ADVERTISEMENT

ಕುಂದಾನಗರಿಯಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್:ಅಂಗವಿಕಲರ ವಾಲಿಬಾಲ್ ಟೂರ್ನಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 7:05 IST
Last Updated 19 ಅಕ್ಟೋಬರ್ 2012, 7:05 IST

ಬೆಳಗಾವಿ: ಭಾರತೀಯ ಪ್ಯಾರಾ ಒಲಿಂಪಿಕ್ ವಾಲಿಬಾಲ್ ಒಕ್ಕೂಟ ಹಮ್ಮಿಕೊಂಡಿರುವ ಮೂರು ದಿನಗಳ ಅಂಗವಿಕಲರ ರಾಷ್ಟ್ರೀಯ ಸ್ಟ್ಯಾಂಡಿಂಗ್ ವಾಲಿಬಾಲ್ ಚಾಂಪಿಯನ್‌ಷಿಪ್ ಅ. 19ರಿಂದ ಕುಂದಾನಗರಿಯಲ್ಲಿ ನಡೆಯಲಿದ್ದು ಕೂಟಕ್ಕೆ ಇಲ್ಲಿನ ಸಿಪಿಇಡಿ ಮೈದಾನ ಸಜ್ಜಾಗಿದೆ.

`ಕರ್ನಾಟಕ, ಆಂಧ್ರಪ್ರದೇಶ, ಪಾಂಡಿಚೇರಿ, ತಮಿಳುನಾಡು, ಉತ್ತರ ಪ್ರದೇಶ, ಗೋವಾ, ಬಿಹಾರ, ರಾಜಸ್ತಾನ, ತ್ರಿಪುರಾ, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ಒರಿಸ್ಸಾ ಹಾಗೂ ಇಂಡಿಯನ್ ರೈಲ್ವೆ ತಂಡಗಳು  ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ~ ಎಂದು ಭಾರತೀಯ ಪ್ಯಾರಾ ಒಲಿಂಪಿಕ್ ವಾಲಿಬಾಲ್ ಒಕ್ಕೂಟದ ಅಧ್ಯಕ್ಷ ಎಚ್. ಚಂದ್ರಶೇಖರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಶುಕ್ರವಾರ ಬೆಳಿಗ್ಗೆ 10.30ಕ್ಕೆ ಟೂರ್ನಿಗೆ ಚಾಲನೆ ನೀಡಲಾಗುವುದು. ಟೂರ್ನಿಗೆ ಸಹಾಯ ನೀಡಿದ ಸಮಾಜ ಸೇವಕ ಅನಿಲ್ ಪೋತದಾರ ಹಾಗೂ ಪಾಲಿಕೆ ಮಾಜಿ ಸದಸ್ಯ ಲತೀಫ್‌ಖಾನ್ ಪಠಾಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಏಕಲವ್ಯ ಪ್ರಶಸ್ತಿ ಪುರಸ್ಕೃತ ಆಟಗಾರರನ್ನು ಟೂರ್ನಿಯಲ್ಲಿ ಸತ್ಕರಿಸಲಾಗುವುದು~ ಎಂದು ಅವರು ತಿಳಿಸಿದರು.

`ಇದು ಮೂರನೇ ರಾಷ್ಟ್ರೀಯ ಚಾಂಪಿಯನ್‌ಷಿಪ್. ಇದರಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಕಾಂಬೋಡಿಯಾದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುವುದು~ ಎಂದು ಅವರು ತಿಳಿಸಿದರು.

`ಮೊದಲ ಬಹುಮಾನ ರೂ. 30 ಸಾವಿರ, ಎರಡನೇ ಬಹುಮಾನ ರೂ. 20 ಸಾವಿರ ಹಾಗೂ ಮೂರನೇ ಬಹುಮಾನ ರೂ. 10 ಸಾವಿರ ನೀಡಲಾಗುವುದು. ಉತ್ತಮ ಸ್ಮ್ಯಾಷರ್, ಪಾಸರ್ ಸೇರಿದಂತೆ ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ಕೂಡ ನೀಡಲಾಗುವುದು~ ಎಂದು ಅವರು ತಿಳಿಸಿದರು.

`ಅಂಗವಿಕಲಾದರೂ ಅವರಲ್ಲಿ ಅದ್ಭುತ ಕ್ರೀಡಾಸ್ಫೂರ್ತಿ ಇರುತ್ತದೆ. ಆದರೆ ಸರ್ಕಾರ ಅಂಗವಿಕಲರ ಟೂರ್ನಿಗೆ ಸಹಾಯ ನೀಡುತ್ತಿಲ್ಲ. ಹಲವು ಸಂಘ-ಸಂಸ್ಥೆಗಳ ನೆರವಿನಿಂದ ಟೂರ್ನಿಯನ್ನು ನಡೆಸಲಾಗುತ್ತಿದೆ~ ಎಂದರು.
ಉದ್ಯಮಿ ಅನಿಲ್ ಪೋತದಾರ, `ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ ಕ್ರೀಡೆಗೆ ಮೀಸಲಿರುವ ಅನುದಾನದಲ್ಲಿ ಪ್ಯಾರಾ ಒಲಿಂಪಿಕ್ ಕ್ರೀಡೆಗೂ ನೆರವು ನೀಡಬೇಕು~ ಎಂದು ಆಗ್ರಹಿಸಿದರು.

ಭಾರತೀಯ ಪ್ಯಾರಾ ಒಲಿಂಪಿಕ್ ವಾಲಿಬಾಲ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಪಾರ್ಥಿಬನ್, ಟೂರ್ನಿಯ ಸಂಘಟನಾ ಕಾರ್ಯದರ್ಶಿ  ಪ್ರವೀಣ ಉಳ್ಳಾಗಡ್ಡಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಲತೀಫ್‌ಖಾನ್ ಪಠಾಣ, ಕರ್ನಾಟಕ ಅಂಗವಿಕಲರ ವಾಲಿಬಾಲ್ ಒಕ್ಕೂಟದ ಕಾರ್ಯದರ್ಶಿ ಮಹೇಶ, ಸಂಘಟನಾ ಸಮಿತಿ ಸಂಚಾಲಕ ನಬಿ ಎಸ್. ದೊಡ್ಡಮನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.