ಬೆಳಗಾವಿ: ಲೋಕಸಭಾ ಕ್ಷೇತ್ರಗಳ ಚುನಾವಣೆಗಾಗಿ ಮಾರ್ಚ್ 19ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಅಂದಿನಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಜಯರಾಮ್ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಮಪತ್ರ ಸಲ್ಲಿಸಲು ಮಾರ್ಚ್ 26 ಕೊನೆಯ ದಿನವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನಾಮಪತ್ರಗಳನ್ನು ಚಿಕ್ಕೋಡಿ ಮಿನಿ ವಿಧಾನಸೌಧದಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಬೆಳಗಾವಿ ಲೋಸಭಾ ಕ್ಷೇತ್ರದ ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಮಾ. 27ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು. ಮಾ. 29 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ’ ಎಂದು ತಿಳಿಸಿದರು.
‘ಮತದಾನ ಹೆಚ್ಚು ನಡೆಯಬೇಕು ಎಂಬ ಉದ್ದೇಶದಿಂದ ಚುನಾವಣಾ ಆಯೋಗವು ಈ ಬಾರಿ 1 ಗಂಟೆ ಹೆಚ್ಚಿನ ಸಮಯವನ್ನು ಮತದಾನಕ್ಕೆ ನೀಡಿದ್ದು, ಏಪ್ರಿಲ್ 17ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ’ ಎಂದು ವಿವರಿಸಿದರು.
‘ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಸಭೆ, ರ್‍್ಯಾಲಿ, ಮೆರವಣಿಗೆ, ವಾಹನ ಇತ್ಯಾದಿಗಳ ಪೂರ್ವಾನುಮತಿಯನ್ನು ತಾಲ್ಲೂಕು ಮಟ್ಟದಲ್ಲಿಯೇ ಏಕ ಗವಾಕ್ಷಿ ಪದ್ಧತಿಯಡಿ ಸಂಬಂಧಿತ ತಹಸೀಲ್ದಾರರು ನೋಡಲ್ ಅಧಿಕಾರಿಯಾಗಿರುವ ಸಮಿತಿಯಿಂದ ಪಡೆದುಕೊಳ್ಳಬಹುದಾಗಿದೆ. ಎರಡು ಅಥವಾ ಹೆಚ್ಚು ತಾಲ್ಲೂಕುಗಳಲ್ಲಿ ಅನುಮತಿ ಪಡೆಯಬೇಕಾಗಿದ್ದರೆ, ಹೆಚ್ಚುವರಿ ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿ ಆಗಿರುವ ಜಿಲ್ಲಾ ಮಟ್ಟದ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.
‘ಪಕ್ಷದ ಕಾರ್ಯಕ್ರಮದಲ್ಲಿ ಅಭ್ಯರ್ಥಿಯು ವೇದಿಕೆ ಏರಿದರೆ ಹಾಗೂ ಅವರ ಹೆಸರನ್ನು ಉಲ್ಲೇಖಿಸಿ ಪ್ರಚಾರ ಮಾಡಿದರೆ, ಪಕ್ಷದ ಖರ್ಚಿನ ಜೊತೆಗೆ ಅರ್ಭರ್ಥಿಯ ವೆಚ್ಚವನ್ನೂ ಹಿಡಿಯಲಾಗುತ್ತದೆ’ ಎಂದ ಅವರು, ‘ಅಕ್ರಮ ಮದ್ಯ ಹಾಗೂ ಹಣ ಸಾಗಾಟವನ್ನು ತಡೆಯಲು ಜಿಲ್ಲೆಯ 22 ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಇಲ್ಲಿ ವೆಬ್ ಕ್ಯಾಮೆರಾ ಅಥವಾ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಜಿಲ್ಲೆಯಲ್ಲಿ ಇಲ್ಲಿಯವರೆಗೆ 15.920 ಲೀಟರ್ ಅಕ್ರಮ ಮದ್ಯ ಮತ್ತು ಗೋವಾದಿಂದ ತರಲಾಗುತ್ತಿದ್ದ 50.660 ಲೀಟರ್ ಮದ್ಯ ಜಪ್ತಿ ಮಾಡಲಾಗಿದ್ದು, ಇವುಗಳ ಒಟ್ಟು ಮೊತ್ತ ₨ 1.69 ಲಕ್ಷ ಎಂದು ಅಂದಾಜಿಸಲಾಗಿದೆ. 27 ಜನರನ್ನು ದಸ್ತಗಿರಿ ಮಾಡಲಾಗಿದೆ’ ಎಂದು ಹೇಳಿದರು.
‘ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಕಾಶ ಹುಕ್ಕೇರಿ ಅವರಿಗೆ ಹಾಗೂ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ ಅವರಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. ಅವರು ಉತ್ತರ ನೀಡಿಲ್ಲ ಎಂದಾದರೆ, ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ. ನಾವು ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.
‘ಜಿಲ್ಲೆಯಲ್ಲಿ ಒಟ್ಟು 4,040 ಮತಗಟ್ಟೆಗಳಿದ್ದು, ಒಟ್ಟು 327 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಮತಗಟೆಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನಿಗಾವಹಿಸಲಿದ್ದು, ಪರಿಶಿಷ್ಟ ಜನಾಂಗ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮತದಾರರ ಮೇಲೆ ರಾಜಕೀಯ ಪಕ್ಷಗಳು, ಉಮೇದುವಾರರು ಆಮಿಷವೊಡ್ಡುವ ಪ್ರಕರಣಗಳ ಮೇಲೆ ನಿಗಾವಹಿಸಿ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನಿನಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಜಯರಾಮ್ ತಿಳಿಸಿದರು.
‘ಹೆಚ್ಚಿನ ಸಂಖ್ಯೆಯಲ್ಲಿ ಗುಣಾತ್ಮಕ ಮತದಾನ ಆಗಬೇಕು ಎಂಬ ಉದ್ದೇಶದಿಂದ ಈ ಬಾರಿ ಚುನಾವಣಾ ಆಯೋಗದ ವತಿಯಿಂದ ನಾವು ಪ್ರತಿಯೊಬ್ಬ ಮತದಾರರಿಗೆ ಮತದಾನ ಮಾಡುವ ಕುರಿತ ಸಂದೇಶ ಇರುವ ಮನವಿ ಪತ್ರ ಹಾಗೂ ಮತದಾನ ಚೀಟಿಗಳನ್ನು ಮತಗಟ್ಟೆ ಅಧಿಕಾರಿಗಳು ಏಪ್ರಿಲ್ 13ರಂದು ಮತದಾರರ ಮನೆಗಳಿಗೆ ತೆರಳಿ ವಿತರಿಸಲಿದ್ದಾರೆ’ ಎಂದು ಅವರು ತಿಳಿಸಿದರು.
ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅಥವಾ ಇತರರು ನೀತಿ ಸಂಹಿತೆಯ ಉಲ್ಲಂಘನೆ ರೂಪದಲ್ಲಿ ಮೊಬೈಲ್ ಸಂದೇಶಗಳನ್ನು (ಎಸ್ಎಮ್ಎಸ್) ಕಳುಹಿಸಿದರೆ, ಅಂತಹ ಪ್ರಕರಣಗಳನ್ನು ಬೆಳಗಾವಿಯ ಪೊಲೀಸ್ ಕಂಟ್ರೋಲ್ ರೂಮ್ (ಮೊಬೈಲ್ ಸಂಖ್ಯೆ: 9480804000) ಗಮನಕ್ಕೆ ಸಾರ್ವಜನಿಕರು ತರಬಹುದಾಗಿದೆ’ ಎಂದು ಹೇಳಿದರು.
‘ಮತದಾರ ಸಹಾಯ ಕೇಂದ್ರಗಳನ್ನು ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ, ತಾಲ್ಲೂಕು ಕಚೇರಿಗಳಲ್ಲಿ ಹಾಗೂ ಎಲ್ಲ ನಗರ ಹಾಗೂ ಜಿಲ್ಲೆಯ 486 ಗ್ರಾಮ ಪಂಚಾಯಿತಿಗಳಲ್ಲಿ ತೆರೆಯಲಾಗಿದೆ. ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಹಾಗೂ ಇನ್ನಿತರ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ ಮತದಾನ ಮಾಡುವುದನ್ನು ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಗ್ರಾಮ ಹಾಗೂ ನಗರಗಳಲ್ಲಿ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.