ADVERTISEMENT

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ; ಮನೆ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 10:25 IST
Last Updated 20 ಜನವರಿ 2011, 10:25 IST

ಬೆಳಗಾವಿ: ಬರುವ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಉತ್ತಮ ಆತಿಥ್ಯ ಕಲ್ಪಿಸಬೇಕಿದ್ದು, ಇದಕ್ಕೆ ಜಿಲ್ಲೆಯ ನಾಗರಿಕರು ಸಹಕಾರ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಸಮ್ಮೇಳನ ಆತಿಥ್ಯ ಸಮಿತಿಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಬುಧವಾರ ಇಲ್ಲಿ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಆತಿಥ್ಯ ಉಪಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಕನ್ನಡ ಸಮ್ಮೇಳನಕ್ಕೆ ವಿದೇಶಿ, ಹೊರನಾಡು ಕನ್ನಡಿಗರು, ನಾಡಿನ ಗಣ್ಯರು, ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಅಗತ್ಯ ಕಾರ್ಯಯೋಜನೆ ಮಾಡಬೇಕು ಎಂದು ಸೂಚಿಸಿದರು.

ಮನೆ ಆತಿಥ್ಯ ನೀಡಲು ಮುಂದೆ ಬರುವವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವಿಶ್ವಕನ್ನಡ ಸಮ್ಮೇಳನ ವಿಭಾಗವನ್ನು ಸಂಪರ್ಕಿಸಬಹುದಾಗಿದೆ ಹಾಗೂ ವಿಶ್ವ ಕನ್ನಡ ಸಮ್ಮೇಳನ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಅತಿಥಿಗಳಿಗೆ ವಸತಿ, ಸಾರಿಗೆ ಹಾಗೂ ಉಪಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಲು ಅನುಕೂಲವಾಗುವಂತೆ ವಸತಿ ಉಪಸಮಿತಿ, ಸಾರಿಗೆ ಉಪಸಮಿತಿ ಹಾಗೂ ಉಪಹಾರದ ಉಪಸಮಿತಿಗಳನ್ನು ರಚಿಸಬೇಕು. ಅನುದಾನದ ದುಂದುವೆಚ್ಚ ಆಗದಂತೆ ನೋಡಿಕೊಳ್ಳಬೇಕು. ಸೂಕ್ತ ಕುಡಿಯುವ ನೀರಿನ ಸೌಲಭ್ಯ, ನಗರದ ಸ್ವಚ್ಛತೆ, ಉದ್ಯಾನವನಗಳ ಸೌಂದರ್ಯೀಕರಣ, ಆರೋಗ್ಯ ಕಾಪಾಡುವ ಕಾರ್ಯಗಳನ್ನು ಅಚ್ಟುಕಟ್ಟಾಗಿ ಮಾಡಬೇಕು ಎಂದು ಸಲಹೆ ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಏಕರೂಪ್ ಕೌರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ. ವಿಜಯಕುಮಾರ ತೋರಗಲ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಮಲ್ಲಾಪೂರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.