ADVERTISEMENT

ಹೊಲ, ಹುಲ್ಲುಗಾವಲು ಜಲಾವೃತ

ಮುಂದುವರಿದ ಕೃಷ್ಣೆ, ಉಪನದಿಗಳ ಪ್ರವಾಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2013, 8:01 IST
Last Updated 25 ಜುಲೈ 2013, 8:01 IST
ಖಾನಾಪುರ ತಾಲ್ಲೂಕಿನ ಮಂತುರ್ಗಾ ಸಮೀಪದ ಅಲಾತ್ರಿ ಹಳ್ಳದಲ್ಲಿ ನೀರು ಅಳತೆಗೂ ಮೀರಿ ಹರಿಯುತ್ತಿರುವುದರಿಂದ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ.
ಖಾನಾಪುರ ತಾಲ್ಲೂಕಿನ ಮಂತುರ್ಗಾ ಸಮೀಪದ ಅಲಾತ್ರಿ ಹಳ್ಳದಲ್ಲಿ ನೀರು ಅಳತೆಗೂ ಮೀರಿ ಹರಿಯುತ್ತಿರುವುದರಿಂದ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ.   

ಚಿಕ್ಕೋಡಿ: ಕೊಂಕಣ ಪ್ರದೇಶದಲ್ಲಿ ಧೋ ಧೋ ಎಂದು ಸುರಿಯುತ್ತಿರುವ `ಮಹಾ'ಮಳೆಯ ಮೊರೆತ ಮುಂದುವರಿದಿದೆ. ಇದರಿಂದ ತಾಲ್ಲೂಕಿನಲ್ಲಿ ತನ್ನೊಡಲ ಮಕ್ಕಳನ್ನು ಸಲಹುತ್ತಾ ಬಂದಿರುವ ಕೃಷ್ಣೆ ಮತ್ತು ಉಪನದಿಗಳು ಒಡಲು ಉಕ್ಕಿ ಹರಿದು ಇಕ್ಕೆಲ್ಲಗಳಲ್ಲಿ ಬೆಳೆದು ನಿಂತ ಬೆಳೆಗಳಿಗೆ ನುಗ್ಗುತ್ತಿವೆ. ಕೊಯ್ನಾ ಜಲಾಶಯದಿಂದಲೂ ನೀರು 50,270 ಕ್ಯೂಸೆಕ್  ಬಿಡುಗಡೆ ಮಾಡಲಾಗುತ್ತಿದೆ.

ಮಹಾರಾಷ್ಟ್ರದಿಂದ ಒಟ್ಟು ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣೆಯ ಮಡಿಲಿನಲ್ಲಿ 1,61,220 ಕ್ಯೂಸೆಕ್ ನೀರು ಹರಿಯುತ್ತಿದೆ.
ಕೊಯ್ನಾ ಜಲಾಶಯದಿಂದ 50,270 ಸೇರಿದಂತೆ ರಾಜಾಪುರ ಬ್ಯಾರೇಜ್‌ನಿಂದ 1,34,447 ಕ್ಯೂಸೆಕ್ ಹಾಗೂ ದೂಧಗಂಗಾ ಬ್ಯಾರೇಜ್‌ನಿಂದ 26,752 ಕ್ಯೂಸೆಕ್ ನೀರು ಕೃಷ್ಣೆಗೆ ಹರಿದು ಬರುತ್ತಿದೆ.

ಇದರಿಂದ ಪಂಚಗಂಗಾ, ವೇದಗಂಗಾ, ದೂಧಗಂಗಾ, ಚಿಕುತ್ರಾ ಮತ್ತು ಕೃಷ್ಣಾ ನದಿಗಳು ಮೈದುಂಬಿಕೊಂಡು ಹರಿಯುತ್ತಿವೆ. ತಾಲ್ಲೂಕಿನ ಮಾಂಗೂರ, ಕುನ್ನೂರ, ಕಾರದಗಾ, ಬಾರವಾಡ ಬಳಿ ವಿಶಾಲವಾಗಿ ಹರಡಿಕೊಂಡಿರುವ ದೂಧಗಂಗಾ ನದಿ ಸಾವಿರಾರು ಎಕರೆ ಕಬ್ಬು, ಸೋಯಾಅವರೆ, ಶೇಂಗಾ ಮೊದಲಾದ ಬೆಳೆಗಳಿಗೆ ನುಗ್ಗಿದೆ. ನದಿದಂಡೆಯ ಹುಲ್ಲುಗಾವಲುಗಳೂ ಜಲಾವೃತಗೊಂಡಿರುವುದರಿಂದ ಜಾನುವಾರುಗಳ ಮೇವಿಗಾಗಿ ಜನರು ಪರದಾಡುತ್ತಿದ್ದಾರೆ.

ವೇದಗಂಗಾ ನದಿ ನೀರು  ಹುನ್ನರಗಿ, ಸಿದ್ನಾಳ, ಯಮಗರ್ಣಿ, ಜತ್ರಾಟ, ದೂಧಗಂಗಾ ನದಿಯ ದಂಡೆಯ ಕಾರದಗಾ, ಕೃಷ್ಣಾ ನದಿ ತೀರದ ಇಂಗಳಿ ಮೊದಲಾದ ಗ್ರಾಮಗಳಲ್ಲಿ ನದಿದಂಡೆಗೆ ಹೊಂದಿಕೊಂಡಿರುವ ಮನೆಗಳಿಗೆ ಲಗ್ಗೆ ಇಡಲು ನೀರು ಹವಣಿಸುತ್ತಿದೆ. ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಹಿಪ್ಪರಗಿ ಜಲಾಶಯದಿಂದ 12 ಕ್ರಸ್ಟ್‌ಗೇಟ್‌ಗಳ ಮೂಲಕ 1,54,100 ಕ್ಯೂಸೆಕ್‌ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನದಿ ನೀರಿನ ಏರಿಕೆ ವೇಗ ಪಡೆದುಕೊಂಡಿಲ್ಲ.

ಬುಧವಾರ ಕೃಷ್ಣಾ ನದಿ ನೀರು ಕೇವಲ ಒಂದು ಅಡಿಯಷ್ಟು ಮಾತ್ರ ಏರಿಕೆಯಾಗಿದೆ. ಕುನ್ನೂರ-ಮಾಂಗೂರ ಮಧ್ಯೆದ ಸೇತುವೆಯೂ ಮುಳುಗಡೆಯ ಭೀತಿಯಲ್ಲಿದೆ. ನದಿಗಳ ಹಿನ್ನಿರಿನಲ್ಲಿ ಅಂಕಲಿ-ಬಾವಾನಸೌಂದತ್ತಿ, ಶಿರದವಾಡ ಗ್ರಾಮದ ದರ್ಗಾದಿಂದ ಜನವಾಡ ಗ್ರಾಮವನ್ನು ಸಂಪರ್ಕಿಸುವ ರಸ್ತೆ, ಕುನ್ನೂರ-ಗಜಬರವಾಡಿ ಸಂಪರ್ಕಿಸುವ ರಸ್ತೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.

ತಾಲ್ಲೂಕಿನ ಕೃಷ್ಣಾ ನದಿಯ ಕಲ್ಲೋಳ ಸೇತುವೆ ಮೇಲೆ ಸುಮಾರು 18 ಅಡಿ, ವೇದಗಂಗಾ ನದಿಯ ಜತ್ರಾಟ ಸೇತುವೆ ಮೇಲೆ 12 ಅಡಿ, ದೂಧಗಂಗಾ ನದಿಯ ಸದಲಗಾ, ಕಾರದಗಾ, ಮಲಿಕವಾಡ ಮತ್ತು ಭೋಜ ಸೇತುವೆಗಳ ಮೇಲೆ 7 ಅಡಿಯಷ್ಟು ನೀರು ಹರಿಯುತ್ತಿದೆ.

ದೂಧಗಂಗಾ ಮತ್ತು ವೇದಗಂಗಾ ನದಿ ನೀರು ಎರಡು ಅಡಿಯಷ್ಟು ಏರಿಕೆ ಕಂಡಿದ್ದು, ಸದಲಗಾದ ಮಾರುತಿ ಮಂದಿರ, ಕಾರದಗಾ ಗ್ರಾಮದ ಗ್ರಾಮದೇವರಾದ ಬಂಗಾಲಿ ಬಾಬಾ ದೇವಸ್ಥಾನ, ರೇಣುಕಾ ಮಂದಿರ, ಗಣಪತಿ ಮಂದಿರ, ದತ್ತ ಮಂದಿರ ಹಾಗೂ ಪಶು ಚಿಕಿತ್ಸಾಲಯ, ಹುನ್ನರಗಿ ಗ್ರಾಮದ ಲಕ್ಷ್ಮೀ ನರಸಿಂಗ ದೇವಸ್ಥಾನಗಳು ನೀರಿನಿಂದ ಜಲಾವೃತಗೊಂಡಿವೆ.

`ತಾಲ್ಲೂಕಿನಲ್ಲಿ ಕೃಷ್ಣಾ ನದಿ ಹರಿವಿನಲ್ಲಿ ಬುಧವಾರ ಕೇವಲ 6 ಇಂಚು ಮಾತ್ರ ಏರಿಕೆಯಾಗಿದೆ. ಆಲಮಟ್ಟಿ ಜಲಾಶಯದ ಅಷ್ಟೂ ಗೇಟ್‌ಗಳ ಮೂಲಕ ನೀರು ಹೊರ ಬಿಡುತ್ತಿರುವುದರಿಂದ ನೀರು ರಭಸವಾಗಿ ಹರಿದು ಹೋಗುತ್ತಿದೆ. 

ಮುಂಜಾಗ್ರತಾ ಕ್ರಮವಾಗಿ ನದಿತೀರದ ಜನವಸತಿ ಪ್ರದೇಶಗಳಿಂದ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ. ಇದುವರೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ' ಎಂದು ತಹಸೀಲ್ದಾರ ರಾಜಶೇಖರ ಡಂಬಳ `ಪ್ರಜಾವಾಣಿ'ಗೆ ತಿಳಿಸಿದರು.

ನದಿತೀರದ ಕಲ್ಲೋಳ, ಸದಲಗಾ ಮೊದಲಾದ ಪ್ರದೇಶಗಳಿಗೆ ಎಸ್‌ಪಿ ಡಾ.ಚಂದ್ರಗುಪ್ತ ತೆರಳಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ಮಳೆ ವಿವರ: ಮಹಾರಾಷ್ಟ್ರದ ಕೊಯ್ನಾ: 155ಮಿ.ಮೀ, ನವಜಾ: 262  ಮಿ.ಮೀ, ಮಹಾಬಳೇಶ್ವರ: 141 ಮಿ.ಮೀ, ವಾರಣಾ: 97ಮಿ.ಮೀ, ಸಾಂಗ್ಲಿ: 10.0 ಮಿ.ಮೀ ಮತ್ತು ಕೊಲ್ಹಾಪುರ: 23.0ಮಿ.ಮೀ. ತಾಲ್ಲೂಕಿನ ಚಿಕ್ಕೋಡಿಯಲ್ಲಿ 10.1ಮಿ.ಮೀ, ಅಂಕಲಿ: 5.4ಮಿ.ಮೀ, ನಾಗರಮುನ್ನೋಳಿ: 4.8ಮಿ.ಮೀ, ಸದಲಗಾ: 9.1 ಮಿ.ಮೀ, ಗಳತಗಾ: 7.4ಮಿ.ಮೀ,  ನಿಪ್ಪಾಣಿ: 18.0ಮಿ.ಮೀ, ಜೋಡಟ್ಟಿ: 5.6 ಮಿ.ಮೀ ಮತ್ತು ಸೌಂದಲಗಾ: 15.1ಮಿ.ಮೀ ಮಳೆ ದಾಖಲಾಗಿದೆ.

ಸೇತುವೆಗಳ ಬುಧವಾರದ ನೀರಿನ ಮಟ್ಟ: ಕಲ್ಲೋಳ: 531.30ಮೀ (ಅಪಾಯದ ಮಟ್ಟ: 538.00), ಅಂಕಲಿ: 530.80 (ಅಪಾಯದ ಮಟ್ಟ: 537.00ಮಿ), ಸದಲಗಾ: 535.42 (ಅಪಾಯದ ಮಟ್ಟ: 538.00) ಕುಡಚಿ: 528.30 (ಅಪಾಯದ ಮಟ್ಟ529.00).

`ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ'
ನಿಪ್ಪಾಣಿ:
`ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಎಸ್‌ಪಿ ಡಾ. ಚಂದ್ರಗುಪ್ತ ಹೇಳಿದರು.

ಚಿಕ್ಕೋಡಿ ತಾಲ್ಲೂಕಿನಲ್ಲಿ ಸಂಭವಿಸಬಹುದಾದ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ ಬಂದ ಅವರು ಬುಧವಾರ ಸಾಯಂಕಾಲ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

`ಪ್ರವಾಹ ಪರಿಸ್ಥಿತಿ ಉದ್ಭವಿಸುವ ಕೆಲ ಪ್ರದೇಶಗಳಲ್ಲಿ ಪೂರ್ವವೀಕ್ಷಣೆ ಮಾಡಿ ಗ್ರಾಮಸ್ಥರ ಜತೆ ಚರ್ಚಿಸಿದ್ದೇನೆ. ವಿಕೋಪ ನಿರ್ವಹಣೆಗಾಗಿ ಜಲಾವೃತಗೊಂಡ ಸೇತುವೆಗಳ ಹತ್ತಿರ ಪೊಲೀಸ್ ಸಿಬ್ಬಂದಿ ನಿಯೀಜಿಸಲಾಗಿದೆ. ಎಲ್ಲ ನೋಡಲ್ ಅಧಿಕಾರಿಗಳಿಗೆ ಅವಶ್ಯಕ ಸೂಚನೆಗಳನ್ನು ಕೊಡಲಾಗಿದೆ' ಎಂದು ಹೇಳಿದರು.

ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಹಾವುಗಳ ಉಪಟಳ ಹೆಚ್ಚಾಗಿದ್ದು ಗ್ರಾಮಸ್ಥರಿಂದ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ತಾಲ್ಲೂಕಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆಗಳನ್ನು ಕೊಡಲಾಗಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ನಂತರ ಎಸ್‌ಪಿ ಡಾ. ಚಂದ್ರಗುಪ್ತ ಅವರು ನಗರ ಪೊಲೀಸ್ ಠಾಣೆ, ಗ್ರಾಮೀಣ ಪೊಲೀಸ್ ಠಾಣೆ ಮತ್ತು ಬಸವೇಶ್ವರ ಚೌಕ್ ಠಾಣೆಗಳಿಗೆ ಭೇಟಿ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.