ADVERTISEMENT

ವಿದ್ಯೆಗಿಂತ ಸಂಸ್ಕಾರ ರೂಢಿಸಿಕೊಳ್ಳಲು ಸಲಹೆ

‘ಮುಳ್ಳಿನ ಬನದಲ್ಲಿ ನಂದನವನ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 5:41 IST
Last Updated 2 ಏಪ್ರಿಲ್ 2018, 5:41 IST

ಬೆಳಗಾವಿ: ‘ವಿದ್ಯೆಯೊಂದಿಗೆ ಸಂಸ್ಕಾರ ರೂಢಿಸಿಕೊಳ್ಳುವುದಕ್ಕೂ ಆದ್ಯತೆ ಕೊಡಬೇಕು’ ಎಂದು ವೈದ್ಯೆ ಡಾ.ವೈಷ್ಣವಿ ಖಾಥವಾಟೆ ಸಲಹೆ ನೀಡಿದರು.ಶಹಾಪುರದ ವಿಠ್ಠಲ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಉಮಾಬಾಯಿ ಶಂ.ಕುಲಕರ್ಣಿ ಅವರ ‘ಸಹಸ್ರ ಚಂದ್ರ ದರ್ಶನ’ ಹಾಗೂ ಯದುನಾಥ ಕರವೀರ ವಿರಚಿತ ‘ಮುಳ್ಳಿನ ಬನದಲ್ಲಿ ನಂದನವನ’ (ಉಮಾಬಾಯಿ ಕುಲಕರ್ಣಿ ಜೀವನ ಕುರಿತು ರಚಿಸಿದ) ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಇಂದಿನ ಹೆಣ್ಣು ಮಕ್ಕಳಲ್ಲಿ ದುಡಿಮೆ ಮತ್ತು ತಾಳ್ಮೆ ಮಾಯವಾಗುತ್ತಿವೆ. ಸಂಸ್ಕಾರವನ್ನು ಮರೆಯುತ್ತಿರುವುದು ಇದಕ್ಕೆ ಕಾರಣ. ಹಣ ಗಳಿಸುವುದು ಉಪಜೀವನಕ್ಕೆ ಎನ್ನುವುದನ್ನು ಮರೆಯಬಾರದು. ನಮ್ಮ ಸಂಸ್ಕಾರ ವ್ಯಕ್ತಿತ್ವವನ್ನು ತೋರಿಸುತ್ತದೆ. ಹೀಗಾಗಿ, ವಿದ್ಯೆ ಮಾತ್ರವೇ ಸಾಲದು’ ಎಂದರು.

ಪತ್ರಕರ್ತ ಗುಂಡೇನಟ್ಟಿ ಮಧುಕರ ಮಾತನಾಡಿ, ‘ಆಧುನಿಕ ತಂತ್ರಜ್ಞಾನದಿಂದ ಪುಸ್ತಕ ಪ್ರಕಟಣೆ ತುಂಬಾ ಸುಲಭವಾಗಿದೆ. ಆದರೆ ಕೃತಿಗಳ ಮಾರಾಟ ಮಾಡುವುದು ಅಷ್ಟೇ ಕಷ್ಟದ ಕೆಲಸವಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಹರಿಕಥಾ ವಿದುಷಿ ಶಕುಂತಲಾ ವಿದ್ಯಾಪತಿ ಮಾತನಾಡಿ, ‘ಭೂಮಿ, ನದಿ ಹೀಗೆ ಎಲ್ಲವನ್ನೂ ಹೆಣ್ಣಿಗೆ ಹೋಲಿಸಿ ಹೆಣ್ಣಿನ ಹಿರಿಮೆಯನ್ನು ಮೆರೆಯಲಾಗಿದೆ. ಆದರೆ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ನಿಲ್ಲುತ್ತಿರುವುದು ವಿಷಾದದ ವಿಷಯ’ ಎಂದರು.

ಚುಟುಕು ಕವಿ ಗೋಕಾಕದ ಟಿ.ಸಿ. ಮೊಹರೆ ಇದ್ದರು. ಅಕ್ಷತಾ ಚಿತ್ರಗಾರ ಸ್ವಾಗತಗೀತೆ ಹಾಡಿದರು. ಯದುನಾಥ ಕರವೀರ ಸ್ವಾಗತಿಸಿದರು. ಪ್ರೀತಿ ಸುಧೀರ ಗೋಡಬೋಳೆ ನಿರೂಪಿಸಿದರು. ದತ್ತಾತ್ರಯ ಭಟ್ ಪರಿಚಯಿಸಿದರು. ಪ್ರಮೋದ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.