ADVERTISEMENT

ನೀರಿಗಾಗಿ ಮಹಿಳೆಯರಿಂದ ಖಾಲಿ ಕೊಡ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 7:07 IST
Last Updated 18 ಮಾರ್ಚ್ 2014, 7:07 IST
ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಮಹಿಳೆಯರು ಚಿಕ್ಕೋಡಿ ತಾಲ್ಲೂಕಿನ ಬಂಬಲವಾಡ ಗ್ರಾ.ಪಂ. ವ್ಯಾಪ್ತಿಯ ಕುಂಗಟೊಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಮಹಿಳೆಯರು ಚಿಕ್ಕೋಡಿ ತಾಲ್ಲೂಕಿನ ಬಂಬಲವಾಡ ಗ್ರಾ.ಪಂ. ವ್ಯಾಪ್ತಿಯ ಕುಂಗಟೊಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.   

ಚಿಕ್ಕೋಡಿ: ಸಮರ್ಪಕ ಕುಡಿಯುವ ನೀರು ಮತ್ತು ಕೊಟಬಾಗಿ ಏತ ನೀರಾವರಿ ಯೋಜನೆಯಡಿ ಕಾಲುವೆ ಕೊನೆಯಂಚಿನ ಗ್ರಾಮಗಳಿಗೂ ನಿಯಮಿತವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕುಂಗಟೊಳ್ಳಿ ಗ್ರಾಮದ ನೂರಾರು ಮಹಿಳೆಯರು ಬಂಬಲವಾಡ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. 

‘ಕಳೆದ ಮೂರು ತಿಂಗಳುಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಒಂದು ಕೊಡ ನೀರು ತರಲು ಕಿ.ಮೀ.ನಷ್ಟು ಅಲೆಯುವಂತಾ­ಗಿದೆ. ಗ್ರಾಮದಲ್ಲಿ ಕೊರೆಯಿಸಲಾಗಿರುವ ಕೊಳವೆ ಬಾವಿಗಳಿಗೆ ಸಾಕಷ್ಟು ನೀರಿಲ್ಲ, ಸಾರ್ವಜನಿಕರಿಗೆ ಪ್ರತಿ ದಿನ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸುವಂತೆ ಕೇಳಿದರೆ ಗ್ರಾಮ ಪಂಚಾಯ್ತಿಯವರೂ ಸಕಾರಾ­ತ್ಮಕವಾಗಿ ಸ್ಪಂದಿಸುತ್ತಿಲ್ಲ.  ಇದರಿಂದ ಗ್ರಾಮದ ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ’ ಎಂದು ರಾಜಶ್ರೀ ಬ್ಯಾಳಿ ಮತ್ತು ಮಹಾದೇವಿ ಬ್ಯಾಳಿ ತಮ್ಮ ಅಳಲು ತೋಡಿಕೊಂಡರು.

‘ಕುಂಗಟೋಳಿ ಗ್ರಾಮದಲ್ಲಿ ಸಮ­ರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ಹಲವಾರು ಬಾರಿ ಗ್ರಾ.ಪಂ. ಅಧಿಕಾರಿ ಬಳಿ ಮತ್ತು ತಾಲ್ಲೂಕು ದಂಡಾಧಿಕಾರಿ ಬಳಿ ಮನವಿ ಮಾಡಿ­ಕೊಂ­ಡರೂ ಪ್ರಯೋಜನ­ವಾಗಿಲ್ಲ.  ಇಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಮುಂದೆ ಬರು­ತ್ತಿಲ್ಲ, ಅದಕ್ಕೆ ತಮ್ಮ ಸಮಸ್ಯೆ ಈಡೇರದಿದ್ದರೆ ಮುಂಬರುವ ಲೋಕ­ಸಭೆ ಚುನಾವಣೆಯನ್ನು ಬಹಿಷ್ಕರಿಸ­ಲಾಗುತ್ತದೆ ’ ಎಂದು ಗ್ರಾಮಸ್ಥರು ಮಾರುತಿ ಸೊಲ್ಲಾಪೂರೆ ಎಚ್ಚರಿಕೆ ನೀಡಿದರು.

‘ಚಿಕ್ಕೋಡಿ ತಾಲ್ಲೂಕಿನ ಪೂರ್ವ ಭಾಗ ಸಂಪೂರ್ಣವಾಗಿ ಮಳೆಯಾಶ್ರಿತ ಪ್ರದೇಶವಾಗಿರುವದರಿಂದ ಬಂಬಲ­ವಾಡ ಗ್ರಾ.ಪಂ. ವ್ಯಾಪ್ತಿಯ ಕುಂಗಟೊಳ್ಳಿ ಗ್ರಾಮಕ್ಕೆ ಸರ್ಕಾರ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕೊಟಬಾಗಿ ಏತ ನೀರಾವರಿ ಯೋಜನೆಯ ಕಾಲುವೆ ಇದ್ದರೂ ಕೂಡಾ ಕಳೆದ ಹತ್ತು ವರ್ಷಗಳಿಂದ ಕಾಲುವೆಗೆ ನೀರು ಹರಿದಿಲ್ಲ, ಹೀಗಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಕೊಟಬಾಗಿ ಏತ ನೀರಾವರಿ ಯೋಜನೆಯ ಮೂಲಕ ಕಾಲುವೆಗೆ ನೀರನ್ನು ಹರಿಸಬೇಕು. ಇಲ್ಲದಿದ್ದರೆ ಬಂಬಲವಾಡ ಹಾಗೂ ಕುಂಗಟೊಳ್ಳಿ ಗ್ರಾಮದಲ್ಲಿ ನೀರಿಗೂ ಹಾಹಾಕಾರ ಉಂಟಾಗಲಿದೆ’ ಎಂದು ಎಂದು ಪ್ರತಿಭಟನಾನಿರತ ಮಹಿಳೆಯರು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.