ADVERTISEMENT

ಸಾಲ ಮನ್ನಾಕ್ಕಾಗಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 10:50 IST
Last Updated 30 ಅಕ್ಟೋಬರ್ 2011, 10:50 IST

ಬೆಳಗಾವಿ: ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಬೆಳಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಾಸಾಬ ದೇಸಾಯಿ, “ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಸತತ ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಸಚಿವರು ಸೇರಿದಂತೆ ಹಲವರಿಗೆ ಈ ಬಗ್ಗೆ ಸುಮಾರು 300ಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದೇವೆ.

ಆದರೆ, ಇದುವರೆಗೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿರುವುದನ್ನು ನೋಡಿದರೆ, ನಾವೆಲ್ಲ ಅಸ್ಪೃಶ್ಯ- ಬಹಿಷ್ಕೃತರೇ ಎಂಬ ಸಂದೇಹ ಮೂಡುತ್ತಿದೆ. ನಮ್ಮ ಸಾಲ ಮನ್ನಾ ಮಾಡಬೇಕು ಇಲ್ಲವೇ, ಸಾಲಗಾರ ರೈತರನ್ನು ಸರ್ಕಾರ ಮಾರಾಟ ಮಾಡಬೇಕು” ಎಂದು ಒತ್ತಾಯಿಸಿದರು.
“
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಲ ಮನ್ನಾ ಸೌಲಭ್ಯ ಸಣ್ಣ ರೈತರಿಗೆ ದೊರಕಿಲ್ಲ. 1994- 95ರಲ್ಲಿ ಕಬ್ಬು ಕಾರ್ಖಾನೆಗಳಿಗೆ ಹೋಗದೇ ಇರುವುದರಿಂದ ರೈತರು ಕಬ್ಬಿಗೆ ಬೆಂಕಿ ಹಚ್ಚಿರುವುದರಿಂದ ಸಾಲ ಮಾಡುವಂತಾಗಿದೆ.

1997ರಲ್ಲಿ ರೈತರು ಬೆಳೆದ ಆಲುಗಡ್ಡೆಗೆ ಬೆಲೆ ಸಿಗದೇ ಸುಮಾರು ಒಂದು ನೂರು ಕೋಟಿ ರೂಪಾಯಿ ಹಾನಿ ಅನುಭವಿಸುವಂತಾಗಿದೆ. ಕ್ಯಾಬೀಜಕ್ಕೂ ಬೆಲೆ ಸಿಗದಿರುವದರಿಂದ ಹೊಲದಲ್ಲೇ ಬೆಳೆ ಕೊಳೆತು ಸುಮಾರು 25 ಕೋಟಿ ರೂಪಾಯಿ ನಷ್ಟವಾಗಿದೆ.

2001ರಲ್ಲಿ ಬರಗಾಲ ಹಾಗೂ 2005-06ರಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸಾಲಗಾರರಾಗುವಂತಾಗಿದೆ. ಇದೀಗ ಸಾಲ ಮನ್ನಾ ಮಾಡದಿದ್ದರೆ, ಜಿಲ್ಲೆಯ ರೈತರು ಸಾಲದ ಸುಳಿಗೆ ಸಿಲುಕಿ ಮಣ್ಣಾಗುವ ಸ್ಥಿತಿ ನಿರ್ಮಾಣವಾಗಿದೆ” ಎಂದು ವಿವರಿಸಿದರು.

“ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳ್ಳುತ್ತಿದೆ. ಜನಪ್ರತಿನಿಧಿಗಳ ವೇತನವೂ ದುಪ್ಪಟ್ಟಾಗಿದೆ. ಇಂಥ ಸಂದರ್ಭದಲ್ಲಿ ಬ್ರಿಟಿಷರ ಕಾಲದದಿಂದ ರೈತರ ಬೆಳೆ ಹಾನಿಗೆ ನೀಡುವ ರೂ. 400 ಪರಿಹಾರವನ್ನೇ ಇಂದಿಗೂ ನೀಡುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಈ ತಾರತಮ್ಯವನ್ನು ಕೂಡಲೇ ಕೈಬಿಟ್ಟು, ರೈತರ ಖಾಸಗಿ ಸಂಸ್ಥೆಗಳ ಸಾಲಗಳನ್ನೂ ಕೃಷಿ ಸಾಲವೆಂದು ಪರಿಗಣಿಸಿ ಮನ್ನಾ ಮಾಡಬೇಕು. ರೈತರಿಗೆ ಅಗತ್ಯವಿರುವ ಸಾಲವನ್ನು ಶೇ. 1 ಬಡ್ಡಿ ದರದಲ್ಲಿ ನೀಡಬೇಕು. ಅಲ್ಲಿಯವರೆಗೂ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಅಪ್ಪಾಸಾಬ ದೇಸಾಯಿ ತಿಳಿಸಿದರು.

ಸತ್ಯಾಗ್ರಹದಲ್ಲಿ ಕಲಗೌಡ ಪಾಟೀಲ, ಶಿದಲಿಂಗ ಮುದ್ದಣ್ಣವರ, ಮಾರುತಿ ಕಡೇಮನಿ, ಕಲುನಿ ಕಣಬರಕರ, ಭೈರು ಡಂಗರಲೆ, ದುಂಡಪ್ಪ ಹೊಸಪೇಟ, ಯಲ್ಲಪ್ಪ ದುಡುಂ, ಬಸು ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.