ADVERTISEMENT

ವಂತಿಗೆ ಪಾವತಿಸಲು ಕಾರ್ಖಾನೆಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 7:30 IST
Last Updated 19 ಸೆಪ್ಟೆಂಬರ್ 2011, 7:30 IST

ಬೆಳಗಾವಿ: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ವ್ಯಾಪ್ತಿಗೆ ಬರುವ ಎಲ್ಲ ಕಾರ್ಖಾನೆಗಳು, ಪ್ಲಾಂಟೇಶನ್‌ಗಳು, ಸೊಸೈಟಿಗಳು, ಮೋಟಾರ್ ಸಂಸ್ಥೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು 2011ನೇ ಸಾಲಿಗೆ ಸಂಬಂಧಪಟ್ಟ ವಂತಿಗೆಯನ್ನು ಕಡ್ಡಾಯವಾಗಿ ಜನವರಿ 15ರೊಳಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಪಾವತಿಸಲು ಕೋರಲಾಗಿದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ 1965ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾರ್ಖಾನೆಗಳು, ಪ್ಲಾಂಟೇಷನ್‌ಗಳು, ಕಾರ್ಯಗಾರಗಳು, ಮೋಟಾರು ವಾಹನ ಸಂಸ್ಥೆಗಳ ಮಾಲೀಕ ವರ್ಗದವರು ನೇಮಿಸಿಕೊಂಡಿರುವ ವೇತನ ಪಡೆಯುತ್ತಿರುವ ಪ್ರತಿ ಸಿಬ್ಬಂದಿ ನೌಕರರ (ಲಿಪಿಕ/ ಗುತ್ತಿಗೆ/ ತಾತ್ಕಾಲಿಕ/ ಮೇಲ್ವಿಚಾರಣಾ ನೌಕರರಿಗೂ ಸೇರಿ) ವಂತಿಗೆ ರೂ. 6, ಮಾಲೀಕರ ವಂತಿಕೆ ರೂ. 12ರಂತೆ ಪ್ರತಿ ಸಿಬ್ಬಂದಿಗೆ ರೂ. 18ರಂತೆ ವಂತಿಕೆಯನ್ನು ಅಧಿನಿಯಮ 7ಎ ಪ್ರಕಾರ ಫಾರಂ ಡಿ ನಮೂನೆಯೊಂದಿಗೆ ಕಡ್ಡಾಯವಾಗಿ ಪಾವತಿಸಬೇಕು.

ಐವತ್ತು ಮತ್ತು ಅದಕ್ಕಿಂತ ಹೆಚ್ಚಿನ ನೌಕರರನ್ನು (ಬೌದ್ಧಿಕ ಕೆಲಸ ಮಾಡುವ ಎಲ್ಲ, ನುರಿತ ನೌಕರರೂ ಹಾಗೂ ಆಡಳಿತ ವರ್ಗದ ನೌಕರರೂ ಸೇರಿಕೊಂಡು) ನೇಮಿಸಿ ಕೊಂಡ ಎಲ್ಲ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಚಾರಿಟೇಬಲ್ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ನೋಂದಣಿಯಾದ ಎಲ್ಲ ಸಂಘ-ಸಂಸ್ಥೆಗಳ ಮಾಲೀಕ ವರ್ಗದವರು ಕಡ್ಡಾಯವಾಗಿ ಮೇಲೆ ತಿಳಿಸಿದ ದರಗಳಂತೆ ಕಾರ್ಮಿಕ ಮತ್ತು ಮಾಲೀಕರ ವಂತಿಗೆಯನ್ನು ಪಾವತಿಸಬೇಕು. ಅಲ್ಲದೇ, ಅಧಿನಿಯಮ 7ರ ಪ್ರಕಾರ ಕಾರ್ಮಿಕರಿಗೆ ಪಾವತಿಯಾಗದೇ ಇರುವ ಬಾಕಿ ವೇತನ ಹಾಗೂ ಇತರೆ ಭತ್ಯೆಗಳು, ಬೋನಸ್ ಮತ್ತು ದಂಡದ ರೂಪದಲ್ಲಿ ವಸೂಲು ಮಾಡಿ ಸಂಗ್ರಹಿಸಿರುವ ಮೊತ್ತಗಳನ್ನು ಸೇರಿಸಿಕೊಂಡು ಕಡ್ಡಾಯವಾಗಿ ಕಲ್ಯಾಣ ಮಂಡಳಿಗೆ ಪಾವತಿಸಬೇಕು.

ಈ ಅಧಿನಿಯಮ ಉಲ್ಲಂಘನೆ ಮಾಡಿ, ವಿಳಂಬವಾಗಿ ಪಾವತಿಸುವ ಮಾಲೀಕ ವರ್ಗದವವರು ಅಧಿನಿಯಮ-7 ಬಿ ಪ್ರಕಾರ ವಂತಿಗೆ ಮೊತ್ತ ಹಾಗೂ ಕಾರ್ಮಿಕರಿಗೆ ಪಾವತಿ ಮಾಡದೇ ಇರುವ ಮೊತ್ತಗಳ (ಅನ್‌ಪೇಯ್ಡ ಅಕ್ಯುಮುಲೇಷನ್) ಅನುಗುಣವಾಗಿ ಶೇ. 18ರಂತೆ ಬಡ್ಡಿ ತೆರಬೇಕಾಗುತ್ತದೆ. ಅಲ್ಲದೇ, ಉಲ್ಲಂಘನೆ ಮಾಡಿದ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಲಾಗುವುದು. ಕಾನೂನಿನಲ್ಲಿ ಕನಿಷ್ಠ ರೂ. 500ರಿಂದ ರೂ. 1000 ಮೊತ್ತದ ದಂಡ ವಿಧಿಸಲು ಹಾಗೂ ಮೂರು ತಿಂಗಳಿಂದ ಒಂದು ವರ್ಷದವರೆಗೂ ಶಿಕ್ಷೆ ವಿಧಿಸಲು ಅವಕಾಶವಿದೆ.

ಈ ಕಾಯ್ದೆಯಡಿ ಪಾವತಿಸಬೇಕಾದ ವಂತಿಗೆ ಹಾಗೂ ಕಾರ್ಮಿಕರು ಸ್ವೀಕರಿಸದೇ/ ಪಾವತಿಯಾಗದೇ ಬಾಕಿ ಇರುವ ಮೊತ್ತವನ್ನು 2012ರ ಜನೇವರಿ 15ರೊಳಗೆ ಕಲ್ಯಾಣ ಆಯುಕ್ತರು, ಕರ್ನಾಟಕ ಕಾರ್ಮಿಕ ಕಲ್ಯಾಣ ಭವನ, ನಂ. 48, 2ನೇ ಮಹಡಿ, ಮತ್ತಿಕೆರೆ ಮುಖ್ಯ ರಸ್ತೆ, (ಆರ್.ಟಿ.ಓ. ಕಚೇರಿ ಹತ್ತಿರ), ಯಶವಂತಪುರ, ಬೆಂಗಳೂರು-22 ಇವರಿಗೆ ಪಾವತಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಆಯುಕ್ತರನ್ನು (ದೂ:080-23570266) ಸಂಪರ್ಕಿಸಬಹುದು ಎಂದು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಆಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.