ADVERTISEMENT

ಸರ್ಕಾರದ ವಿರುದ್ಧ ದಸಂಸ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 10:45 IST
Last Updated 16 ಫೆಬ್ರುವರಿ 2011, 10:45 IST

ಬೆಳಗಾವಿ: ‘ದಲಿತರ ಅಭಿವೃದ್ಧಿ ಕಡೆಗಣಿಸಿರುವ, ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ರಾಜ್ಯಪಾಲರನ್ನು ಆಗ್ರಹಿಸಿದರು.

ಕಳೆದ ಸಾಲಿನಲ್ಲಿ ದಲಿತರ ಅಭಿವೃದ್ಧಿಗಾಗಿ 3,268 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಕೇವಲ 1,711 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ನಿಗದಿತ ಹಣ ಖರ್ಚು ಮಾಡದೆ ದಲಿತರ ಅಭಿವೃದ್ಧಿ ಹಿನ್ನೆಡೆಗೆ ಕಾರಣರಾಗಿದ್ದಾರೆ ಎಂದು ದೂರಿದರು.

ದಲಿತ ವಿದ್ಯಾರ್ಥಿಗಳ ವಸತಿ ಗೃಹಗಳು ದನದ ಕೊಟ್ಟಿಗೆಗಳಾಗಿವೆ. ಗುಣಮಟ್ಟದ ಆಹಾರ ನೀಡುತ್ತಿಲ್ಲ. ವಿದ್ಯಾರ್ಥಿ ವೇತನ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ ಬಿಡುಗಡೆ ಮಾಡದ್ದರಿಂದ ತರಗತಿಗಳಿಗೆ ಪ್ರವೇಶ ನಿಡುತ್ತಿಲ್ಲ ಎಂದು ಆಪಾದಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ ಹೆಸರಿಗೆ ಎಂಬಂತಿದೆ. ನಿಗಮದಿಂದ ಸರಿಯಾಗಿ ಕೆಲಸಗಳು ಆಗುತ್ತಿಲ್ಲ. ಭೂ ಕಬಳಿಕೆಯಲ್ಲಿ ದಾಖಲೆ ಸಮೇತ ಸಿಕ್ಕು ಬಿದ್ದಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಸಿ ಕೊಂಡಿದೆ. ಆದ್ದರಿಂದ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. ವಿಭಾಗೀಯ ಸಂಚಾಲಕ ಮಲ್ಲೇಶ ಕುರಂಗಿ, ಜಿಲ್ಲಾ ಸಂಚಾಲಕ ಬಾಬು ಪೂಜಾರಿ, ರೇಖಾ ತೊರಗಲ್ಲ, ಶಂಕರ ದೊಡಮನಿ, ಭಾವಕಣ್ಣ ಭಂಗ್ಯಾಗೋಳ ಪಾಲ್ಗೊಂಡಿದ್ದರು.

ಮನವಿ:
  ವಿಶ್ವ ಕನ್ನಡ ಸಮ್ಮೇಳನ ಅಂಗವಾಗಿ ಕೋಕಾಗಳನ್ನು ತೆರವುಗೊಳಿಸ ಲಾಗುತ್ತಿದೆ. ಮಾನವೀಯ ದೃಷ್ಟಿಯಿಂದ ಕೋಕಾ ಅಂಗಡಿಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಆಲ್ ಇಂಡಿಯಾ ದಲಿತ ಯೂಥ್ ಆರ್ಗನೈಸೇಷನ್ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಹಲವಾರು ವರ್ಷಗಳಿಂದ ಬಡವರು ಪಾಲಿಕೆಯ ಅನುಮತಿ ಪಡೆದುಕೊಂಡು ಕೋಕಾಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅದೇ ಅವರ ಕುಟುಂಬ ಆದಾಯದ ಮೂಲವಾಗಿದೆ. ಈಗ ಏಕಾಏಕಿ ತೆರವುಗೊಳಿಸಿದರೆ ಆ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ದೂರಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನದ ಹೆಸರಿನಲ್ಲಿ ಬಡವರ ಅನ್ನ ಕಸಿದುಕೊಳ್ಳುವುದು ಸರಿಯಲ್ಲ. ಆದ್ದರಿಂದ ಅವರ ಬಗೆಗೆ ಅನುಕಂಪದ ಆಧಾರದ ಮೇಲೆ ಕ್ರಮಕೈಗೊಳ್ಳಬೇಕು ಎಂದು ಗಜು ಧರನಾಯಕ, ಮಲ್ಲೇಶ ಚೌಗಲೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.