ಬೆಳಗಾವಿ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾ ಗ್ರಂಥಾಲಯದ ಅಭಿವೃದ್ಧಿ ಮತ್ತು ಬಳಕೆ ಮಾಡಲು `ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ~ ಎಂಬ ಕಾರ್ಯಕ್ರಮ ನಡೆಸಲಾಗುವುದು. ಜೊತೆಗೆ ಶಾಲಾ ಗ್ರಂಥಾಲಯಕ್ಕೆ ಶಾಲಾ ಶ್ರದ್ಧಾ ವಾಚನಾಲಯ ಎಂದು ನಾಮಕರಣ ಮಾಡುವ ಸಮಾರಂಭವನ್ನು ನ. 7ರಂದು ಎಲ್ಲ ಶಾಲೆಗಳಲ್ಲಿ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ ಎಚ್. ಹೇಳಿದರು.
`ಈ ಕಾರ್ಯಕ್ರಮವು ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಡೆಯಲಿದೆ. ಈಗಾಗಲೇ ಆಯಾ ಶಾಲಾ ಮುಖ್ಯಾಧ್ಯಾಪಕರಿಗೆ ಸೂಚಿಸಲಾಗಿದ್ದು, ಅಧಿಕಾರಿಗಳು ಸಹ ಭೇಟಿ ನೀಡಲಿದ್ದಾರೆ~ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ಮೂಲಕ ಅವರ ಜ್ಞಾನದ ಹರವನ್ನು ವಿಸ್ತರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಮುದಾಯದ ಸಹಭಾಗಿತ್ವದೊಂದಿಗೆ ಗ್ರಂಥಾಲಯ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಸಾರ್ವಜನಿಕರು ಪುಸ್ತಕಗಳನ್ನು, ರ‌್ಯಾಕ್‌ಗಳನ್ನು ದೇಣಿಗೆ ನೀಡಬಹುದು. ಗ್ರಂಥಾಲಯಕ್ಕಾಗಿ ಪ್ರತ್ಯೇಕ ಕೊಠಡಿ ನಿರ್ಮಿಸಲಾಗುವುದು ಎಂದರು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಯೋಜನೆಯಡಿ ಪ್ರೌಢಶಾಲೆಯಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ ನಿರ್ಮಾಣ ಮಾಡಲಾಗುವುದು. ಈ ಯೋಜನೆಯಡಿ ಶಾಲೆಗೆ 40,000 ರೂ. ಅನುದಾನ ಹಾಗೂ ನಿರ್ವಹಣೆಗೆ 25,000 ರೂ. ಅನುದಾನ ನೀಡಲಾಗುವುದು. ಎಸ್‌ಎಸ್‌ಎಲ್‌ಸಿ ಮಕ್ಕಳ ಶೈಕ್ಷಣಿಕ ಪ್ರವಾಸದ ಅನುದಾನ ಸಹ ಇದು ಒಳಗೊಂಡಿದೆ ಎಂದು ಹೇಳಿದರು.
ಗ್ರಂಥಾಲಯಗಳಲ್ಲಿ ಮಹಾತ್ಮರ ಜೀವನ ಚರಿತ್ರೆಗಳು, ಸಣ್ಣ ಕಥೆಗಳು, ಸಾಮಾನ್ಯ ಜ್ಞಾನ ವೃದ್ಧಿಸುವ ಪುಸ್ತಕಗಳು ಲಭ್ಯವಿರುತ್ತವೆ. ಒಂದು ವಾರದ ಅವಧಿಗೆ ಮಕ್ಕಳಿಗೆ ಮನೆಗೆ ಪುಸ್ತಕ ಒಯ್ಯಲು ಅನುಮತಿ ನೀಡಲಾಗುವುದು ಎಂದ ಅವರು, 2010-11ನೇ ಸಾಲಿನಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ 3000 ರೂ. ಗಳಂತೆ ಒಟ್ಟು 18.75 ಲಕ್ಷ ರೂಪಾಯಿ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ 10,000 ರೂ. ಗಳಂತೆ ಒಟ್ಟು 79.80 ಲಕ್ಷ ರೂಪಯಿ ಅನುದಾನ ನೀಡಲಾಗಿದೆ.
2012-13ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳ ಕಿರಿಯ ವಿಭಾಗಕ್ಕೆ 10,000 ರೂ. ಜೊತೆಗೆ ಹೆಚ್ಚುವರಿಯಾಗಿ ತಲಾ 3000 ರೂ. ಅನುದಾನ ನೀಡಲಾಗುವುದು ಎಂದರು. ಶಿಕ್ಷಣಾಧಿಕಾರಿ ಉಷಾ ಗಂಜೀಗಟ್ಟಿ, ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಎನ್.ಕೆ.ಕಾಂಬಳೆ ಉಪಸ್ಥಿತರಿದ್ದರು.
`ಶಾಲಾ ಗ್ರಂಥಾಲಯ ಅಭಿವೃದ್ಧಿ ಮತ್ತು ಬಳಕೆ~
ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ನವೆಂಬರ 7 ರಂದು `ತೆಗೆಯಿರಿ ಪುಸ್ತಕ ಹೊರಗೆ ಹಚ್ಚಿರಿ ಜ್ಞಾನದ ದೀವಿಗೆ~ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಂ.ದಾನೋಜಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾ ಗ್ರಂಥಾಲಯದ ಅಭಿವೃದ್ಧಿ ಮತ್ತು ಬಳಕೆಯನ್ನು ಉತ್ತೇಜಿಸಲು ಹಾಗೂ ಪುಸ್ತಕಗಳು ಜ್ಞಾನದ ಹೆಬ್ಬಾಗಿಲುಗಳಾಗಿರುವ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಗ್ರಂಥಾಲಯದ ಅಭಿವೃದ್ಧಿ ಮತ್ತು ಸದ್ಬಳಕೆಯ ಅವಶ್ಯಕತೆ ಇದೆ ಎಂದು ತಿಳಿಸಿದರು.
ಶಾಲಾ ಗ್ರಂಥಾಲಯಕ್ಕೆ ಶಾಲಾ ಶ್ರದ್ಧಾ ವಾಚನಾಲಯ ಎಂದು ನಾಮಕರಣ ಮಾಡಲಾಗುವುದು. ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುವುದು, ಗ್ರಂಥಾಲಯದ ಬಳಕೆಯನ್ನು ಚುರುಕುಗೊಳಿಸುವುದು ಮತ್ತು ಶಾಲೆಗಳಲ್ಲಿನ ಗ್ರಂಥಾಲಯಗಳನ್ನು ಸಮುದಾಯದ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಸರ್ವ ಶಿಕ್ಷಣ ಅಭಿಯಾನದಡಿ ಹಾಗೂ ಸಾರ್ವಜನಿಕರ ದೇಣಿಗೆಯಿಂದ ಸಂಗ್ರಹಿಸಿದ ಗ್ರಂಥ ಭಂಡಾರ ಎಲ್ಲ ಶಾಲೆಗಳಲ್ಲಿ ಇದೆ. ಜಿಲ್ಲೆಯಲ್ಲಿನ ಎಲ್ಲ ಸ್ವಯಂ ಸೇವಾ ಸಂಸ್ಥೆಗಳು, ಪೋಷಕರು, ಸಮುದಾಯದ ದಾನಿಗಳು ಕಥೆ , ಕಾದಂಬರಿ , ಪ್ರವಾಸ ಕಥನ, ಕವನ ಸಂಕಲನ, ರಾಷ್ಟ್ರ ಭಕ್ತ, ಮಹಾನ್ ವ್ಯಕ್ತಿಗಳ ಜೀವನ ಕಥೆ, ಆತ್ಮ ಚರಿತ್ರೆಗೆ ಸಂಬಂಧಿಸಿದ ಪುಸ್ತಕಗಳು, ಶಬ್ದಕೋಶ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕೊಡುಗೆಯಾಗಿ ಶಾಲೆಗಳಿಗೆ ನೀಡುವಂತೆ ಮನವಿ ಮಾಡಿದರು.
ಶೈಕ್ಷಣಿಕ ಜಿಲ್ಲೆಯಲ್ಲಿನ ಎಲ್ಲ ಜನಪ್ರತಿನಿಧಿಗಳು, ಸಮುದಾಯ, ಪೋಷಕರು, ಎಸ್‌ಡಿಎಂಸಿಯ ಸದಸ್ಯರು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕು ಎಂದು ದಾನೋಜಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.