ADVERTISEMENT

ಬೆಳಗಾವಿ: ದ್ರಾಕ್ಷಾರಸ ಉತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 7:08 IST
Last Updated 10 ಜನವರಿ 2014, 7:08 IST

ಬೆಳಗಾವಿ: ‘ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಇದೇ 10ರಿಂದ 12ರವರೆಗೆ ಇಲ್ಲಿನ ಟಿಳಕವಾಡಿಯ ಶುಕ್ರವಾರ ಪೇಟೆಯ ಮಿಲೇನಿಯಂ ಉದ್ಯಾನದಲ್ಲಿ ಬೆಳಗಾವಿ ದ್ರಾಕ್ಷಾರಸ ಉತ್ಸವ ಆಯೋಜಿಸ ಲಾಗಿದೆ’ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಕೃಷ್ಣ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಉತ್ಸವದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ 16 ದ್ರಾಕ್ಷಾರಸ ಘಟಕಗಳು ಭಾಗವಹಿ ಸಲಿವೆ. ಇದರಲ್ಲಿ ರೆಡ್‌ ವೈನ್‌, ವೈಟ್‌ ವೈನ್‌, ರೋಸ್‌ ವೈನ್‌ ಸೇರಿದಂತೆ 100ಕ್ಕೂ ಹೆಚ್ಚು ಉತ್ಪನ್ನಗಳನ್ನು ಶೇ. 10ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ದ್ರಾಕ್ಷಾರಸವು ಡಯಾಬಿಟಿಸ್‌, ಮಾನಸಿಕ ಒತ್ತಡ, ಕ್ಯಾನ್ಸರ್, ಮಲಬದ್ಧತೆ, ಹೃದಯಾ ಘಾತ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಎಂದರು.

ಕರ್ನಾಟಕ ದ್ರಾಕ್ಷಾರಸ ಮಂಡಳಿಯು ಬೆಳಗಾವಿ, ವಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ಬೀದರ್‌ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ದ್ರಾಕ್ಷಾರಸದ ತಳಿ ಬೆಳೆಯಲು ರೈತರೊಂದಿಗೆ ಒಪ್ಪಂದ ಮಾಡಿ ಕೊಂಡಿದೆ.

ಈ ಎಲ್ಲ ಜಿಲ್ಲೆಗಳ 1,200 ಎಕರೆ ವಿಸ್ತೀರ್ಣದಲ್ಲಿ ದ್ರಾಕ್ಷಾರಸದ ತಳಿ ಬೆಳೆಯಲಾಗುತ್ತಿದ್ದು, ವಾರ್ಷಿಕ 6,000 ಟನ್‌ ತಾಜಾ ದ್ರಾಕ್ಷಿ ಉತ್ಪಾದನೆಯಾಗುತ್ತಿದೆ. ಬೆಳಗಾವಿಯಲ್ಲಿ 2, ವಿಜಾಪುರದಲ್ಲಿ 3, ಬಾಗಲಕೋಟೆಯಲ್ಲಿ 2, ಕೊಪ್ಪಳ, ಬೀದರ್‌, ಬಳ್ಳಾರಿ ಹಾಗೂ ರಾಯಚೂರಿನಲ್ಲಿ ತಲಾ 1 ದ್ರಾಕ್ಷಾರಸದ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ದ್ರಾಕ್ಷಾರಸ ಘಟಕ ಆರಂಭಿಸಲು ಮುಂದೆ ಬರುವ ರೈತರಿಗೂ ಅವಕಾಶ ನೀಡಲಾಗುತ್ತಿದೆ ಎಂದರು.

ಉತ್ಸವವನ್ನು 10ರಂದು ಸಂಜೆ 4ಕ್ಕೆ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಡಾ. ಶಾಮನೂರು ಶಿವಶಂಕರಪ್ಪ ಉತ್ಸವವನ್ನು ಉದ್ಘಾಟಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ದ್ರಾಕ್ಷಾರಸ ಮಳಿಗೆಗಳನ್ನು ಉದ್ಘಾಟಿಸುವರು. ಶಾಸಕ ಸಂಭಾಜಿ ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿ ಗಳಾಗಿ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಜಿಲ್ಲೆಯ ಸಂಸದರು, ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಸದಸ್ಯರು ಆಗಮಿಸುವರು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟೆ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.