ADVERTISEMENT

ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಮಾ. 1ರಿಂದ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 9:45 IST
Last Updated 26 ಫೆಬ್ರುವರಿ 2012, 9:45 IST

ಚಿಕ್ಕೋಡಿ: ಆಚಾರ್ಯ ವಿದ್ಯಾಸಾಗರ ಮುನಿ ಮಹಾರಾಜರು ಸೇರಿದಂತೆ 29 ಜನ ತ್ಯಾಗಿಗಳ ಜನ್ಮ ಸ್ಥಾನವಾಗಿರುವ ತಾಲ್ಲೂಕಿನ ಸದಲಗಾ ಪಟ್ಟಣದ ಗುಂಪಾ ಮಂದಿರ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಭಗವಾನ ಚಂದ್ರಪ್ರಭು ತೀರ್ಥಂಕರರ ಚತುರ್ಮುಖ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಮಾರ್ಚ್  1 ರಿಂದ 6ರವರೆಗೆ ವಿಧಿವಿಧಾನಪೂರ್ವಕವಾಗಿ ವಿಜೃಂಭಣೆಯಿಂದ ಜರುಗಲಿದೆ.

ಆಚಾರ್ಯ ದೇವಸೇನ ಮಹಾರಾಜರು, ಆರ್ಯಿಕಾ ಸುವೃತಾ ಮಾತಾಜಿ, ಆರ್ಯಿಕಾ ಅನಂತಮತಿ ಮಾತಾಜಿ, ಆರ್ಯಿಕಾ ಸುಮತಿಮತಿ ಮಾತಾಜಿ, ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮತ್ತು ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಪಂಚಕಲ್ಯಾಣಕ ಪ್ರತಿಷ್ಠಾನ ಮಹೋತ್ಸವ ನೇರವೇರಲಿದೆ.

  ಮಾ.1 ರಂದು ಯಜಮಾನದ ಆಗಮನ, ಸಾಂಗಲಿಯ ಸತೀಶ ಚೌಧರಿ ಅವರಿಂದ ಮಂಟಪ ಉದ್ಘಾಟನೆ, ಕಲಶಸ್ಥಾಪನೆ, ಜಿನಬಿಂಬ ಸ್ಥಾಪನೆ, ಅಭಿಷೇಕ, ಧ್ವಜಾರೋಹಣ, 2 ರಂದು ಮಹಾಶಾಂತಿ ಮಂತ್ರ, ದೇವ, ಶಾಸ್ತ್ರ ಮತ್ತು ಗುರುಪೂಜೆ, ಗರ್ಭಕಲ್ಯಾಣಕ ಪೂಜೆ, ಮಂದಿರದಲ್ಲಿ ಮಹಾಯಾಗ ಮಂಡಲ ಆರಾಧನೆ, 3 ರಂದು ಲಘು ಶಾಂತಿಕ, ಮಂಗಲ ಕುಂಭಾನಯನ, ಭಗವಾನರ ಜನ್ಮ ಕಲ್ಯಾಣಕ ಮಹೋತ್ಸವ ಮತ್ತು ಪೂಜಾ ವಿಧಿ, 4 ರಂದು ದೀಕ್ಷಾ ಕಲ್ಯಾಣಕ ಪೂಜಾ ವಿಧಿ, ಜಿನಪ್ರತಿಮೆಗಳಿಗೆ ಮಂಗಲ ಸ್ನಾನ, 5 ರಂದು ಚತುರ್ಮುಖ ಜಿನಬಿಂಬ ಸ್ಥಾಪನೆ, ಕೇವಲಜ್ಞಾನ ಕಲ್ಯಾಣಕ ವಿಧಿ, ಮುಂಜಿ ಬಂಧನ ಹಾಗೂ 6 ರಂದು ನಿರ್ವಾಣ ಕಲ್ಯಾಣಕ ಪೂಜೆ ಸೇರಿದಂತೆ ಮುನಿ ಮಹಾರಾಜರು, ಮಾತಾಜಿಯವರ ಆಶಿರ್ವಚನ, ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ ನಡೆಯಲಿವೆ.

ಸದಲಗಾ ಪಟ್ಟಣದ ಲತಾ ಮತ್ತು ರವೀಂದ್ರ ಬಾಬಾಸಾಹೇಬ ಪ್ರಧಾನ ದಂಪತಿ ಮಹೋತ್ಸವದ ಇಂದ್ರ ಇಂದ್ರಾಣಿ(ಯಜಮಾನ ದಂಪತಿ)ಯರಾಗಿ ವಿಧಿವಿಧಾನಗಳನ್ನು ಪೂರೈಸಲಿದ್ದಾರೆ. ತೀರ್ಥಂಕರ ಮಾತಾಪಿತರಾಗಿ ವಿನಯಶ್ರೀ ಮತ್ತು ಪ್ರಕಾಶ ಪಾಟೀಲ(ಗವಳಿ) ದಂಪತಿ,  ಕುಬೇರರಾಗಿ ಸುಶೀಲಾ ಮತ್ತು ಕಲ್ಲಪ್ಪಾ ಚಿಪ್ಪಾಡಿ(ಮಹಿಶವಾಡಗಿ) ದಂಪತಿ, ಈಶಾನ್ಯ ಇಂದ್ರರಾಗಿ ಸಾಂಗಲಿಯ ಪ್ರಿಯಾಂಕಾ ಮತ್ತು ಸತೀಶ ಪಾಟೀಲ ದಂಪತಿ, ಸುವರ್ಣ ಸೌಭಾಗ್ಯವತಿಯರಾಗಿ ಪೂನಮ್ ಮತ್ತು ಸುನೀಲ ಪ್ರಧಾನ ದಂಪತಿ ಹಾಗೂ ನೇಹಾ ಮತ್ತು ಸಚೀನ ಬಿಂದಗೆ ದಂಪತಿ ಪ್ರಥಮ ದಿನದ ಮಂಗಳ ಕಲಶ ವಿಧಿಗಳನ್ನು ನೇರವೇರಿಸಲಿದ್ದಾರೆ. 

ನೂತನವಾಗಿ ನಿರ್ಮಿಸಿರುವ ಮಾನಸ್ಥಂಭವನ್ನು ಸದಲಗಾದ ಮದನಾವಳಿ ಪ್ರಧಾನ, ಮಂದಿರದ ಸಭಾಗೃಹವನ್ನು ಶ್ರೀದೇವಿ ಪಾಟೀಲ (ಗವಳಿ), ಪ್ರವಚನ ಮಂದಿರವನ್ನು ಮುಂಬಯಿನ ಜಯೇಶ ಶಹಾ ಹಾಗೂ ಜಿನಬಿಂಬವನ್ನು ದಿಲ್ಲಿಯ ಸುನೀಲ ಜೈನ ಹಾಗೂ ಮಂದಿರದ ಗರ್ಭಗುಡಿಯನ್ನು ಸಮಸ್ತ ಶ್ರಾವಕ-ಶ್ರಾವಕಿಯರ ಧನಸಹಾಯದೊಂದಿಗೆ ನಿರ್ಮಿಸಲಾಗಿದೆ. ಗೋರೇಗಾಂವದ ಅರವಿಂದ ಶಹಾ ಶಿಖರವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷ ಡಿ.ಎಸ್.ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಪಾಧ್ಯಕ್ಷ ಆರ್.ಟಿ.ತವನಕ್ಕೆ, ಮಹಾವೀರ ಪಾಟೀಲ, ಶ್ರೀಕಾಂತ ಉಗಾರೆ, ಬಾಳಾಸಾಹೇಬ ಪಾಟೀಲ, ರಾಯಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.