT

ಕರ್ನಾಟಕ ಪುರುಷರ ತಂಡಕ್ಕೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 8:52 IST
Last Updated 3 ಜನವರಿ 2014, 8:52 IST

ಬೆಳಗಾವಿ: ಕರ್ನಾಟಕ ಇನ್‌ಲೈನ್‌ ಹಾಕಿ ಪುರುಷರ ತಂಡವು ಹರಿಯಾಣದ ಸಿರ್ಸಾದಲ್ಲಿ ಈಚೆಗೆ ನಡೆದ 51ನೇ ರಾಷ್ಟ್ರೀಯ ರೋಲರ್‌ ಹಾಗೂ ಇನ್‌ಲೈನ್‌ ಹಾಕಿ ಚಾಂಪಿಯನ್‌ಷಿಪ್‌ 2013ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದೆ. ಭಾರತೀಯ ರೋಲರ್‌ ಸ್ಕೇಟಿಂಗ್‌ ಒಕ್ಕೂಟ ಹಮ್ಮಿಕೊಂಡಿದ್ದ ಈ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಆಂಧ್ರಪ್ರದೇಶ ತಂಡವನ್ನು 7–2ರಲ್ಲಿ ಮಣಿಸುವ ಮೂಲಕ ‘ಚಾಂಪಿಯನ್ಸ್‌ ಆಫ್‌ ಚಾಂಪಿಯನ್‌’ ಟ್ರೋಫಿ ತನ್ನದಾಗಿಸಿಕೊಂಡಿತು.

ಜ್ಯೂನಿಯರ್‌ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡ ಆಂಧ್ರಪ್ರದೇಶದ ವಿರುದ್ಧ 3–11ರಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿತು. ಪುರುಷರ ಇನ್‌ಲೈನ್‌ ಹಾಕಿ ತಂಡದಲ್ಲಿದ್ದ ಅಮಿತ್‌ ಶರ್ಮಾ, ವಿಶಾಲ ಶರ್ಮಾ, ಗುರುಪ್ರೀತ್‌ ಸಿಂಗ್‌ ಖಾರಾ, ಅಮರ ಸಿಂಗ್‌, ಮಯೂರ ಹಲ ಗೇಕರ, ಎಂ.ಡಿ. ಸಿದ್ದೀಕಿ, ಮಂಜುನಾಥ ಮಂಡೋ ಲ್ಕರ್‌, ನಿಖಿಲ್‌ ಚಿಂಡಕ್‌, ಸರ್ವೇಶ ಆಮ್ಟೆ, ಆಶಿಶ್‌ ಭಂಡಾರಿ, ಪ್ರಕಾಶ ಪಾಟೀಲ, ಅಶ್ವಿನ್ ಉಪಾಧ್ಯೆ, ಹೇಮಂತ ತಿಲಂಗಜಿ, ಶ್ರೀನಿವಾಸ ಜಾಧವ, ರೋಹಿತ್‌ ವೆರ್ಣೇಕರ, ಓಂಕಾರ ಲಬ್ಬಿ ಚಿನ್ನದ ಪದಕವನ್ನು ಕೊರಳಿಗೆ ಹಾಕಿಸಿಕೊಂಡಿದ್ದಾರೆ.

ಜ್ಯೂನಿಯರ್‌ ಬಾಲಕಿಯರ ಇನ್‌ಲೈನ್‌ ಹಾಕಿ ತಂಡದಲ್ಲಿ ಸಮೃದ್ಧಿ ಗುಂಡಕಲ್‌, ಶೇಫಾಲಿ ಕಾನಡೆ, ವೈಷ್ಣವಿ ಪಾಟೀಲ, ರಾಧಿಕಾ ಮಲ್ಲಾಪುರ, ವಿನಯ ರಾಜಗೋಳಕರ, ಯೋಜನ ಸಂಭುಚೆ, ಕಾಂಚನ ಕುಲಹಳ್ಳಿ, ರೇಖಾ ಹೊಸಮನಿ, ನಿಶ್ಚಿತಾ ಮಹಾಂತ ಶೆಟ್ಟರ್‌, ಋತ್ವಿಕಾ ಕುಂದಗೋಳ, ಕಾವ್ಯಾ ರೇಷ್ಮಿ, ನಿವೇದಿತಾ ಕಸ್ತೂರಿ ಅವರು ಆಟವಾಡಿದ್ದು, ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

3 ಬೆಳ್ಳಿ ಪದಕ: ಮುಂಬೈನಲ್ಲಿ ಈಚೆಗೆ ನಡೆದ 51ನೇ ರೋಲರ್‌ ಸ್ಪೋರ್ಟ್ಸ್‌ ಗೇಮ್ಸ್‌ನಲ್ಲಿ ಕರ್ನಾಟಕದ ಸ್ಕೇಟರ್‌ಗಳು 3 ಬೆಳ್ಳಿ ಪದಕ ಹಾಗೂ 1 ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಹಿರಿಯರ ಪುರುಷರ ವಿಭಾಗದ ಸ್ಪೀಡ್‌ ಸಾಲಮ್‌ ಹಾಗೂ ಫ್ರೀ ಸ್ಟೈಲ್‌ನಲ್ಲಿ ಭರತ್‌ ಪಾಟೀಲ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಜ್ಯೂನಿಯರ್‌ ಬಾಲಕಿಯರ ವಿಭಾಗದ ಸ್ಪೀಡ್‌ ಸಾಲಮ್‌ನಲ್ಲಿ ಸಮೃದ್ಧಿ ಗುಂಡಕಲ್‌ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಜ್ಯೂನಿಯರ್‌ ಬಾಲಕರ ಸ್ಪೀಡ್‌ ಸಾಲಮ್‌ ವಿಭಾಗದಲ್ಲಿ ಅನಿಕೇತ ಚಿಂಡಕ್‌ ಕಂಚಿನ ಪದಕವನ್ನು ಪಡೆದಿದ್ದಾರೆ. ಈ ಸ್ಕೇಟರ್‌ಗಳು ಬೆಳಗಾವಿ ಜಿಲ್ಲಾ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯ ಸದಸ್ಯರಾಗಿದ್ದು, ಕಳೆದ ಮೂರು ವರ್ಷಗಳಿಂದ ತರಬೇತಿ ಪಡೆದುಕೊಳ್ಳುತ್ತಿದ್ದರು.

ಕರ್ನಾಟಕ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಭರತಕುಮಾರ್‌, ಬೆಳಗಾವಿ ಜಿಲ್ಲಾ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯ ಅಧ್ಯಕ್ಷ ಉಮೇಶ ಕಲಘಟಗಿ, ಅಶೋಕ ಶಿಂತ್ರೆ, ಸೂರ್ಯಕಾಂತ ಹಿಂಡಲಗೇಕರ, ಸುಧಿರ್‌ ಕುಣಸಾನೆ, ಆನಂದ ಪಾಟೀಲ,  ಸ್ಕೇಟರ್‌ಗಳ  ಸಾಧನೆಗೆ  ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.