ADVERTISEMENT

ಧಾರಾಕಾರ ಮಳೆ: ಕಟ್ಟಡಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 5:05 IST
Last Updated 8 ಆಗಸ್ಟ್ 2022, 5:05 IST

ಬೆಳಗಾವಿ: ಕಳೆದ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ, ಇಲ್ಲಿನ ಹಿಂಡಲಗಾ ಗಣಪತಿ ದೇವಸ್ಥಾನದ ಸಮೀಪ 'ಬುಡಾ' ಕಾಂಪ್ಲೆಕ್ಸ್‌ ಆವರಣಕ್ಕೆ ನೀರು ನುಗ್ಗಿದೆ.

ಈ ಪ್ರದೇಶದ ಮೇಲ್ಭಾಗದಿಂದ ಅಪಾರ ಪ್ರಮಾಣದ ನೀರು ಹರಿದುಬರುತ್ತಿರುವ ಕಾರಣ ವ್ಯಾಪಾರ- ವಹಿವಾಟು ಅಸ್ತವ್ಯಸ್ತಗೊಂಡಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೂ ರಸ್ತೆ ದಾಟುವ ಸಂಕಷ್ಟ ಎದುರಾಗಿದೆ.

ಗಾಂಧಿ ಚೌಕ್, ಹನುಮಾನ್ ನಗರ, ಆರ್ಮಿ ಮೀಸಲು ಪ್ರದೇಶಗಳು ಎತ್ತರದಲ್ಲಿವೆ. ಅಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ನೀರು ರಸ್ತೆ ಮೇಲೆಯೇ ಹರಿದು ಬರುತ್ತಿದೆ. ಇದರೊಂದಿಗೆ ಚರಂಡಿಯ ತ್ಯಾಜ್ಯವೂ ಸೇರಿಕೊಂಡು ದುರ್ವಾಸನೆ ಬೀರುತ್ತಿದೆ.

ADVERTISEMENT

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರ ಆಕ್ರೋಶ ಹೊರಹಾಕಿದರು.

'ಬುಡಾ' ಕಾಂಪ್ಲೆಕ್ಸ್‌ನಲ್ಲಿರುವ ಕಿರಾಣಿ ಅಂಗಡಿಗೆ ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ. ಇಲ್ಲಿರುವ ದಿನಸಿ ಅಂಗಡಿ, ಹೋಟೆಲ್, ಚಿನ್ನಾಭರಣ ಮಳಿಗೆ, ಎಲೆಕ್ಟ್ರಾನಿಕ್ ಮಳಿಗೆ, ಜನರಲ್ ಸ್ಟೋರ್ ಮಾಲೀಕರು ಆತಂಕಗೊಂಡಿದ್ದಾರೆ.

ಇದೇನಾ ಸ್ಮಾರ್ಟ್ ಸಿಟಿ ಕೆಲಸ?:

'ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಸಂಕಷ್ಟ ಬರುತ್ತದೆ. ಈ ವರ್ಷ ಸ್ಮಾರ್ಟ್ ಸಿಟಿ ಕಾಮಗಾರಿ ಮಾಡಿದ್ದಾರೆ. ಹಿಗಾಗಿ ಸಮಸ್ಯೆ ಆಗುವುದಿಲ್ಲ ಎಂದು ಅಂದಾಜಿಸಿದ್ದೇವು. ಆದರೆ ಈಗ ಇದೇನಾ ಸ್ಮಾರ್ಟ್ ಸಿಟಿ ಕೆಲಸ ಎನ್ನುವಷ್ಟು ಕಳಪೆಯಾಗಿದೆ' ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದರು.

'ಈ ಬಗ್ಗೆ ಶಾಸಕರು, ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರ ಆಗುತ್ತಿಲ್ಲ' ಎಂದೂ ಕಿರಾಣಿ ಅಂಗಡಿ ಮಾಲೀಕ ಸಂತೋಷ ಕುರವಿನಕೊಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.