ADVERTISEMENT

`ದೂರಶಿಕ್ಷಣ ಎಂಬಿಎ ಕೋರ್ಸ್ ಆರಂಭ'

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:17 IST
Last Updated 6 ಏಪ್ರಿಲ್ 2013, 6:17 IST

ಬೆಳಗಾವಿ: `ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 2013-14ನೇ ಶೈಕ್ಷಣಿಕ ವರ್ಷದಿಂದ ದೂರಶಿಕ್ಷಣದ ಮೂಲಕ ಎಂಬಿಎ ಕೋರ್ಸ್ ಅನ್ನು ಆರಂಭಿಸಲಾಗುತ್ತಿದೆ' ಎಂದು ಕುಲಪತಿ ಡಾ. ಎಚ್.ಮಹೇಶಪ್ಪ ಹೇಳಿದರು.

ವಿಶ್ವಶ್ವೇರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 12ನೇ ಘಟಿಕೋತ್ಸವ ಸಮಾ ರಂಭದಲ್ಲಿ ತಮ್ಮ ವಿಶ್ವವಿದ್ಯಾಲಯ ಹಾಕಿಕೊಂಡಿ ರುವ ಯೋಜನೆಗಳನ್ನು ವಿವರಿಸಿದ ಅವರು, ಗುಣ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನೇಮಕ ಗೊಂಡ ನೂತನ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಡಿಜಿಟಲ್ ಮೌಲ್ಯಮಾಪನ ಪದ್ಧತಿ ಮೂಲಕ ಮಾಡಲಾಗುತ್ತಿದೆ. ಇದು ರಾಷ್ಟ್ರದಲ್ಲಿಯೇ ಪ್ರಥಮ ಪದ್ಧತಿ ಇದಾಗಿದೆ. ವಿಟಿಯು ಸಂಯೋಜನೆ ಗೊಳಪಟ್ಟ ಎಲ್ಲ ತಾಂತ್ರಿಕ ಮಹಾವಿದ್ಯಾಲಯಗಳಿಗೆ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಆನ್‌ಲೈನ್ ಮೂಲಕ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವಾರು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಡಂಬಡಿಕೆಗಳ ಅಡಿಯಲ್ಲಿ ಔದ್ಯೋಗಿಕ ಅವಶ್ಯಕತೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಸಮರ್ಥವಾದ ಮಾನವ ಸಂಪನ್ಮೂಲ ಪೂರೈಸುವ ಕೆಲಸ ವಿಟಿಯು ಮಾಡುತ್ತಿದೆ ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ ಬಿ.ಇ ಹಾಗೂ ಬಿ.ಟೆಕ್ ವಿಭಾಗದಲ್ಲಿ 48,468 ವಿದ್ಯಾರ್ಥಿಗಳಿಗೆ, ಬಿ.ಆರ್ಕ್‌ನಲ್ಲಿ 143, ಎಂಬಿಎ 4113, ಎಂಸಿಎಯಲ್ಲಿ 1870, ಎಂ.ಟೆಕ್‌ನಲ್ಲಿ 2932, ಎಂ.ಆರ್ಕ್‌ನಲ್ಲಿ 8, ಎಂಎಸ್ಸಿ ಎಂಜಿನಿಯರಿಂಗ್‌ನಲ್ಲಿ 14 ಹಾಗೂ  95 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿಗಳನ್ನು ಘೋಷಿಸಲಾಯಿತು.

ಬಿ.ಇ ಹಾಗೂ ಬಿ.ಟೆಕ್ ವಿಭಾಗದಲ್ಲಿ 20 ವಿದ್ಯಾರ್ಥಿಗಳು, ಎಂಬಿಎ ಕೋರ್ಸ್‌ನಲ್ಲಿ ಇಬ್ಬರು, ಬಿ.ಆರ್ಕ್, ಎಂಸಿಎದಲ್ಲಿ ತಲಾ ಒಬ್ಬರು, ಎಂ.ಟೆಕ್‌ನಲ್ಲಿ 44 ವಿದ್ಯಾರ್ಥಿಗಳು ಸಮಾರಂಭದಲ್ಲಿ ಚಿನ್ನದ ಪದಕಗಳ ಜೊತೆಗೆ ಪದವಿ ಪ್ರಮಾಣಪತ್ರ ಪಡೆದರು.

ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಅಭಿನವ ವಿ. ರಾವ್ 7 ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ಚಿನ್ನದ ಹುಡುಗರಾಗಿ ಹೊರಹೊಮ್ಮಿದರು.

ಬೆಂಗಳೂರಿನ ಆರ್‌ಎನ್‌ಎಸ್‌ಐಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯ ರಿಂಗ್ ವಿದ್ಯಾರ್ಥಿ ಫಾಲ್ಗುಣ ಪಿ. ಹಾಗೂ ಬೆಂಗಳೂರಿನ ಎಂ.ವಿ.ಜೆ. ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಶಂತನು ಚಕ್ರವರ್ತಿ ಅವರು ತಲಾ 6 ಚಿನ್ನದ ಪದಕ ಪಡೆದುಕೊಂಡರು.

ಬಿ.ಜಿ.ಎಸ್. ತಾಂತ್ರಿಕ ಸಂಸ್ಥೆಯ ಉಮೇಶ ಸಿ.ಎಸ್. ಅವರು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯ ರಿಂಗ್ ವಿಷಯದಲ್ಲಿ 5 ಚಿನ್ನದ ಪದಕ ಪಡೆದರು. ಬೆಂಗಳೂರಿನ ಡಿ.ಎಸ್.ಸಿ.ಇ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರತೀಕ್ ಸಂಗಲ್ ಹಾಗೂ ಬಿಐಟಿಯ ಮೆಕ್ಯಾನಿಕಲ್ ಎಂಜಿನಿಯ ರಿಂಗ್ ವಿದ್ಯಾರ್ಥಿ ಪ್ರದೀಪ ವೈಜನಾಥ ಬಿರಾದಾರ ಅವರು ತಲಾ 4 ಚಿನ್ನದ ಪದಕ ಪಡೆದರು.

ಮೂಡಬಿದರಿಯ ಎಂಐಟಿಇಯ ದೀಕ್ಷಾ ಅವರು ಎಂಬಿಎ ವಿಷಯದಲ್ಲಿ 4 ಚಿನ್ನದ ಪದಕ, ಬೆಂಗಳೂರಿನ ಬಿಎಂಎಸ್‌ಸಿಇ ಕಾಲೇಜಿನ ಎಂಸಿಎ ವಿದ್ಯಾರ್ಥಿ ಶಿವಾನಂದ ಸಾಗರ ಆರ್. ಹಾಗೂ ರಾಮನಗರ ಘೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಎಂಟೆಕ್‌ನ ಪವರ್ ಸಿಸ್ಟಮ್ ಎಂಜಿನಿಯರಿಂಗ್ ವಿಷಯದಲ್ಲಿ ತಲಾ 3 ಚಿನ್ನದ ಪದಕ ಪಡೆದರು.

ಸಮಾರಂಭಕ್ಕೂ ಮುನ್ನ ವಿಟಿಯು ಆವರಣದಲ್ಲಿ ವಿಶಿಷ್ಟ ವಿನ್ಯಾಸದ 36 ಮೀಟರ್ ಎತ್ತರದ ಗಡಿಯಾರ ಗೋಪುರವನ್ನು ರಾಜ್ಯಪಾಲ ಡಾ. ಎಚ್.ಆರ್. ಭಾರದ್ವಾಜ್ ಉದ್ಘಾಟಿಸಿದರು.

ಡಾ. ಪ್ರಫುಲ್ಲತಾ ಭಾರದ್ವಾಜ್, ಸಂಸದ ರಾಜೀವ್ ಚಂದ್ರಶೇಖರ, ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಡಾ. ಎಂ.ಆರ್.ಶ್ರೀನಿವಾಸನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT