ADVERTISEMENT

ಸರ್ಕಾರದ ವೈಫಲ್ಯ: ಜೆಡಿಎಸ್ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 6:45 IST
Last Updated 11 ಜನವರಿ 2012, 6:45 IST

ಬೆಳಗಾವಿ: ಅಧಿಕಾರಕ್ಕಾಗಿ ಬಿಜೆಪಿಗೆ ಬಂದವರೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹಿಂದಿದ್ದಾರೆ. ಅಧಿಕಾರವಿದ್ದರೆ ಇರುತ್ತಾರೆ. ಇಲ್ಲದಿದ್ದರೆ ಇಲ್ಲ. ಹೀಗಾಗಿ ಯಡಿಯೂರಪ್ಪನವರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟದ ದಿನಗಳು ಎದುರಾಗಲಿವೆ ಎಂದು ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಯಡಿಯೂರಪ್ಪ ಸುತ್ತ ಇರುವ ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ ಕತ್ತಿ ಹಾಗೂ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಅವರಂತಹವರು ಅಧಿಕಾರಕ್ಕಾಗಿ ಬೇರೆ ಪಕ್ಷದಿಂದ ಬಿಜೆಪಿಗೆ ಬಂದಿದ್ದಾರೆ. ಅವರು ಚೆನ್ನಾಗಿರುವ ನಾಟಕ ಕಂಪೆನಿಗಳಲ್ಲಿ ಇರುತ್ತಾರೆ. ಇಲ್ಲಿ ಚೆನ್ನಾಗಿ ನಡೆಯುವುದಿಲ್ಲ ಎಂದು ಗೊತ್ತಾಗುತ್ತಿದ್ದಯೇ ಇನ್ನೊಂದು ಕಂಪೆನಿಗೆ ಹೋಗುತ್ತಾರೆ ಎಂದು ಅವರು ಟೀಕಿಸಿದರು.

`ಲಿಂಗಾಯತರು ವಿದ್ಯಾವಂತರಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಹೋರಾಟ ನೋಡಿ ಅಭಿಮಾನದಿಂದ ಮತ ಹಾಕಿರಬಹುದು. ಅವರ ಮೂರು ವರ್ಷದ ಆಡಳಿತ ನೋಡಿದ ಮೇಲೆ ಭ್ರಮ ನಿರಸನಗೊಂಡಿದ್ದಾರೆ. ಇನ್ನು ಮುಂದೆ ಮತ್ತೊಮ್ಮೆ ಅವರನ್ನು ಬೆಂಬಲಿಸುವ ತಪ್ಪು ಮಾಡುವುದಿಲ್ಲ~ ಎಂಬ ಅಭಿಪ್ರಾಯವನ್ನು ಮಂಗಳವಾರ ಸುದ್ದಿಗಾರರೊಂದಿಗೆ ಹಂಚಿಕೊಂಡರು.

`ಸಂಕ್ರಾಂತಿಯ ನಂತರ ಬಿ.ಎಸ್. ಯಡಿಯೂರಪ್ಪ ಅವರು ಮಾನಸಿಕವಾಗಿ ಮತ್ತಷ್ಟು ಕುಸಿಯಲಿದ್ದಾರೆ. ಮುಂದೆ ಅವರೆಂದೂ ಮುಖ್ಯಮಂತ್ರಿಯಾಗುವುದಿಲ್ಲ. ಮಾಜಿಯಾಗಿಯೇ ಉಳಿಯಲಿದ್ದಾರೆ~ ಎಂದರು.

`ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆಗಳ ಬಗೆಗೆ ಜನರು ಇಂದಿಗೂ ಮಾತನಾಡುತ್ತಾರೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಜಗಳದ ಲಾಭ ಪಡೆದುಕೊಳ್ಳಲು ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಲಾಗುವುದು~ ಎಂದು ಅವರು ಹೇಳಿದರು.

`ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜವನ್ನು ಹಾರಿಸಿದ್ದು ಸಂಘ ಪರಿವಾರ ಹಾಗೂ ಬಿಜೆಪಿಯವರು. ಆದರೆ ಸರ್ಕಾರ ಯಾವುದೇ ಕಾರಣಕ್ಕೂ ಈ ಹೆಸರು ಹೊರಗೆ ಬರದಂತೆ ಒತ್ತಡ ಹೇರಿರುವುದರಿಂದ ಶ್ರೀರಾಮ ಸೇನೆ ಹೆಸರು ಹೇಳಲಾಗುತ್ತಿದೆ. ಮುತಾಲಿಕ್ ಅವರನ್ನು ವಿರೋಧಿಸುವ ಬಿಜೆಪಿ ನಾಯಕರು ಶ್ರೀರಾಮಸೇನೆ ಮುಗಿಸಲು ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು~ ಎಂದು ಆಗ್ರಹಿಸಿದರು.

ರ‌್ಯಾಲಿ: ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಸಿಂದಗಿ ಧ್ವಜ ಪ್ರಕರಣದ ತನಿಖೆಗೆ ಆಗ್ರಹಿಸಿ ಮಂಗಳವಾರ ನಗರದ ಕಿತ್ತೂರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ‌್ಯಾಲಿ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸುವ ಮೂಲಕ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡಿದೆ. ಅದನ್ನು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮೇಲೆ ಹಾಕುವ ಕುತಂತ್ರ ಯೋಜನೆ ರೂಪಿಸಲಾಗಿತ್ತು. ಅದು ವಿಫಲವಾಗಿದೆ. ಬಿಜೆಪಿ ಸರ್ಕಾರ ಭಾಗಿಯಾಗಿರುವ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಫೈಜುಲ್ಲಾ ಮಾಡಿವಾಲೆ, ಪ್ರಮೀಳಾ ಹಂಪಣ್ಣವರ, ಸಯ್ಯದ್ ಮನ್ಸೂರ ಮತ್ತಿತರರು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.