ADVERTISEMENT

ನಾಗರಿಕ ಪ್ರದೇಶ ಗಡಿ ಪರಿಷ್ಕರಣೆಗೆ ನಿರ್ಧಾರ

ದಂಡುಪ್ರದೇಶ (ಕಂಟೋನ್ಮೆಂಟ್‌) ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 22 ಮೇ 2018, 7:43 IST
Last Updated 22 ಮೇ 2018, 7:43 IST

ಬೆಳಗಾವಿ: ಇಲ್ಲಿನ ದಂಡುಪ್ರದೇಶದಲ್ಲಿರುವ ನಾಗರಿಕ ಪ್ರದೇಶದ (ಸಿವಿಲ್‌ ಏರಿಯಾ) ಗಡಿಯನ್ನು ಪರಿಷ್ಕರಿಸಲು ಸೋಮವಾರ ನಡೆದ ದಂಡುಪ್ರದೇಶ (ಕಂಟೋನ್ಮೆಂಟ್‌) ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮರಾಠಾ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಮುಖ್ಯಸ್ಥ ಬ್ರಿಗೇಡಿಯರ್‌ ಗೋವಿಂದ ಕಾಲವಾಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮಂಡಳಿಯ ವರಮಾನವನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಯಿತು. ದಂಡುಮಂಡಳಿ ವ್ಯಾಪ್ತಿಯೊಳಗೆ ಬರುವ ನಾಗರಿಕ ಪ್ರದೇಶದ ಗಡಿಯನ್ನು ಪರಿಷ್ಕರಿಸಿ, ವಾಣಿಜ್ಯ ಉದ್ದೇಶಕ್ಕೆ ಬಳಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯಾ ಶಿವರಾಮ್‌ ಮಾತನಾಡಿ, ದಂಡು ಪ್ರದೇಶದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಹಲವು ದೊಡ್ಡ ದೊಡ್ಡ ಬಂಗ್ಲೆಗಳು ಇವೆ. ಇವುಗಳ ಮುಂದೆ ಸಾಕಷ್ಟು ಖುಲ್ಲಾ ಜಾಗ ಇದೆ. ಈ ಪ್ರದೇಶವನ್ನು ನಾಗರಿಕ ಪ್ರದೇಶವನ್ನಾಗಿ ಪರಿವರ್ತಿಸಿದರೆ, ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶ ಇದೆ. ಮಳಿಗೆಗಳನ್ನು ಬಾಡಿಗೆ ಆಧಾರದ ಮೇಲೆ ಹಂಚಿಕೆ ಮಾಡುವ ಮೂಲಕ ಒಂದಿಷ್ಟು ವರಮಾನ ಪಡೆದುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ದಂಡುಪ್ರದೇಶದ ವ್ಯಾಪ್ತಿಯೊಳಗೆ ಬರುವ ಮಹಾನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಜನಸಂಖ್ಯೆಯ ಪ್ರಮಾಣದಲ್ಲಿ ಬಹಳಷ್ಟು ಏರಿಕೆಯಾಗಿಲ್ಲ. ಆದರೆ, ಈ ಭಾಗದಲ್ಲಿ ಜನರ ಸಂಚಾರ ಹೆಚ್ಚಾಗಿದೆ. ಇದನ್ನು ಬಳಸಿಕೊಂಡು ವಾಣಿಜ್ಯ ಮಳಿಗೆಗಳನ್ನು ತೆರೆಯಬಹುದು ಎಂದರು.

ಕಳೆದ  ಏಪ್ರಿಲ್‌ 23ರಂದು ಈ ಕುರಿತು ಸಭೆ ನಡೆಸಲಾಗಿತ್ತು. ಬೆಂಗಳೂರಿನ ವಿಭಾಗೀಯ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರತ್‌ ಪಾಲ್‌, ದಂಡು ಪ್ರದೇಶ ಮಂಡಳಿಯ ಉಪಾಧ್ಯಕ್ಷ ರಿಜ್ವಾನ್‌ ಬೆಪಾರಿ ಸೇರಿದಂತೆ ಬಹುತೇಕ ಎಲ್ಲ ಸದಸ್ಯರು ಭಾಗವಹಿಸಿದ್ದರು. ದಂಡು ಪ್ರದೇಶದ ವ್ಯಾಪ್ತಿಯೊಳಗಿನ ಬಿ.ಸಿ ನಂಬರ್‌ 124 ಜಾಗವನ್ನು ನಾಗರಿಕ ಪ್ರದೇಶವಾಗಿ ಪರಿವರ್ತಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವುದನ್ನು ದಿವ್ಯಾ ಸಭೆಯ ಗಮನಕ್ಕೆ ತಂದರು.

ನಾಮಾಂಕಿತ ಸದಸ್ಯ, ಕರ್ನಲ್‌ ವಿಜಯ ಭಟ್‌ ಅವರು ಈ ಹಿಂದಿನ ಸಭೆಯಲ್ಲಿ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬದಿಂದ ಹೊರಗುಳಿದವರಿಗೆ, ಒಬ್ಬಂಟಿಯಾಗಿ ವಾಸಿಸುವವರಿಗೆ ಅಥವಾ ಸೈನಿಕರ ವಿಧವಾ ಮಹಿಳೆಯರಿಗೆ ಆಶ್ರಮ ನೀಡಲು ಈ ಜಾಗದಲ್ಲಿ ಮನೆಗಳನ್ನು ಕಟ್ಟಿಸಬಹುದು. ಈ ಜಾಗವನ್ನು ವಾಣಿಜ್ಯ ಬಳಕೆಗೆ ಬಳಸಲು ಕಾನೂನಿನಲ್ಲಿ ತೊಡಕುಗಳಿವೆ ಎಂದು ಅಪಸ್ವರ ಎತ್ತಿದ್ದರು ಎಂದು ದಿವ್ಯಾ ಸಭೆಗೆ ತಿಳಿಸಿದರು.

ಇದೇ ಅಭಿಪ್ರಾಯವನ್ನು ಚುನಾಯಿತ ಪ್ರತಿನಿಧಿಯಾದ ರಿಜ್ವಾನ್‌ ಬೆಪಾರಿ ಕೂಡ ಪ್ರತಿಪಾದಿಸಿದರು. ಮಂಡಳಿಯ ಹಣಕಾಸು ಸ್ಥಿತಿಯನ್ನು ಉತ್ತಮ ಪಡಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಿದರು.

ಮಂಡಳಿಯ ಮಾಜಿ ಉಪಾಧ್ಯಕ್ಷ ಸಾಜಿದ್‌ ಶೇಖ್‌ ಅವರು ಸಮಿತಿಯ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದರು. ಮಂಡಳಿಯ ಎಲ್ಲ ಚುನಾಯಿತ ಸದಸ್ಯರಿಗೆ ಮಾಹಿತಿ ನೀಡದೇ ಇಂತಹದೊಂದು ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಎಂದು ಹೇಳಿದರು.

ಸರ್ಕಾರಕ್ಕೆ ಪ್ರಸ್ತಾವ: ದಂಡು ಮಂಡಳಿಯ ವ್ಯಾಪ್ತಿಯೊಳಗಿನ ಕೆಲವೊಂದು ನಿರ್ದಿಷ್ಟ ಜಾಗಗಳ ನಾಗರಿಕ ಪ್ರದೇಶದ ಗಡಿಯನ್ನು ಪರಿಷ್ಕರಿಸುವ ಸಂಬಂಧ ಕೈಗೊಳ್ಳಲಾದ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು. ಸರ್ಕಾರ ಕೈಗೊಳ್ಳುವ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲು ಮಂಡಳಿ ನಿರ್ಣಯ ಕೈಗೊಂಡಿತು.

ಅನಿಲ ಬೆನಕೆಗೆ ಸನ್ಮಾನ: ಬೆಳಗಾವಿ ಉತ್ತರ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಅನಿಲ ಬೆನಕೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.