ADVERTISEMENT

ಪಿಡಿಒಗೆ ಘೇರಾವ್, ಮೂರು ತಾಸು ಧರಣಿ

ಕುಡಿಯುವ ನೀರಿಗಾಗಿ ನೀರೆಯರಿಂದ ಖಾಲಿ ಕೊಡಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 6:08 IST
Last Updated 5 ಏಪ್ರಿಲ್ 2013, 6:08 IST
ಕುಡಿಯವ ನೀರು ಪೂರೈಕೆಗೆ ಆಗ್ರಹಿಸಿ ಬೈಲಹೊಂಗಲ ಸಮೀಪದ ದುಂಡನಕೊಪ್ಪ ಗ್ರಾಮಸ್ಥರು ಗುರುವಾರ ರುದ್ರಾಪುರ ಗ್ರಾ.ಪಂ. ಎದುರು ಖಾಲಿ ಕೊಡಗಳೊಂದಿಗೆ ಧರಣಿ ನಡೆಸಿದರು.
ಕುಡಿಯವ ನೀರು ಪೂರೈಕೆಗೆ ಆಗ್ರಹಿಸಿ ಬೈಲಹೊಂಗಲ ಸಮೀಪದ ದುಂಡನಕೊಪ್ಪ ಗ್ರಾಮಸ್ಥರು ಗುರುವಾರ ರುದ್ರಾಪುರ ಗ್ರಾ.ಪಂ. ಎದುರು ಖಾಲಿ ಕೊಡಗಳೊಂದಿಗೆ ಧರಣಿ ನಡೆಸಿದರು.   

ಬೈಲಹೊಂಗಲ: ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ, ಸಮೀಪದ ದುಂಡನಕೊಪ್ಪ ಗ್ರಾಮಸ್ಥರು ರುದ್ರಾಪುರ ಪಿ.ಡಿ.ಓ.ಗೆ ಘೇರಾವ್ ಹಾಕಿ, ಮೂರುವರೆ ತಾಸು ಖಾಲಿ ಕೊಡಗಳ ಸಮೇತ ಧರಣಿ ನಡೆಸಿದ ಘಟನೆ ಗುರುವಾರ ನಡೆದಿದೆ.

ಒಂದು ಸಾವಿರ ಜನಸಂಖ್ಯೆ ಹೊಂದಿರುವ ದುಂಡನಕೊಪ್ಪ ಗ್ರಾಮ ರುದ್ರಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದೆ. ಮೂರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು ಗ್ರಾಮದಲ್ಲಿದ್ದ ಎರಡು ಕೈಪಂಪ್ (ಕೈ ಕೊಳವೆ ಬಾವಿ) ದುರಸ್ತಿ ಮಾಡಿಸುವಂತೆ ಪಿ.ಡಿ.ಒ.ಗೆ ಹಲವಾರು ಬಾರಿ ಮನವಿ ಮಾಡಿದರೂ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಇಲ್ಲಿಯವರೆಗೆ ಹೊಲಗಳಲ್ಲಿನ ಕೊಳವೆ ಬಾವಿಗಳನ್ನು ಆಶ್ರಯಿಸಲಾಗಿತ್ತು. ಹೊಲಗಳಲ್ಲಿನ ಕೊಳವೆ ಬಾವಿಗಳಲ್ಲೂ ನೀರಿಲ್ಲದೇ ರೈತರು ಕಂಗಾಲಾಗಿದ್ದು, ಗ್ರಾಮಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲನ್ನು ತೋಡಿಕೊಂಡರು.

ದನಕರುಗಳಿಗೆ ನೀರು ಅಪರೂಪ ಎನ್ನುವ ಮಟ್ಟಿಗೆ ಪರಿಸ್ಥಿತಿ ಗಂಭೀರವಾಗಿದ್ದರೂ ತಾಲ್ಲೂಕು ಹಾಗೂ ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗದ ಸಮಸ್ಯೆ ಕಡೆಗೆ ತಿರುಗಿ ನೋಡುತ್ತಿಲ್ಲ. ಜನಪ್ರತಿನಿಧಿಗಳು ಚುನಾವಣಾ ರಂಗಿನಲ್ಲಿದ್ದಾರೆ. ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಕುಡಿಯುವ ನೀರಿನ ಸಮಸ್ಯೆ ಕುರಿತು ನಿರ್ಲಕ್ಷ ತೋರಿದ್ದಾರೆ ಎನ್ನುವುದು ಮಹಿಳೆಯರ ಆರೋಪವಾಗಿದೆ.

ಪಿ.ಡಿ.ಒ. ಚಂದ್ರಮೋಹನ ಮೌಳಿ ಪ್ರತಿಭಟನಾ ಕಾರರಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವು ದಾಗಿ ಹೇಳಿದರೂ, ದಿನನಿತ್ಯ ಹೀಗೆಯೇ ಹೇಳುತ್ತೀರಿ ಏಕೆ?  ಮೂರುವರೆ ತಾಸು ಧರಣಿ ನಡೆಸಿದರೂ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸ್ಥಳಕ್ಕೆ ಆಗಮಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು.
ಶುಕ್ರವಾರ ಕುಡಿಯುವ ನೀರು ವ್ಯವಸ್ಥೆಯಾಗದೇ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಹಾಂತೇಶ ಗೌಡರ, ಶಂಕರಗೌಡ ಪಾಟೀಲ, ಬಸವರಾಜ ಮಾಳಪ್ಪನವರ, ವೆಂಕಪ್ಪ ನಾಯ್ಕರ, ಮಹಾಂತೇಶ ಬೈಲನವರ, ಶೋಭಾ ಗೌಡರ, ಶೇಖಪ್ಪ ತಿರಕಪ್ಪನವರ, ಗೌಡಪ್ಪ ಪರಗನ್ನವರ, ಸುಶೀಲಾ ಸುಂಕದ, ಪಾರವ್ವ ಗೌಡರ, ಸುವರ್ಣ ಗೊರವನಕೊಳ್ಳ, ಯಮನಪ್ಪ ಕೆಂಚನ್ನವರ, ಬಸವ್ವ ಮಾದರ, ಕಮಲವ್ವ ಮಾದರ ಹಾಗೂ ದುಂಡನಕೊಪ್ಪ ಗ್ರಾಮದ ಹಲವರು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.