ADVERTISEMENT

ಶಾಲಾ ಕೊಠಡಿ ನಿರ್ಮಾಣಕ್ಕೆ ನೆರವು

ನಿಪ್ಪಾಣಿ ಮತಕ್ಷೇತ್ರದಲ್ಲಿ ದೇವಸ್ಥಾನಗಳ ಅಭಿವೃದ್ಧಿಗೂ ‘ನಿಧಿ’ ನೀಡಿದ ಶಶಿಕಲಾ ಜೊಲ್ಲೆ

ಎಂ.ಮಹೇಶ
Published 17 ಮಾರ್ಚ್ 2018, 5:55 IST
Last Updated 17 ಮಾರ್ಚ್ 2018, 5:55 IST
ನಿಪ್ಪಾಣಿಯಲ್ಲಿ ಸಮುದಾಯ ಭವನ ನಿರ್ಮಿಸಿರುವುದು
ನಿಪ್ಪಾಣಿಯಲ್ಲಿ ಸಮುದಾಯ ಭವನ ನಿರ್ಮಿಸಿರುವುದು   

ಬೆಳಗಾವಿ:‌ ಜಿಲ್ಲೆಯಲ್ಲಿರುವ ಈಗಿನ ಏಕೈಕ ಶಾಸಕಿ, ನಿಪ್ಪಾಣಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ಶಶಿಕಲಾ ಜೊಲ್ಲೆ ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ್ದಾರೆ.

ಬಹುತೇಕ ವರ್ಗದವರ ಬೇಡಿಕೆ ಈಡೇರಿಕೆಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ. ದೇವಾಲಯಗಳ ಅಭಿವೃದ್ಧಿಗೂ ‘ಕಾಣಿಕೆ’ ನೀಡಿ ಭಕ್ತಿ ಮೆರೆದಿದ್ದಾರೆ.

ಗಡಿ ಪ್ರದೇಶವಾದ ಇಲ್ಲಿ, ಲಿಂಗಾಯತ ಹಾಗೂ ಮರಾಠಿ ಭಾಷಿಕ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಹೀಗಾಗಿ, ಕನ್ನಡದೊಂದಿಗೆ ಮರಾಠಿ ಭಾಷಿಕರು ಸಲ್ಲಿಸಿದ ಮನವಿಗಳನ್ನೂ ಪುರಸ್ಕರಿಸಿ, ಅನುದಾನ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಿದ್ದಾರೆ. ಬಹುತೇಕ ಕಾರ್ಯಗಳಿಗೆ ಅನುಮೋದನೆಯೂ ದೊರೆತಿದೆ.

ADVERTISEMENT

ನಿಧಿಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಒಂದಷ್ಟು ಪೂರ್ಣಗೊಂಡಿವೆ. ಕೆಲವು ಪ್ರಗತಿಯ ಹಂತದಲ್ಲಿವೆ. ಇತ್ತೀಚೆಗೆ ಅನುಮೋದನೆ ಅಗಿರುವುದಕ್ಕೆ ಭೂಮಿಪೂಜೆ ನೆರವೇರಿಸುತ್ತಿರುವುದು ಕಂಡುಬಂದಿದೆ.

ನಿಪ್ಪಾಣಿಯಲ್ಲಿ ಹೆಚ್ಚು ಕೆಲಸ: ಪ್ರತಿವರ್ಷ ದೊರೆಯುವ ₹ 2 ಕೋಟಿ ಅನುದಾನವನ್ನು 2013–14ರಿಂದ ಮೂರು ವರ್ಷಗಳವರೆಗೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. 2016–17 ಹಾಗೂ 2017–18ನೇ ಸಾಲಿನಲ್ಲಿ ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಶಿಫಾರಸು ಮಾಡುವಾಗಲೇ ₹ 2 ಕೋಟಿಗಿಂತ ಕಡಿಮೆ ಪ್ರಮಾಣದ ಅನುದಾನ ಕೋರಿರುವುದನ್ನು ಜಿಲ್ಲಾಡಳಿತ ಒದಗಿಸಿರುವ ಅಂಕಿ–ಅಂಶಗಳು ಹೇಳುತ್ತಿವೆ.

2013–14ನೇ ಸಾಲಿನಲ್ಲಿ ನಿಪ್ಪಾಣಿಯಲ್ಲಿ ಚರ್ಮಕಾರ ಭವನ ನಿರ್ಮಿಸಿಕೊಟ್ಟಿದ್ದಾರೆ. ಬಿಂವಶಿ ಶಾಲೆಗೆ ತರಗತಿ ಕೊಠಡಿಗಳನ್ನು ಕಟ್ಟಲು ಹಣ ನೀಡಿದ್ದಾರೆ. ಮಮದಾಪುರದಲ್ಲಿ ಶೌಚಾಲಯ, ನಿಪ್ಪಾಣಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಯಾಲಿಸಿಸ್‌ ಘಟಕ ಒದಗಿಸಿದ್ದಾರೆ. ನಗರಸಭೆಯಲ್ಲಿ ನೀರು ಶುದ್ಧಿಕರಣ ಘಟಕ ಅಳವಡಿಸಿದ್ದಾರೆ. ಸ್ಥಳೀಯ ಸಂಸ್ಥೆಗೆ ಶವ ಸಾಗಿಸುವ ವಾಹನ ಕೊಡಿಸಿದ್ದಾರೆ.

ಬೇಡಕಿಹಾಳ, ಸ್ತವನಿಧಿ, ನಿಪ್ಪಾಣಿಯಲ್ಲಿ ಪ್ರಯಾಣಿಕರ ತಂಗುದಾಣಕ್ಕೆ ಹಣ ಕೊಟ್ಟಿದ್ದಾರೆ. ಉದ್ಯಾನ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಬೋಜ್‌, ಆಡಿ, ಬೋರಗಾಂವ, ಶಿರವಾಡ, ಕುನ್ನೂರಿನಲ್ಲಿ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಹಣ ಹಂಚಿಕೆ ಮಾಡಿದ್ದಾರೆ. ಅಲ್ಲಲ್ಲಿ ರಸ್ತೆ, ಸ್ಮಶಾನಗಳ ಸುಧಾರಣೆಗೂ ಆರ್ಥಿಕವಾಗಿ ನೆರವಾಗಿದ್ದಾರೆ. ಅಂದಾಜು ₹ 2.81 ಕೋಟಿ ಕಾಮಗಾರಿಗೆ ಶಿಫಾರಸು ಮಾಡಿದ್ದರು. ಅದರಲ್ಲಿ ₹ 1.99 ಕೋಟಿ ಮೊತ್ತದ ಕೆಲಸಗಳಿಗೆ ಅನುಮೋದನೆ ದೊರೆತಿದೆ.

ಕಾಂಪೌಂಡ್‌, ಶೌಚಾಲಯ: 2014-15ನೇ ಸಾಲಿನಲ್ಲಿ ಸೌಂದಲಗಾದಲ್ಲಿ ಶಾದಿಮಹಲ್‌ ನಿರ್ಮಾಣಕ್ಕೆ ಹಣ ನೀಡಿದ್ದಾರೆ. ಮರಾಠಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಾಂಪೌಂಡ್‌, ವೃತ್ತಗಳು, ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ, ರಸ್ತೆಗಳಿಗೆ ಪೇವರ್ಸ್‌ ಅಳವಡಿಕೆ, ಶೌಚಾಲಯ ನಿರ್ಮಾಣ, ಬಸ್‌ನಿಲ್ದಾಣಗಳು ಮೊದಲಾದ ಕಾಮಗಾರಿಗಳ ಬೇಡಿಕೆಗೆ ಸ್ಪಂದಿಸಿದ್ದಾರೆ. ₹ 2.42 ಕೋಟಿಗೆ ಶಿಫಾರಸು ಮಾಡಿದ್ದರು. ₹ 1.99 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

2015–16ರಲ್ಲಿ ಕುನ್ನೂರು, ಅಕ್ಕೋಳದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಾಲೊನಿಗಳ ರಸ್ತೆ ಅಭಿವೃದ್ಧಿಪಡಿಸಿದ್ದಾರೆ. ಬೇಡಕಿಹಾಳ, ಬೋಜ, ಬೋರಗಾಂವದಲ್ಲಿ ಸಮುದಾಯ ಭವನ ಕಟ್ಟಲು ನೆರವು ಕಲ್ಪಿಸಿದ್ದಾರೆ. ಕೇಳಿದ್ದ ₹ 1.98 ಕೋಟಿಗೂ ಜಿಲ್ಲಾಡಳಿತ ಅನುದಾನ ನೀಡಿದೆ.

ಒಂದೇ ವರ್ಷ 20 ಹಳ್ಳಿಗಳಲ್ಲಿ: 2016–17ನೇ ಸಾಲಿನಲ್ಲಿ ವಿವಿಧ ಹಳ್ಳಿಗಳಲ್ಲಿ 20 ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ಹಣಕಾಸು ಒದಗಿಸಿದ್ದಾರೆ. ಸಮುದಾಯ ಭವನಕ್ಕೆ ನೆರವು ಮುಂದುವರಿಸಿದ್ದಾರೆ.

ಕುಸನಾಳದಲ್ಲಿ ಮಾರುತಿ, ಮಾನಕಪುರದಲ್ಲಿ ಬೀರದೇವರು ಹಾಗೂ ಬೆನಡಿಯಲ್ಲಿ ಹನುಮಾನ ದೇವಸ್ಥಾನ ಅಭಿವೃದ್ಧಿಗೆ, ಕೆಲವು ಅಂಗವಿಕಲರಿಗೆ ತ್ರಿಚಕ್ರವಾಹನಗಳನ್ನು ಕೊಡಿಸಿದ್ದಾರೆ. ₹ 1.65 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರು. ₹ 1.49 ಕೋಟಿಗಷ್ಟೇ ಅನುಮೋದನೆ. ಅಂದರೆ ₹ 51 ಲಕ್ಷ ಬಳಕೆಗೆ ಕ್ರಮ ಕೈಗೊಂಡಿಲ್ಲ.

2017–18ನೇ ಸಾಲಿನಲ್ಲಿ ಕೇವಲ 16 ಕಾಮಗಾರಿಗಳಿಗಷ್ಟೇ ಹಣ ಪಡೆದಿದ್ದಾರೆ. ಅದರಲ್ಲಿ 9 ಮಂದಿಗೆತ್ರಿಚಕ್ರವಾಹನ ಖರೀದಿಗೆ ನೆರವು ನೀಡಿದ್ದಾಗಿವೆ.

ನಿಪ್ಪಾಣಿ ಪಟ್ಟಣದಲ್ಲಿ ಗುರು ಭವನ ನಿರ್ಮಾಣಕ್ಕೆ ₹ 1 ಕೋಟಿ ಕೇಳಿದ್ದಾರೆ. ಆದರೆ, ಈ ಸಾಲಿನಲ್ಲಿ ₹ 95ಲಕ್ಷಕ್ಕಷ್ಟೇ ಅನುಮೋದನೆ ಸಿಕ್ಕಿದೆ. ಮೊದಲ ಕಂತಾಗಿ ₹ 7.12 ಲಕ್ಷ ಮಾತ್ರ ಬಿಡುಗಡೆಯಾಗಿದೆ! ಬಳಸಿಕೊಳ್ಳಬೇಕಾದ ಅನುದಾನ ಇನ್ನೂ ಬಹಳಷ್ಟಿರುವುದನ್ನು ದಾಖಲೆಗಳು ಹೇಳುತ್ತಿವೆ.

ನಂತರ ತಿಳಿಯಿತು: ಈ ಕುರಿತು ಪ್ರತಿಕ್ರಿಯಿಸಿದ ಶಶಿಕಲಾ, ‘ಈ ನಿಧಿಯ ಹಣವನ್ನು ಯಾವುದಕ್ಕೆ ಹಂಚಿಕೆ ಮಾಡಬೇಕು ಎನ್ನುವುದು ಮೊದಲಿಗೆ ಸರಿಯಾಗಿ ತಿಳಿದಿರಲಿಲ್ಲ. ಜನರಿಂದ ಸಾಮಾನ್ಯವಾಗಿ ಏನು ಬೇಡಿಕೆಗಳು ಬರುತ್ತವೆ ನೋಡೋಣ ಎಂದು ಕಾದಿದ್ದೆ. ಅವರ ಕೋರಿಕೆಗೆ ತಕ್ಕಂತೆ ನಂತರ ಹಲವು ಕಾಮಗಾರಿಗಳಿಗೆ ಹಣ ಕೊಡಿಸಿದ್ದೇನೆ. ಬಹುತೇಕ ಹಣ ಖರ್ಚಾಗಿದೆ’ ಎಂದು ತಿಳಿಸಿದರು.

‘ವಿವಿಧೆಡೆ ಶಾಲೆಗಳಿಗೆ ಕಟ್ಟಡಗಳು, ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ ನಿಲ್ದಾಣಗಳು, ಕುಡಿಯುವ ನೀರು ಶುದ್ಧೀಕರಣ ಘಟಕಗಳ ಅಳವಡಿಕೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಹುಜನರಿಗೆ ಪ್ರಯೋಜನ ಆಗುವಂತಹ ಬೇಡಿಕೆಗಳಿಗೆ ಆದ್ಯತೆ ಮೇರೆಗೆ ಸ್ಪಂದಿಸಿದ್ದೇನೆ. ವಿವಿಧೆಡೆ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು, ಹೆಚ್ಚುವರಿ ಆರ್ಥಿಕ ನೆರವು ಕಲ್ಪಿಸಿದ್ದೇನೆ’ ಎಂದು ಹೇಳಿದರು.

*
ಕ್ಷೇತ್ರದಲ್ಲಿ ಮಂದಿರಗಳ ಜೀರ್ಣೋದ್ಧಾರಕ್ಕೆ ಹೆಚ್ಚಿನ ಹಣ ಒದಗಿಸಿದ್ದೇನೆ. ಸ್ಮಶಾನಗಳ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇನೆ.
–ಶಶಿಕಲಾ ಜೊಲ್ಲೆ, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.