ADVERTISEMENT

ಸ್ವಾವಲಂಬನೆಗೆ ರೇಣುಕಾ ಶುಗರ್ಸ್‌ ನೆರವು

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 10:25 IST
Last Updated 18 ಜನವರಿ 2011, 10:25 IST

ರಾಯಬಾಗ: ಸಕ್ಕರೆ ಉದ್ದಿಮೆಯಲ್ಲಿ ಖ್ಯಾತಿ ಗಳಿಸಿರುವ ಶ್ರೀ ರೇಣುಕಾ ಶುಗರ್ಸ್ ಸಂಸ್ಥೆಯು ರಾಯಬಾಗ ಪಾಲಿಟೆಕ್ನಿಕ್ ಮೂಲಕ ನಿರುದ್ಯೋಗಿಗಳಿಗೆ ವೃತ್ತಿಪರ ತರಬೇತಿ ನೀಡಲು ಸಿದ್ಧತೆ ನಡೆಸಿದೆ.ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಜ್ಞಾನೇಶ್ವರ ಸಾಳುಂಕೆ ಅವರು ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಯಬಾಗದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ರೇಣುಕಾ ಶುಗರ್ಸ್‌ ಸಂಸ್ಥೆ 30 ವರ್ಷಗಳ ಗುತ್ತಿಗೆ ಪಡೆದ ನಂತರ  ಪಾಲಿಟೆಕ್ನಿಕ್‌ನ್ನು ಮೇಲ್ದರ್ಜೆಗೆ ಏರಿಸಿದೆ. ಅಲ್ಲದೆ ವಿವಿಧ ಹೊಸ ವೃತ್ತಿ ಪರ ಕೋರ್ಸ್ ಪ್ರಾರಂಭಿಸಿ  ಬಡವರ ಬದುಕಿಗೆ ಆಸರೆ ಆಗಿದೆ ಎಂದು ಹೇಳಿದ್ದಾರೆ.

ರಾಯಬಾಗ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯಲ್ಲಿ 50 ಎಕರೆ ಪ್ರದೇಶದಲ್ಲಿ ರೈತರಿಗೆ ಸಹಾಯಕವಾಗುವ ರೀತಿಯಲ್ಲಿ ನೂತನವಾಗಿ ಕಬ್ಬು ಬೆಳೆಯ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲಾಗುವುದು. ರೈತರು ಇನ್ನೂ ಹಳೆಯ ಕಬ್ಬಿನ ತಳಿಗಳನ್ನೆ ಬಳಸುತ್ತಿದ್ದಾರೆ. ಇದರಿಂದ ಇಳುವರಿ ಕಡಿಮೆಯಾಗಿದೆ. ಹೊಸ ತಳಿಗಳನ್ನು ಬೆಳೆಯಲು ಕಾರ್ಖಾನೆಯಿಂದಲೇ ಬೀಜ ಪೂರೈಸುವುದಾಗಿ ತಿಳಿಸಿದ್ದಾರೆ.

ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ ಬಿದ್ದಾಗ ಯಂತ ಬಳಸಲಾಗುವುದು. ಆದರೆ ರೈತರು ಈಗ ಬೆಳೆಯುತ್ತಿರುವ ಮಾದರಿಯಲ್ಲಿ ಕಬ್ಬು ನಾಟಿ ಮಾಡಿದರೆ ಅದು ಸಾಧ್ಯವಿಲ್ಲ.ಆದ್ದರಿಂದ ರೈತರು ಯಂತ್ರದ ಸಹಾಯದಿಂದ ಕಟಾವ್ ಮಾಡ ಬಯಸಿದರೆ ಕಾರ್ಖಾನೆ ಮಾರ್ಗದರ್ಶನದಲ್ಲಿ ನಿಗದಿತ ಅಂತರದಲ್ಲಿ ನಾಟಿ ಮಾಡಬೇಕು ಎಂದು ಹೇಳಿದ್ದಾರೆ.

ರೈತರು, ಕಾರ್ಮಿಕರು ಮತ್ತು ಸಿಬ್ಬಂದಿಗೆ ಆರೋಗ್ಯ, ಶೈಕ್ಷಣಿಕ ಹಾಗೂ ಆರ್ಥಿಕಮಟ್ಟ ಸುಧಾರಣೆಗೆ ಆದ್ಯತೆ ನೀಡಿದೆ. ಇದಕ್ಕೆ ಪೂರಕ ಎಂಬಂತೆ ರಾಯಬಾಗ ಪಾಲಿಟೆಕ್ನಿಕ್‌ಗೆ ಕಾಯಕಲ್ಪ ನೀಡಿ 55 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ, 100 ವಿದ್ಯಾಥಿಗಳಿಗೆ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಹಾಸ್ಟೆಲ್ ಕಟ್ಟಡ ಮತ್ತು 35 ಲಕ್ಷ ರೂ. ವೆಚ್ಚದಲ್ಲಿ ಯಂತ್ರೋಪಕರಣಗಳಿಗೆ ಹಣ ಬಿಡುಗಡೆ ಮಾಡಿದೆ ಎಂದು ಸಾಳುಂಕೆ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.