ಚಿಕ್ಕೋಡಿ: 2010-11ನೇ ಸಾಲಿನ ಹಂಗಾಮಿನಲ್ಲಿ ಪೂರೈಸಲಾದ ಕಬ್ಬಿನ ಅಂತಿಮ ಕಂತು ಪ್ರತಿಟನ್‌ಗೆ ರೂ. 100 ಮತ್ತು 2011-12ನೇ ಸಾಲಿನ ಹಂಗಾಮಿನಲ್ಲಿ ಪೂರೈಸಲಾದ ಕಬ್ಬಿಗೆ ಎರಡನೇ ಕಂತು ಪ್ರತಿ ಟನ್‌ಗೆ ರೂ. 200ನ್ನು ಏಕಕಾಲಕ್ಕೆ ತ್ವರಿತವಾಗಿ ಆಯಾ ರೈತರಿಗೆ ಸಂದಾಯ ಮಾಡಬೇಕು ಎಂದು ಒತ್ತಾಯಿಸಿ ಸ್ವಾಭಿಮಾನಿ ರೈತ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಮಂಗಳವಾರ ಬೃಹತ್ ಬೈಕ್ ರ‌್ಯಾಲಿ ನಡೆಸಿದರು.
ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಪ್ರತಿಟನ್ ಕಬ್ಬಿಗೆ ರೂ. 2200 ಬಿಲ್ ನೀಡಿವೆ. ಆದರೆ, ಇಲ್ಲಿನ ಸಕ್ಕರೆ ಕಾರ್ಖಾನೆಗಳು 2010-11ನೇ ಸಾಲಿನ ಅಂತಿಮ ಕಂತು ಮತ್ತು 2011-12ನೇ ಸಾಲಿನ ದ್ವಿತೀಯ ಕಂತುಗಳನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ. ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ಅನಾವೃಷ್ಟಿಯಿಂದ ಕೃಷಿಕರು ಕಂಗಾಲಾಗಿದ್ದಾರೆ. ರಸಗೊಬ್ಬರ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಭೂಮಿ ಸಾಗುವಳಿ ಮಾಡುವುದೇ ದುಬಾರಿಯಾಗಿದೆ. ಹೀಗಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹಿತದೃಷ್ಟಿಯಿಂದ ಕೂಡಲೇ ಬಾಕಿ ಬಿಲ್‌ಗಳನ್ನು ಜಮಾ ಮಾಡಬೇಕು. 15 ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಬೆಳಿಗ್ಗೆ ಬೇಡಕಿಹಾಳದ ಸರ್ಕಲ್‌ದಲ್ಲಿ ರೈತ ಮುಖಂಡರಾದ ಬಾವಾನ ಸೌಂದತ್ತಿಯ ಈರಗೌಡ ಪಾಟೀಲ ಮತ್ತು ಆದಿನಾಥ ಹೇಮಗಿರೇ ಬೈಕ್ ರ‌್ಯಾಲಿಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ರ‌್ಯಾಲಿ ಬೇಡಕಿಹಾಳದ ವೆಂಕಟೇಶ್ವರ ಪಾವರ್ ಪ್ರಾಜೆಕ್ಟ್, ಚಿಕ್ಕೋಡಿಯ ದೂಧಗಂಗಾ ಕೃಷ್ಣಾ ಸಕ್ಕರೆ ಕಾರ್ಖಾನೆ ಹಾಗೂ ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ತೆರಳಿ ಮನವಿ ಸಲ್ಲಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಪಂಕಜ ತಿಪ್ಪನ್ನವರ, ತಾತ್ಯಾಸಾಬ ಬಸನ್ನವರ, ಅಣ್ಣಾಸಾಬ ಜಂಗಟೆ, ರಾಜು ಖಿಚಡೆ, ರಮೇಶ ಪಿ.ಪಾಟೀಲ, ಸಂಭಾಜಿ ಪಾಟೀಲ, ಭರತ ನಸಲಾಪುರೆ, ರಾಹುಲ್ ಘಾಟಗೆ, ಸುಭಾಷ ನಾವಲಗೇಕರ, ಅನಿಲ ಯಡೂರೆ, ಚನ್ನಪ್ರಭು ಬಳ್ಳೋರ್ಗಿ, ರಾಮಗೌಡ ಪಾಟೀಲ, ಮಾರುತಿ ಮಲ್ಹಾರಿ, ಬಸಗೌಡ ಪಾಟೀಲ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಡಿವೈಎಸ್‌ಪಿ ಎಚ್. ಎನ್. ಅಮರಾಪೂರ ಮಾರ್ಗದರ್ಶನ ದಲ್ಲಿ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.