ADVERTISEMENT

ಬೆಳಗಾವಿಯಲ್ಲಿ ಮುಂಗಾರು ಮಳೆ ಸಂಭ್ರಮ

ತುಂಬಿ ಹರಿದ ಹಳ್ಳ–ಕೊಳ್ಳ l ಕೆಲವೆಡೆ ವಾಹನ ಸಂಚಾರ ವ್ಯತ್ಯಯ l ಹೊಲಗಳಲ್ಲಿ ನಿಂತ ನೀರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 4:05 IST
Last Updated 11 ಜೂನ್ 2018, 4:05 IST

ಬೆಳಗಾವಿ: ಜಿಲ್ಲೆಯಾದ್ಯಂತ ಮೃಗಶಿರ ಮಳೆ ಜೋರು ಹಿಡಿದಿದ್ದು, ಭಾನುವಾರ ದಿನವಿಡೀ ಸುರಿಯಿತು. ಜಿಟಿಜಿಟಿ ಮಳೆ ಹಾಗೂ ಚಳಿ ಗಾಳಿಯು ಮುಂಗಾರು ಸಂಭ್ರಮದ ದರ್ಶನ ಮಾಡಿಸಿತು. ಶನಿವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿದ್ದ ಮಳೆಯು ಭಾನುವಾರ ಸಂಜೆಯವರೆಗೆ ಸುರಿಯಿತು. ಮಳೆಯ ಅಬ್ಬರಕ್ಕೆ ಕೆಲವು ಕಡೆ ವಿದ್ಯುತ್‌ ಕಂಬಗಳು ಹಾಗೂ ಮರಗಳು ಧರೆಗೆ ಉರುಳಿವೆ.

ಇಲ್ಲಿನ ಶಹಾಪುರ, ವಡಗಾಂವದಲ್ಲಿಯ ತಗ್ಗು ಪ್ರದೇಶಗಳಲ್ಲಿರುವ ಮನೆಗಳಲ್ಲಿ ನೀರು ನುಗ್ಗಿದೆ. ಚರಂಡಿಗಳು ಒಡೆದು ಹೋಗಿದ್ದರಿಂದ ನೀರು ರಸ್ತೆಯ ಮೇಲೆ ಹರಿಯಿತು. ನಗರದ ಕೊಳಚೆ ನೀರು ಹರಿದು ಹೋಗುವ ಬಳ್ಳಾರಿ ನಾಲಾ ಮಳೆ ನೀರಿನಿಂದ ತುಂಬಿ ಹರಿಯಿತು. ಯಳ್ಳೂರು ಕೆರೆಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.

ಪ್ರಮುಖ ವೃತ್ತಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು. ಗೋವಾವೇಸ್‌ದಿಂದ ಖಾನಾ
ಪುರಕ್ಕೆ ಹೋಗುವ ರಸ್ತೆಯ ಮಾರ್ಗದ ಮೇಲೆ ಅರ್ಧ ಅಡಿಯಷ್ಟು ನೀರು ಹರಿಯಿತು. ವಾಹನ ಸವಾರರು ಹರಸಾಹಸ ಪಟ್ಟು ವಾಹನ ಚಲಾಯಿಸಿದರು. ಗಾಂಧಿ ನಗರದ ಮೇಲ್ಸೇತುವೆ ಕೆಳಗೆ ನೀರು ಜಮಾಯಿಸಿದ್ದರಿಂದ ದೊಡ್ಡ ದೊಡ್ಡ ವಾಹನಗಳು ಮಾತ್ರ ಸಂಚರಿಸಿದವು. ನೀರಿನ ಪ್ರಮಾಣ ತಗ್ಗಿದ ನಂತರ ಬೈಕ್‌, ಸ್ಕೂಟರ್‌ ಸವಾರರು ಸಂಚರಿಸಿದರು.

ADVERTISEMENT

ಜನಸಂಚಾರ ವಿರಳ:  ಜಿಟಿಜಿಟಿ ಮಳೆಯ ಜೊತೆ ಚಳಿ ಗಾಳಿ ಕೂಡ ಬೀಸುತ್ತಿದ್ದುದರಿಂದ ಹೆಚ್ಚಿನ ಜನರು ಮನೆಯಿಂದ ಹೊರಗೆ ಬರಲಿಲ್ಲ. ಜನಸಂಚಾರ ವಿರಳವಾಗಿತ್ತು.ಸರ್ಕಾರಿ, ಖಾಸಗಿ ಕಚೇರಿಗಳು ಹಾಗೂ ಶಾಲಾ– ಕಾಲೇಜುಗಳಿಗೆ ರಜೆ ಇದ್ದುದು ಕೂಡ ಇದಕ್ಕೆ ಕಾರಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಮಾರ್ಗಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.

ರಕ್ಕಸಕೊಪ್ಪಕ್ಕೆ ನೀರು: ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲಮೂಲವಾಗಿರುವ ರಕ್ಕಸಕೊಪ್ಪ ಜಲಾಶಯಕ್ಕೆ ನಿಧಾನವಾಗಿ ನೀರು ಹರಿದುಬರಲು ಆರಂಭಿಸಿದೆ. ಸುತ್ತಮುತ್ತಲಿನ ಕೆರೆಗಳು, ಬಾವಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.