ADVERTISEMENT

ಬೆಳಗಾವಿ: ಕೀಟ ಕಾಟಕ್ಕೆ ‘ತುತ್ತಾದ’ 10 ಸಾವಿರ ಎಕರೆ ಬೆಳೆ

ಕೀಟಬಾಧೆ, ಕಳಪೆಬೀಜದ ಆತಂಕ: ಟ್ರ್ಯಾಕ್ಟರ್‌ನಿಂದ ಬೆಳೆ ಕಿತ್ತೆಸೆಯುತ್ತಿರುವ ರೈತರು

ಸಂತೋಷ ಈ.ಚಿನಗುಡಿ
Published 18 ಆಗಸ್ಟ್ 2025, 2:44 IST
Last Updated 18 ಆಗಸ್ಟ್ 2025, 2:44 IST
ಎಚ್‌.ಡಿ.ಕೋಳೇಕರ
ಎಚ್‌.ಡಿ.ಕೋಳೇಕರ   

ಬೆಳಗಾವಿ: ಸೋಯಾಬೀನ್ ಬೆಳೆದ ರೈತರಿಗೆ ಕೀಟ ಕಾಟ ಹಾಗೂ ಕಳಪೆ ಬೀಜದ ಆತಂಕ ಕಾಡುತ್ತಿದೆ. ಹೆಚ್ಚಿನ ಪ್ರಮಾಣದ ಹಾನಿ ತಪ್ಪಿಸಲು ಕೆಲವರು ಟ್ರ್ಯಾಕ್ಟರ್‌ ಮೂಲಕ ಇಡೀ ಬೆಳೆ ನಾಶ‍ಪಡಿಸಿದ್ದಾರೆ. ಈವರೆಗೆ 10 ಸಾವಿರ ಎಕರೆ ಬೆಳೆ ನಾಶವಾಗಿದೆ.

ಜಿಲ್ಲೆಯಲ್ಲಿ 1.70 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾಬೀನ್ ಬೆಳೆಯಲಾಗಿದೆ. ಕಬ್ಬಿನ (2.67 ಲಕ್ಷ ಹೆಕ್ಟೇರ್‌) ನಂತರದ ಎರಡನೇ ಅತಿದೊಡ್ಡ ಬೆಳೆ ಇದು. ಸವದತ್ತಿ, ಬೈಲಹೊಂಗಲ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ‘ಹೆಲಿಕೊವರ್ಪಾ ಆರ್ಮಿಜರಾ’ ಎಂಬ ಕಾಯಿಕೊರಕ ಕೀಟ ಹಾನಿ ಮಾಡಿದೆ. 

ಸವದತ್ತಿ ತಾಲ್ಲೂಕಿನ ಮುನವಳ್ಳಿ, ಚಚಡಿ, ಹಾರೂಗೊಪ್ಪ, ಬೂದಿಗೊಪ್ಪ, ಶಿರಸಂಗಿ, ಇನಾಮಹೊಂಗಲ ಮತ್ತು ಬೈಲಹೊಂಗಲ ತಾಲ್ಲೂಕಿನ ಮುರಗೋಡ, ನೇಸರಗಿ, ಇಂಚಲ, ಹಣ್ಣಿಕೇರಿ, ಮುರಕಿಭಾವಿ, ಮದಲಭಾವಿ, ಮುತವಾಡ, ಚಿವಟಗುಂಡಿ, ಬೈಲವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚು ಹಾನಿಯಾಗಿದೆ.

ADVERTISEMENT

ಮುಂಗಾರು ಉತ್ತಮವಾಗಿದ್ದರಿಂದ ರೈತರು ಉತ್ಸಾಹದಲ್ಲಿದ್ದರು. ಆಗಸ್ಟ್‌ ಕೊನೆಯ ವಾರಕ್ಕೆ ಸೋಯಾಬೀನ್ ರಾಶಿ ಮಾಡಬೇಕಿತ್ತು. ಆದರೆ, ಅವರೇ ಈಗ ಬೆಳೆಯನ್ನು ಇಡಿಯಾಗಿ ಕಿತ್ತು ನೆಲಸಮ ಮಾಡುವಂತಾಗಿದೆ.

ಕಾಯಿ ಕಟ್ಟದ ಬೆಳೆ:  ‘ಕೆಲ ಗ್ರಾಮಗಲ್ಲಿ ಬೆಳೆ ಹುಲುಸಾಗಿ ಬೆಳೆದಿದೆ. ಆದರೆ, ಕಾಯಿಗಳು ಕಟ್ಟಿಲ್ಲ. ಒಂದು ಎಕರೆಗೆ ಕನಿಷ್ಠ 10 ಕ್ವಿಂಟಲ್‌ ಇಳುವರಿ ಬರುವುದು ಸಹಜ. ಈಗ 2 ಕ್ವಿಂಟಲ್‌ ಕೂಡ ಬಾರದ ಸ್ಥಿತಿ ಇದೆ.  ಅದನ್ನು ತೆಗೆದು, ರಾಶಿ ಮಾಡಿ, ಮಾರಲು ಯತ್ನಿಸಿದರೆ ಹಾನಿಯೇ ಹೆಚ್ಚು. ಅದಕ್ಕೆ ಟ್ರ್ಯಾಕ್ಟರ್‌ ಮೂಲಕ ಕಿತ್ತು ಹಾಕಿದ್ದೇನೆ’ ಎಂದು ದೇಸನೂರಿನ ರೈತ ಶಿವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೀಜಗಳು ಕಳಪೆಯಾಗಿದ್ದರಿಂದಲೇ ಈ ಸಮಸ್ಯೆ ತಲೆದೋರಿದೆ. ಕಡಲೆಗೆ ಅಂಟಿಕೊಳ್ಳುತ್ತಿದ್ದ ಕೀಟವು ಇದೇ ಮೊದಲ ಬಾರಿ ಸೋಯಾಬೀನ್‌ಗೆ ತಗುಲಿದೆ. ಇದು ಯಾವ ಕೀಟ, ಯಾವ ಔಷಧ ಸಿಂಪಡಿಸಬೇಕು ಎಂಬುದು ಗೊತ್ತೇ ಆಗುತ್ತಿಲ್ಲ’  ಎಂದು ನಾಗನೂರಿನ ರೈತ ಸಿದ್ದರಾಯ ಪಾಟೀಲ ತಿಳಿಸಿದರು.

‘ಪ್ರತಿ ಎಕರೆಗೆ ಕನಿಷ್ಠ ₹30 ಸಾವಿರ ಖರ್ಚು ಆಗಿದೆ. ಇಳುವರಿ ಹಾನಿ, ಔಷಧ, ಕೂಲಿಗಳ ಹಣ, ಉಳುಮೆ ಬಾಡಿಗೆ ಸೇರಿದರೆ ಎಕರೆಗೆ ₹90 ಸಾವಿರಕ್ಕೂ ಹೆಚ್ಚು ಹಾನಿ ಸಂಭವಿಸಿದೆ’ ಎಂದು ಅವರು ವಿವರಿಸಿದರು.

ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಟ್ರ್ಯಾಕ್ಟರ್‌ ಮೂಲಕ ರೂಟರ್‌ ಹೊಡೆದು ಸೋಯಾಬೀನ್ ಬೆಳೆ ನಾಶ ಮಾಡಿದ ರೈತ
ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಕಾಯಿ ಕಟ್ಟದ ಸೋಯಾಬೀನ್ ಬೆಳೆ ಕಿತ್ತೆಸೆದ ರೈತರು
ಬೈಲಹೊಂಗಲ ತಾಲ್ಲೂಕಿನ ನೇಸರಗಿಯಲ್ಲಿ ಕೀಟಗಳಿಗೆ ತುತ್ತಾದ ಸೋಯಾಬೀನ್ ಕಾಯಿಗಳು
ಸೋಯಾಬೀನ್ ಕಾಯಿ ಕಟ್ಟದಿರಲು ಕಳಪೆ ಬೀಜಗಳೇ ಕಾರಣ. ಕೃಷಿ ಇಲಾಖೆ ಅಧಿಕಾರಿಗಳು ಎಕರೆವಾರು ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು. ಅಂದಾಜು ಸಮೀಕ್ಷೆ ಬೇಡ
ಸಿದಗೌಡ ಮೋದಗಿ ಅಧ್ಯಕ್ಷ ಭಾರತೀಯ ಕೃಷಿಕ ಸಮಾಜ ರಾಜ್ಯ ಘಟಕ

ರೈತರ ನೆರವಿಗೆ 17 ತಂಡ ರಚನೆ:

‘ಅತಿವೃಷ್ಟಿಯ ಕಾರಣ ಸೋಯಾಬೀನ್ ಕೀಟಕ್ಕೆ ತುತ್ತಾಗಿದೆ ಹೊರತು ಕಳಪೆ ಬೀಜ ಕಾರಣವಲ್ಲ. ಮಳೆ ಇನ್ನಷ್ಟು ದಿನ ಮುಂದುವರಿದರೆ ತುಕ್ಕು ರೋಗ ಕಾಣಿಸಿಕೊಳ್ಳಬಹುದು. ರೈತರ ನೆರವಿಗೆ ಇಲಾಖೆಯಿಂದ 17 ತಂಡಗಳನ್ನು ರಚಿಸಿ 42 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇವೆ. ಅಧಿಕಾರಿಗಳ ಜತೆಗೆ ಕೀಟತಜ್ಞರು ಕೃಷಿ ವಿಜ್ಞಾನಿಗಳೂ ಇದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್‌.ಡಿ.ಕೋಳೇಕರ ಪ್ರತಿಕ್ರಿಯಿಸಿದರು. ‘ಹಾನಿ ಅನುಭವಿಸಿದ ರೈತರಿಗೆ ಬೆಳೆ ವಿಮೆ ಮಾಡಿಸಲಾಗುವುದು. ವಿಮೆಗೆ ಆಗಸ್ಟ್ 30 ಕೊನೆಯ ದಿನವಾಗಿದ್ದು ಸೆಪ್ಟೆಂಬರ್‌ವರೆಗೂ ದಿನಾಂಕ ವಿಸ್ತರಣೆ ಮಾಡಲಾಗುವುದು. ವಿಜ್ಞಾನಿಗಳ ವರದಿ ಬಂದ ಮೇಲೆ ಹಾನಿಗೆ ಕಾರಣ ಗೊತ್ತಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.