ADVERTISEMENT

ಮಾನವ ಸಂಪನ್ಮೂಲ ಸಮ್ಮೇಳನ ನಾಳೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 6:05 IST
Last Updated 16 ಫೆಬ್ರುವರಿ 2012, 6:05 IST

ಬೆಳಗಾವಿ: ಕೈಗಾರಿಕೆಗಳಲ್ಲಿ ನೌಕರರ ಮಹತ್ವದ ಬಗೆಗೆ ಚರ್ಚಿಸಲು ನಗರದ ಫೌಂಡರಿ ಕ್ಲಸ್ಟರ್‌ನಲ್ಲಿ ಇದೇ 17 ಮತ್ತು 18 ರಂದು `ಮಾನವ ಸಂಪನ್ಮೂಲ~ ಕುರಿತು ಸಮ್ಮೇಳನ ಆಯೋಜಿಸಲಾಗಿದೆ.

`ನೌಕರರು ಮೊದಲು, ಗ್ರಾಹಕರು ನಂತರ~ ಘೋಷಣೆಯಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಭರತೇಶ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಸಮ್ಮೇಳನ ನಡೆಯಲಿದೆ~ ಎಂದು ಟ್ರಸ್ಟ್ ನಿರ್ದೇಶಕ ಡಾ.ಆರ್.ಆರ್. ಕುಲಕರ್ಣಿ  ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

`17 ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆರ್‌ಸಿಯು ಕುಲಪತಿ ಡಾ.ಬಿ.ಆರ್. ಅನಂತನ್ ಹಾಗೂ ಮುಖ್ಯ ಭಾಷಣಕಾರರಾಗಿ ಪುಣೆಯ ಫಿಯಟ್ ಇಂಡಿಯಾ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರಾಜೀವ ಕಪೂರ ಆಗಮಿಸಲಿದ್ದಾರೆ. ಭರತೇಶ ಎಜುಕೇಶನ್ ಟ್ರಸ್ಟ್ ಚೇರಮನ್ ಗೋಪಾಲ ಜಿನಗೌಡ ಎಂದು ಅವರು ಹೇಳಿದರು.

`18 ರಂದು ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಎಸ್‌ಕೆಎಫ್ ಇಂಡಿಯಾ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಿಶಿರ ಜೋಶಿಪುರ ಆಗಮಿಸಲಿದ್ದಾರೆ. ಅಡ್ವಾನ್ಸ್ ಬಯೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಡಾ.ವಸಂತ ರಾಠಿ, ಬಾಪಟ್ ಆಂಡ್ ಅಸೋಸಿಯೇಟ್ಸ್‌ನ ಡಾ.ಎಸ್.ಜಿ. ಬಾಪಟ್, ಆರ್‌ಸಿಯು ಕುಲಸಚಿವ ಡಾ.ಎಸ್.ಎಸ್. ಪಟಗುಂದಿ ಉಪಸ್ಥಿತರಿರಲಿದ್ದಾರೆ. ಟ್ರಸ್ಟ್ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ ಅಧ್ಯಕ್ಷತೆ ವಹಿಸಲಿದ್ದಾರೆ~ ಎಂದು ತಿಳಿಸಿದರು.

`ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವ ತಜ್ಞರು ಪ್ರಬಂಧ ಮಂಡಿಸಲಿದ್ದಾರೆ. ಅತ್ಯುತ್ತಮ ಪ್ರಬಂಧಗಳಿಗೆ ಕ್ರಮವಾಗಿ 5,3 ಹಾಗೂ 2 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಅಲ್ಲಿ  ಮಂಡನೆಯಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿದೆ~ ಎಂದು ಅವರು ಹೇಳಿದರು.

`ಮಾನವ ಸಂಪನ್ಮೂಲ ಮ್ಯಾನೇಜರ್‌ಸಲಹೆಗಾರರು, ಉದ್ಯಮಿಗಳು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ 200ಕ್ಕೂ ಹೆಚ್ಚು ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.  ಮಾನವ ಸಂಪನ್ಮೂಲ ಪಡೆಯಲು ಒದಗಿಸಬೇಕಾದ ಸೌಲಭ್ಯ, ಅವರ ಸಮಸ್ಯೆ, ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗೆಗೆ ಸಮಗ್ರವಾಗಿ ಚರ್ಚಿಸಲಾಗುವುದು~ ಎಂದು ಅವರು ತಿಳಿಸಿದರು.

ಟ್ರಸ್ಟ್ ಚೇರಮನ್ ಗೋಪಾಲ ಜಿನಗೌಡ ಮಾತನಾಡಿ, ರೋಜಗಾರ ಯೋಜನೆಗಳಿಂದ ಕೈಗಾರಿಕೆಗಳಿಗೆ ಕೆಲಸಗಾರರು ಸಿಗುತ್ತಿಲ್ಲ. ಹೀಗಾಗಿ ಉತ್ಪಾದನೆ ಕುಂಠಿತವಾಗುತ್ತಿದೆ ಎಂದರು.

`ಬಹಳಷ್ಟು ಕಡೆಗಳಲ್ಲಿ ಕೆಲಸ ಮಾಡದೇ ಕೂಲಿ ನೀಡಲಾಗುತ್ತಿದೆ. ಹೀಗಾಗಿ ಯುವ ಜನಾಂಗ ಕೆಲಸಕ್ಕೆ ಬರುತ್ತಿಲ್ಲ. ಈ ನಿಟ್ಟಿನಲ್ಲಿಯೂ ಚರ್ಚೆ ಮಾಡಲಾಗುವುದು~ ಎಂದು ಅವರು ಹೇಳಿದರು. ಟ್ರಸ್ಟ್ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ, ಕಾಲೇಜಿನ ಆಡಳಿತ ಮಂಡಳಿ ಚೇರಮನ್ ವಿನೋದ ದೊಡ್ಡಣ್ಣವರ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.