ಚನ್ನಮ್ಮನ ಕಿತ್ತೂರು: ಇಲ್ಲಿಯ ಗುರುವಾರ ಪೇಟೆಯಲ್ಲಿರುವ ಐತಿಹಾಸಿಕ ರಣಗಟ್ಟಿಕೆರೆಯ ದಂಡೆ ಭಾಗವೊಂದು ಶುಕ್ರವಾರ ಮುಂಜಾನೆ ಕುಸಿದು ಬಿದ್ದಿದೆ. ಇತ್ತೀಚೆಗೆ ನಿರ್ಮಾಣ ಮಾಡಿದ್ದ ಈ ಭಾಗ ಕುಸಿದು ಬಿದ್ದಿರುವ ಪರಿಣಾಮ ಕೆರೆದಂಡೆಯ ಕೆಳಗೆ ವಾಸಿಸುತ್ತಿರುವ ಕುಟುಂಬಗಳಿಗೆ ತೀವ್ರ ಆತಂಕ ತಂದೊಡ್ಡಿದೆ.
ಕೆರೆ ಆಸುಪಾಸಿನ ಜನರ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಮಾಡಿದ ಕಳಪೆ ಕಾಮಗಾರಿಯಿಂದಾಗಿ ಈ ಕೆರೆದಂಡೆ ಕುಸಿದು ಬೀಳಲು ಕಾರಣವಾಗಿದೆ ಎಂದು ನಾಗರಿಕರು ಆರೋಪಿಸಿದರು.
ಬಿದ್ದಿರುವ ಸುದ್ದಿ ತಿಳಿದು ಗುತ್ತಿಗೆದಾರರ ಕಾರ್ಮಿಕರು ಮತ್ತೆ ಕಟ್ಟಲು ಸ್ಥಳಕ್ಕೆ ಧಾವಿಸಿ ಬಂದಿದ್ದರು. ಆದರೆ, ಇದಕ್ಕೆ ಇಲ್ಲಿಯ ಜನತೆ ತೀವ್ರ ತಡೆಯೊಡ್ಡಿದ್ದರಿಂದ ಅವರು ವಾಪಸ್ಸು ಮರಳಿದರು.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರೂ. 10ವೆಚ್ಚದಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೆರೆದಂಡೆಯ ಒಂದು ಪಾರ್ಶ್ವಭಾಗದ 67ಮೀಟರ್ ಉದ್ದ ಹಾಗೂ 35 ಮೀಟರ್ ಅಗಲ ಕಲ್ಲು ಜೋಡಿಸುವುದು (ಪಿಚ್ಚಿಂಗ್), ಕೆರೆ ಅಂಗಳದಲ್ಲಿ ಬೆಳೆದಿದ್ದ ಕಸಗಂಟಿ ಕಿತ್ತು ಸ್ವಚ್ಛಗೊಳಿಸುವುದು ಹಾಗೂ ಕೆರೆಪಕ್ಕ ಕೊಳಚೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸುವುದು ಈ ಕಾಮಗಾರಿ ಪಟ್ಟಿಯಲ್ಲಿದ್ದ ಆದ್ಯತೆ ಕೆಲಸಗಳಾಗಿದ್ದವು.
ಮಳೆಗಾಲ ಪ್ರಾರಂಭವಾಗುವ ಸ್ವಲ್ಪ ಮೊದಲು ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸಿದ್ದರು. ಅಲ್ಲಿಯ ಜನರ ವಿರೋಧದ ನಡುವೆಯೇ ಕೆಲಸ ಕುಂಟುತ್ತ ಸಾಗಿತ್ತು. ಅವೈಜ್ಞಾನಿಕವಾಗಿ ಮಾಡಲಾದ ಕೆಲಸದಿಂದಾಗಿ ಈಗ ಈ ಅವಘಡ ಸಂಭವಿಸಿದೆ.
`ಕೆರೆದಂಡೆ ಗುಂಟ ಮಹಿಳೆಯರು ನಿತ್ಯ ಬಟ್ಟೆ ತೊಳೆಯುತ್ತಾರೆ. ಕೆರೆ ಅಂಗಳದಲ್ಲಿ ನೀರಿಲ್ಲದ ಕಡೆ ಮಕ್ಕಳು ಆಟವಾಡುತ್ತಿರುತ್ತಾರೆ. ಅದೃಷ್ಟವಶಾತ್ ಏನೂ ದುರಂತ ಸಂಭವಿಸಿಲ್ಲ. ಇದೇ ನಮ್ಮ ನೆಮ್ಮದಿಗೆ ಕಾರಣವಾಗಿದೆ' ಎಂದು ಹೇಳಿ ನಿಟ್ಟುಸಿರುಬಿಟ್ಟರು ಮೊಹಮ್ಮದಸಲೀಂ ಸಂಗೊಳ್ಳಿ.
ಕೆರೆ ಕಾಮಗಾರಿಯ ಉಸ್ತುವಾರಿಯನ್ನು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ವಹಿಸಿಕೊಂಡಿದ್ದಾರೆ. `ಇಲ್ಲಿ ನಡೆದಿದ್ದ ಕಳಪೆ ಕಾಮಗಾರಿಯನ್ನು ಈ ಇಲಾಖೆಯ ಕೆಲವರ ಗಮನಕ್ಕೆ ತಂದರು. ಜನರ ವಿರೋಧ ಲೆಕ್ಕಿಸದೇ ಇವರು ಗುತ್ತಿಗೆದಾರನಿಗೆ ಬೆಂಬಲ ನೀಡಿದರು. ಅಧಿಕಾರಿಗಳ ಈ ಧೋರಣೆ ಕಳಪೆ ಕಾಮಗಾರಿ ನಡೆಸಲು ಗುತ್ತಿಗೆದಾರನಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಯಿತು' ಎಂದು ಆರೋಪಿಸಿದರು.
`ಚರಂಡಿ ನೀರು ಎಲ್ಲಿ ಹರಿಯಬೇಕು ಎಂಬ ವಿವೇಚನೆ ಈ ಯೋಜನೆ ರೂಪಿಸಿದ ಅಧಿಕಾರಿಗಳಿಗಿಲ್ಲ. ಪಿಚ್ಚಿಂಗ್ ಕಾಮಗಾರಿ ಎಲ್ಲಿ ನಡೆಸಬೇಕು ಎಂಬ ತಿಳಿವಳಿಕೆಯೂ ಉಸ್ತುವಾರಿ ನೋಡಿಕೊಳ್ಳುವ ಇಲಾಖೆ ಎಂಜಿನಿಯರ್‌ಗಿಲ್ಲ. ಬೇಗ ಕೆಲಸ ಮಾಡಬೇಕು, ಬೇಗ ದುಡ್ಡು ತೆಗೆಯಬೇಕು ಎಂಬ ಆತುರ ಗುತ್ತಿಗೆದಾರರಿಗಿದ್ದಂತಿದೆ. ಹೀಗಾದರೆ ಕೆರೆಗೆ ಗತಿಯಾರು? ದಂಡೆ ಒಡೆದು ಕೆಳಗೆ ವಾಸಿಸುವ ಕುಟುಂಬಗಳಿಗೆ ಹಾನಿಯಾದರೆ ಯಾರೂ ಗತಿ?' ಎಂದು ಕಳವಳದಿಂದ ಪ್ರಶ್ನಿಸುತ್ತಾರೆ ಇಲ್ಲಿಯ ಜನರು.
`ಕೆರೆ ಅಭಿವೃದ್ಧಿ ಪಡಿಸುವುದಕ್ಕೆ ಯಾರದೂ ವಿರೋಧವಿಲ್ಲ. ಆದರೆ, ಮಳೆಗಾಲ ಪ್ರಾರಂಭವಾಗುವ ಸಮಯದಲ್ಲೇ ಏಕೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಾರೆ' ಎಂದು ರಿಯಾಜ್ ತಾಳಿಕೋಟಿ, ಇಮಾಮಹುಸೇನ್ ಮುಜಾವರ, ಇಸ್ಮಾಯಿಲ್ ಜಮಾದಾರ, ರಫೀಕ್ ನಾಸಮಾಲೆ, ರಿಯಾಜ್ ಯಕ್ಕುಂಡಿ, ರಫೀಕ್ ಯಳ್ಳೂರ, ಮೆಹಬೂಬ್ ಸುಬಾನಿ ಮೋಮಿನ್ ಆಕ್ರೋಶದಿಂದ ನುಡಿದರು.
ಕಾಮಗಾರಿಯೇ ಹೀಗೆ: `ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಕೆಲ ಕೆಲಸಗಳ ಹಣೆಬರೆಹ ಇದೇ ತೆರನಾಗಿದೆ. ಕಳಪೆ ಮಟ್ಟದ್ದೇ ಕಾರುಬಾರು. ಏನೇ ನಡೆದರೂ ಗಮನಿಸದ ಸ್ಥಿತಿಯಲ್ಲಿ ಇಂದು ಪ್ರಾಧಿಕಾರದ ಆಯುಕ್ತರಿದ್ದಾರೆ' ಎಂಬ ದೂರು ನಾಗರಿಕರಿಂದ ಕೇಳಿ ಬರುತ್ತಿದೆ. `ನೂತನ ಶಾಸಕ ಡಿ. ಬಿ. ಇನಾಮದಾರ ಅವರಾದರೂ ಈ ಬಗ್ಗೆ ಗಮನಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ' ಎಂಬುದು ಇಲ್ಲಿನವರ ಒತ್ತಾಸೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.