ADVERTISEMENT

ಬರಪೀಡಿತ ತಾಲ್ಲೂಕು ಘೋಷಣೆಗೆ ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 10:15 IST
Last Updated 23 ಜುಲೈ 2012, 10:15 IST

ಗೋಕಾಕ: ಗೋಕಾಕ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸುವಂತೆ ಆಗ್ರಹಿಸಿ ಬಿಜೆಪಿ ಬೆಳಗಾವಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗೋವಿಂದ ಕೊಪ್ಪದ ಮುಖ್ಯ ಮಂತ್ರಿ ಅವರಿಗೆ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಇತ್ತೀಚೆಗೆ ಹುಬ್ಬಳ್ಳಿ ಆಗಮಿಸಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಗೋವಿಂದ ಕೊಪ್ಪದ ಅವರು, ತಾಲ್ಲೂಕಿನ ಒಟ್ಟು 88,550 ಹೆಕ್ಟೇರ್ ಪ್ರದೇಶದ ಪೈಕಿ ಕೇವಲ 42,644 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮುಂಗಾರು ಬಿತ್ತನೆ ಆಗಿದೆ. ಇನ್ನುಳಿದ 34,666 ಹೆಕ್ಟರ್ ಪ್ರದೇಶದಲ್ಲಿ ಕಬ್ಬಿನ ಬೆಳೆ ಇದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ನಿರೀಕ್ಷಿತ ಮಳೆ ಸುರಿಯದ್ದರಿಂದ ಕನಿಷ್ಠ 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಕಬ್ಬು ನೀರಿನ ಕೊರತೆಯಿಂದ ಸಂಪೂರ್ಣ ಹಾಳಾಗಿದೆ.

ಬರ ಪೀಡಿತ ತಾಲ್ಲೂಕು ಎಂದು ಘೋಷಿಸುವುದರೊಂದಿಗೆ, ಹಾಳಾಗಿರುವ ಕಬ್ಬು ಹಾಗೂ ಇತರೆ ಬೆಳೆಗಳಿಗೆ ಸೂಕ್ತ ಪರಿಹಾರ ಧನ ಘೋಷಿಸಿ, ವಿತರಿಸಬೇಕು. ರೈತರ ಸಾಲವನ್ನು ಬಡ್ಡಿ ಸಮೇತವಾಗಿ ಪೂರ್ತಿಯಾಗಿ ಮನ್ನಾ ಮಾಡಬೇಕು, ಕೂಡಲೇ ಗೋಶಾಲೆಗಳನ್ನು ಆರಂಭಿಸಿ ಕುಡಿಯುವ ನೀರು ಪೂರೈಕೆಗೆ ಅನುದಾನ ಬಿಡುಗಡೆಗೊಳಿಸಬೇಕು. ಕೃಷಿಕರಿಗೆ ವಿತರಸಿಲಾಗುತ್ತಿರುವ ಬಡ್ಡಿ ರಹಿತ ಸಾಲದ ಮೊತ್ತದ ಮಿತಿಯನ್ನು ಒಂದರಿಂದ ರೂ 5 ಲಕ್ಷಕ್ಕೆ  ಏರಿಕೆ ಮಾಡಬೇಕು. ಬೆಳೆ ವಿಮೆ ತುಂಬಲು ನಿಗದಿ ಪಡಿಸಿರುವ ಕೊನೆಯ ದಿನಾಂಕವನ್ನು ಮತ್ತೊಂದು ತಿಂಗಳು ವಿಸ್ತರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ADVERTISEMENT

ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರುನಾಥ ಹೊಂಗಲ ಮತ್ತು ಬಸವರಾಜ ಅರಳಿಕಟ್ಟಿ, ಕಾರ್ಯಕರ್ತರಾದ ವಿರೂಪಾಕ್ಷ ಯಲಿಗಾರ, ಬಸು ಹಿರೇಮಠ, ಸತ್ಯಪ್ಪ ಗಡಾದ, ಮುತ್ತೆಪ್ಪ ನಾಂವಿ, ಮಾರುತಿ ಮಗದುಮ್, ಲಕ್ಷ್ಮಣ ಚೆನ್ನಾಳ, ಬನಪ್ಪ ಮಳಿವಡೇರ ಮತ್ತು ಶಿವಾನಂದ ದೇಸಾಯಿ ಉಪಸ್ಥಿತರಿದ್ದರು.

ಪ್ರತಿಭಟನೆ ಇಂದು

ಗೋಕಾಕ: ಮುಂಗಾರು ಮಳೆ ವೈಫಲ್ಯತೆಯ ಹಿನ್ನೆಲೆಯಲ್ಲಿ ಗೋಕಾಕ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಇದೇ 23ರಂದು ನಗರದ ತಹಶೀಲ್ದಾರ ಕಾರ್ಯಾಲಯದ ಎದುರು ಪಕ್ಷಾತೀತವಾಗಿ ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಜಾತ್ಯತೀತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೊಕ ಪೂಜಾರಿ ಹೇಳಿದರು.

ಗೋಕಾಕ ತಾಲ್ಲೂಕು ಕೇಂದ್ರ ಅತಿ ದೊಡ್ಡ ತಾಲ್ಲೂಕಾಗಿದ್ದರೂ ಸಹ ಬರ ಪೀಡಿತ ಪ್ರದೇಶ ಎಂದು ಘೋಷಿಸುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ಆಪಾದಿಸಿದರು. ಪಕ್ಷದ ಮುಖಂಡ ಎಲ್. ಬಿ.ಹುಳ್ಳೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.