ಬೆಳಗಾವಿ: ನಗರದ ಹೊರವಲಯದ ಬಾಳೆಕುಂದ್ರಿ ಕೆ.ಎಚ್. ಗ್ರಾಮದಲ್ಲಿ ಸೋಮವಾರ ವಿದ್ಯುತ್ ಕಂಬವೊಂದು ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪುವ ಮೂಲಕ ಭಾನುವಾರವಷ್ಟೇ ಆಗಮಿಸಿದ್ದ ಮುಂಗಾರು ಮಳೆಗೆ ಮೊದಲ ಬಲಿ ಬಿದ್ದಂತಾಗಿದೆ.
ಬಾಳೆಕುಂದ್ರಿ ಕೆ.ಎಚ್. ಗ್ರಾಮದ ಶ್ರೀಕಾಂತ ವಿಶ್ವನಾಥ ಜಾಧವ (50) ಮೃತಪಟ್ಟ ದುರ್ದೈವಿ.
ಭಾನುವಾರ ರಾತ್ರಿಯಿಂದಲೇ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿತ್ತು. ಸೋಮವಾರ ಬೆಳಿಗ್ಗೆ 10.30ರ ಸಮೀಪ ಗ್ರಾಮದಲ್ಲಿ ಮರವೊಂದು ಉರುಳಿ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಇದರಿಂದಾಗಿ ವಿದ್ಯುತ್ ಕಂಬವು ಉರುಳಿ ಮೈಮೇಲೆ ಬಿದ್ದ ಪರಿಣಾಮ ಶ್ರೀಕಾಂತ ಅವರು ಮೃತಪಟ್ಟಿದ್ದಾರೆ.
ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಳೆಕುಂದ್ರಿ ಕೆ.ಎಚ್. ಗ್ರಾಮದಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದು ಮೃತಪಟ್ಟ ಶ್ರೀಕಾಂತ ಜಾಧವ ಅವರ ಕುಟುಂಬಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 1.50 ಲಕ್ಷ ರೂಪಾಯಿ ಪರಿಹಾರ ನೀಡಲು ಚೆಕ್ ಸಿದ್ಧಪಡಿಸಿಕೊಳ್ಳುತ್ತಿದ್ದೇವೆ. ಮಂಗಳವಾರ ಅವರ ಮನೆಗೆ ತೆರಳಿ ಪರಿಹಾರದ ಚೆಕ್ ವಿತರಿಸಲಾಗುವುದು ಎಂದು ಬೆಳಗಾವಿಯ ತಹಶೀಲ್ದಾರ ಪ್ರೀತಂ ನಸಲಾಪುರೆ `ಪ್ರಜಾವಾಣಿ~ಗೆ ತಿಳಿಸಿದರು.
ಬೈಕ್ ಜಖಂ:
ಭಾನುವಾರ ರಾತ್ರಿಯಿಂದ ಸುರಿದ ಮಳೆಯಿಂದಾಗಿ ನಗರದ ಜ್ಯೋತಿ ಕಾಲೇಜಿನ ಆವರಣದಲ್ಲಿ ಮರವೊಂದು ಉರುಳಿ ಬಿದ್ದ ಪರಿಣಾಮ 3 ಬೈಕ್ ಜಖಂ ಗೊಂಡ ಘಟನೆ ಸೋಮವಾರ ನಡೆದಿದೆ.
ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಆವರಣದಲ್ಲಿ ಬೈಕ್ ನಿಲ್ಲಿಸಿದ್ದರು. ಮಣ್ಣು ಸಡಿಲಗೊಂಡು ಬುಡ ಸಮೇತ ಮರವು ಕಿತ್ತುಕೊಂಡು ಉರುಳಿ ಬಿದ್ದಿದೆ. ಅಡಿಗೆ ನಿಲ್ಲಿಸಿದ್ದ ಬೈಕ್ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸೋಮವಾರ ಬೆಳಿಗ್ಗೆ ಬಿಡದೇ ಮಳೆ ಸುರಿಯುತ್ತಿರುವುದರಿಂದ ಶಾಲಾ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುವಂತಾಯಿತು. ಹಲವು ವಿದ್ಯಾರ್ಥಿಗಳು ರೇನ್‌ಕೋಟ್ ಧರಿಸಿಕೊಂಡಿದ್ದರೆ, ಇನ್ನು ಕೆಲವರು ಛತ್ರಿ ಹಿಡುಕೊಂಡು ಶಾಲೆಗಳಿಗೆ ತೆರಳುತ್ತಿದ್ದ ದೃಶ್ಯ ನಗರದ ವಿವಿಧೆಡೆ ಕಂಡು ಬಂದಿತು.
ಬೆಳಿಗ್ಗೆ 10.30ರ ಬಳಿಕ ಮಳೆಯ ಪ್ರಮಾಣ ಕ್ರಮೇಣ ಕಡಿಮೆಯಾಗಿ ಸಂಜೆಯವರೆಗೂ ಮಳೆಯು ಬಿಡುವು ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.