ADVERTISEMENT

‘ನದಿ ಜೋಡಣೆಯಿಂದ ಸಮಸ್ಯೆಗಳಿಗೆ ಪರಿಹಾರ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 10:27 IST
Last Updated 14 ಸೆಪ್ಟೆಂಬರ್ 2013, 10:27 IST

ಬೆಳಗಾವಿ: ‘ನದಿ ಜೋಡಣೆ ಮಾಡುವು ದರಿಂದ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ದೇಶದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದು ಕೇಂದ್ರದ ಮಾಜಿ ಸಚಿವ ಸುರೇಶ ಪ್ರಭು ಪ್ರತಿಪಾದಿಸಿದರು.

ಇಲ್ಲಿನ ಜಿ.ಎಸ್‌. ವಿಜ್ಞಾನ ಪದವಿ ಮಹಾ ವಿದ್ಯಾಲಯದ ಕೆ.ಎಂ.ಗಿರಿ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಭಾರತದ ನದಿ ಜೋಡಣೆಯ ಸಾಧಕ ಬಾಧಕಗಳು’ ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ದೇಶದ ವಿವಿಧ ಸಮಸ್ಯೆಗಳಿಗೆ ನೀರಿನ ಸಮಸ್ಯೆಯೇ ಮೂಲ. ದೇಶದ ನೀರಿನ ಸಮಸ್ಯೆ ಪರಿಹಾರವಾದರೆ ನಗರೀಕರಣ, ಕೈಗಾರಿಕಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರದಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಭಾರತ ದೇಶವು ಅಭಿವೃದ್ಧಿ  ಪಥದತ್ತ ಸಾಗಬೇಕಾದರೆ ನೀರಿನ ಸಮಸ್ಯೆ ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದ ನದಿ ಜೋಡಣೆ ಮಾಡುವ ಯೋಜನೆ ಪ್ರಸ್ತಾವ ಮುಂದಿಟ್ಟಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಸಹ ಮನ್ನಣೆ ಸಿಕ್ಕಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ ನದಿ ಜೋಡಣೆ ಮಾಡುವ ಯೋಜನೆ ನೆನೆಗುದಿಗೆ ಬಿತ್ತು. ನಂತರ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ನದಿ ಜೋಡಣೆ ಮಾಡುವ ಯೋಜನೆಗೆ ತನ್ನ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಿತಾದರೂ, ಯೋಜನೆಯ ಅನುಷ್ಠಾನಕ್ಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ 9 ವರ್ಷ ಕಳೆದರೂ ಯೋಜನೆಗೆ ಪುನಶ್ಚೇತನ ನೀಡುವ ಕಾರ್ಯ ಆಗಿಲ್ಲ’ ಎಂದು ಆಕ್ಷೇಪಿಸಿದರು.

‘ಭಾರತದ ಆರ್ಥಿಕತೆ ಕೃಷಿಯ ಮೇಲೆ ಅವಲಂಬಿತವಾಗಿದೆ. ಕೃಷಿಯಿಂದ ಇತರೆ ಕೈಗಾರಿಕೆಗಳಲ್ಲಿ ಸಹ ಅಭಿವೃದ್ಧಿ ಸಾಧ್ಯ. ಹೀಗಾಗಿ ಲಭ್ಯ ಜಲಸಂಪನ್ಮೂಲಗಳನ್ನು ಸಮರ್ಪಕವಾಗಿ ವಿನಿಯೋಗಿಸಿಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು. ಆಗ ದೇಶವು ಅಭಿವೃದ್ಧಿಪಥದತ್ತ ಸಾಗಲು ಸಾಧ್ಯವಾಗುತ್ತದೆ’ ಎಂದು ಪ್ರಭು ಅಭಿಪ್ರಾಯಪಟ್ಟರು.

‘ಬಿಹಾರ ರಾಜ್ಯದಲ್ಲಿ ಪ್ರತಿಕೂಲ ವಾತಾವರಣವಿದೆ. ಅಲ್ಲಿನ ಶೇ. 80 ರಷ್ಟು ಬರದಿಂದ ತತ್ತರಿಸಿದರೆ, ಇನ್ನುಳಿದ ಶೇ. 20ರಷ್ಟು ಜನರು ಪ್ರವಾಹಕ್ಕೆ ತುತ್ತಾಗಿ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿಯೂ ಇದೇ ಮಾದರಿಯ ಪರಿಸ್ಥಿತಿಯಿದೆ. ಬರಕ್ಕಿಂತ ಪ್ರವಾಹದಿಂದ ಆಗುವ ಅಪಾಯವೇ ಹೆಚ್ಚು. ಇದರಿಂದ ಪಾರಾಗಲು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವಿದೆ’ ಎಂದು ಅವರು ತಿಳಿಸಿದರು.

‘ನಮ್ಮಲ್ಲಿ ಸದ್ಯದ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ಒತ್ತು ನೀಡ ಲಾಗುತ್ತಿದೆ. ನವು ದೂರದೃಷ್ಟಿಯುಳ್ಳ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ ನೀಡದೇ ಇರುವುದರಿಂದ ಭಾರತವು ಸಮಸ್ಯೆಗಳ ವಸ್ತುಸಂಗ್ರಹಾಲಯವಾಗಿದೆ. ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸಲು ಸಮಷ್ಟಿ ಭಾವದ ಅಗತ್ಯವಿದೆ’ ಎಂದು ಅವರು ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್‌.ಅನಂತನ್‌ ಮಾತನಾಡಿ, ‘ನೀರಿನ ಸಮಸ್ಯೆಗಳನ್ನು ರಾಜಕೀಕರಣಗೊಳಿಸಬಾರದು. ಹಿಂದಿನ ಸರ್ಕಾರಗಳು ರೂಪಿಸಿದ ಮಹತ್ವದ ಯೋಜನೆಗಳನ್ನು ಮುಂದಿನ ಸರ್ಕಾರ ಗಳು ಕೈಬಿಡುವ ಪರಿಪಾಠಕ್ಕೆ ಕಡಿವಾಣ ಹಾಕಬೇಕು. ನದಿ ಜೋಡಣೆ ಯೋಜನೆಗೆ ಆದ್ಯತೆ ನೀಡಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಎಲ್ಲರೂ ಶ್ರಮಿಸಬೇಕು’ ಎಂದು ತಿಳಿಸಿದರು.

‘ಯೋಜನಾ ಆಯೋಗವು ಕೇವಲ 5 ವರ್ಷದ ಅವಧಿಗೆ ಕೆಲಸ ಮಾಡಿದರೂ, 50 ವರ್ಷಗಳ ದೂರದೃಷ್ಟಿಯನ್ನು ಇಟ್ಟು ಕೊಂಡು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ದಕ್ಷಿಣ ಕೊಂಕಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್‌.ಡಿ.ಶಾನಭಾಗ, ಎಸ್‌.ಬಿ. ಕೊಯಿಮತ್ತೂರ, ಜಿ. ಎಸ್‌. ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌.ವೈ. ಪ್ರಭು, ಡಾ. ಪಿ.ಟಿ. ಹನಮಗೊಂಡ, ಪ್ರೊ. ಎ.ಕೆ.ಮೆಣಸೆ, ಪ್ರೊ. ಯು.ಎಸ್‌. ಅರಳಿಮಟ್ಟಿ ಉಪಸ್ಥಿತರಿದ್ದರು.

ಬಳಿಕ ನಡೆದ ತಾಂತ್ರಿಕ ಸಮಾವೇಶದಲ್ಲಿ ನದಿ ಜೋಡಣೆ ಸಾಧಕ– ಬಾಧಕಗಳ ಕುರಿತು ಹಲವು ತಜ್ಞರು ವಿಷಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.