ADVERTISEMENT

ನೀರಾವರಿ ನಿಗಮದ ಕಚೇರಿಗೆ ರೈತರಿಂದ ಬೀಗ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 6:55 IST
Last Updated 14 ಸೆಪ್ಟೆಂಬರ್ 2011, 6:55 IST

ಚಿಕ್ಕೋಡಿ: ಕಬ್ಬೂರ ಹಂಚು ಕಾಲುವೆ ಮೂಲಕ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ನೀರು ಸರಬ ರಾಜು ಮಾಡುವಂತೆ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರಾಯಬಾಗ ತಾಲ್ಲೂಕಿನ ರೈತರು ಮಂಗಳವಾರ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

 ನಿಗಮದ ಮುಖ್ಯ ಎಂಜಿನಿಯರ್  ಎ.ಎಲ್.ಜಾನವೇಕರ್ ಅವರು  ಭರವಸೆ ನೀಡಿದ ನಂತರ  ಮಂಗಳವಾರ ಸಂಜೆ  ರೈತರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ರಾಯಬಾಗ ತಾಲ್ಲೂಕಿನ ಖಟಕ ಭಾವಿ, ನಿಪನಾಳ, ಮಂಟೂರ ಮತ್ತು ದೇವಾಪುರ ಹಟ್ಟಿ ಗ್ರಾಮಗಳಿಗೆ ಕಬ್ಬೂರ ಹಂಚು ಕಾಲುವೆ ಮೂಲಕ 2011- 12ನೇ ಸಾಲಿನಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡಿಲ್ಲ. ಇದರಿಂದ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ಸಾವಿರಾರು ರೂಪಾಯಿ ಖರ್ಚುವೆಚ್ಚ ಮಾಡಿ ಬೆಳೆಸಿದ ಬೆಳೆಗಳು ನೀರಿಲ್ಲದೇ ಕಮರುತ್ತಿದೆ.  ಕಾಲುವೆ ಮೂಲಕ ತಮ್ಮ ಗ್ರಾಮಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ನಾಲ್ಕು ಗ್ರಾಮಗಳ ನೂರಾರು ಕೃಷಿಕರು ಸೆ.5 ರಿಂದ ಕರ್ನಾಟಕ ನೀರಾವರಿ ನಿಗಮದ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ವಿಭಾಗ ನಂ-4ರ ಕಾರ್ಯುನಿರ್ವಾಹಕ  ಎಂಜಿನಿಯರ್  ಕಚೇರಿ ಎದುರು ಧರಣಿ ಕೈಗೊಂಡಿದ್ದರು.

ಎಂಟು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದರೂ ಕಾಲುವೆ ಮೂಲಕ ಕೊನೆಯ ಅಂಚಿನ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿರಲಿಲ್ಲ.   ಕಾಲುವೆಯ 38ನೇ ಕಿ.ಮೀ. ವರೆಗೆ ನೀರು ಹರಿಸಲಾಗುತ್ತಿದೆ ಎಂದು ಸುಳ್ಳು ಹೇಳಿಕೆಗಳನ್ನೇ ನೀಡುತ್ತಿದ್ದಾರೆ ಎಂದು ರೈತರು ದೂರಿದ್ದರು.

ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯೂ ಆಗಿಲ್ಲ, ಕಾಲುವೆಯಿಂದ ನೀರು ಬಿಡುತ್ತಿಲ್ಲ ಹೀಗಾಗಿ ಸಾವಿರಾರು ಎಕರೆ ಪ್ರದೇಶ ಗಳಲ್ಲಿ ಬೆಳೆದ ಗೋವಿನಜೋಳ, ಕಬ್ಬು, ಸೋಯಾಅವರೆ,ಹುರಳಿ ಮುಂತಾದ ಬೆಳೆಗಳು ಒಣಗಿ ಹೋಗುತ್ತಿದ್ದು, ಕೃಷಿಕರಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಲಿದೆ~ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡಿದ್ದರು.

ಈರಪ್ಪ ರೇವಪ್ಪ ಸದಲಗೆ, ನಿಂಗಪ್ಪ ಮಲ್ಲಪ್ಪ ಮಗದುಮ್ಮ, ರಾಮಚಂದ್ರ ಅಣ್ಣಪ್ಪ ಮಿರಜೆ, ರೇವಪ್ಪ ಬಸಪ್ಪ ಪಾಟೀಲ, ಸತ್ಯಪ್ಪ ಮಲ್ಲಪ್ಪ ದೇಸಾಯಿ, ರಾಮಗೌಡಾ ಪಾಟೀಲ, ಎ.ಕೆ.ಸೊಲ್ಲಾಪುರೆ, ಸುರೇಶ ಜಾಬನ್ನವರ, ಶಿವಾನಂದ ಬುಸಾರಿ, ನಿಂಗಪ್ಪಾ ಮೆಳವಂಕಿ, ಸುಭಾಷ ಬೆಟಗೇರಿ, ಆರ್.ಎ.ದೇಸಾಯಿ, ರೇವಪ್ಪ ಪಾಟೀಲ    ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.