
ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
ಆಡಿಹರಯ್ಯಾ ಹಾಡಿಹರಯ್ಯಾ ಮನಬಂದ ಪರಿಯಲಿ !
ಶಿವಶರಣರ ಮುಂದೆ ಆಡಿಹರಯ್ಯಾ ಹಾಡಿಹರಯ್ಯಾ !
ಕೋಡಂಗಿಯಾಟವನಾಡಿದ ಭಕ್ತಂಗೆ ಬೇಡಿತ್ತನೀವ,
ನಮ್ಮ ಕೂಡಲಸಂಗಮದೇವ.
ಭಗವಂತನ ಒಲುಮೆಗೆ ಭಕ್ತಿ ಎಂಬುದೇ ಮುಖ್ಯವಾದದ್ದು ಎಂಬುದನ್ನು ಇಲ್ಲಿ ಉದಾಹರಣೆಯೊಂದಿಗೆ ಬಸವಣ್ಣನವರು ತಿಳಿಸಿದ್ದಾರೆ.
ನಮ್ಮ ಮನಸ್ಸಿಗೆ ಬಂದಂತೆ ನಾವು ಭಗವಂತನ ಆರಾಧನೆ ಮಾಡಿದರೂ, ಭಕ್ತಿ ಎಂಬುದು ಮುಖ್ಯವಾಗಿರಬೇಕು. ಮಹಾತ್ಮರ ಮುಂದೆ ನಾವು ಯಾವ ರೀತಿಯಾಗಿದ್ದರೂ ಕೂಡ ಅವರ ದೃಷ್ಟಿ ಮಾತ್ರದಿಂದ ನಾವು ಪಾವನರಾಗುತ್ತೇವೆ. ಉದಾಹರಣೆಗೆ ಮಂಗನಂತೆ ಆಟವಾಡಿದರೂ ಕೂಡ ನಮ್ಮ ಭಾವ ಶುದ್ಧವಾಗಿದ್ದರೇ ಭಗವಂತ ಒಲಿಯುತ್ತಾನೆ, ನಾವು ಬೇಡಿದ್ದನ್ನೂ ನೀಡುತ್ತಾನೆ. ಅದಕ್ಕೆ ಇಲ್ಲಿ ಆಡುವುದು, ಹಾಡುವುದು ಕೋಡಂಗಿಯಾಟವಾಡುವುದು ಎಂದಿದ್ದಾರೆ. ಅಂತರಂಗದ ಭಾವನೆ ಎನ್ನುವುದು ಇಲ್ಲಿ ಮುಖ್ಯವಾಗಿದೆ. ಸರಳತೆ, ಸಾತ್ವಿಕತೆ, ಪ್ರಾಮಾಣಿಕತೆ, ನಯ, ವಿನಯ ಎಂಬುದು ಅಂತರಂಗದ ಸೌಂದರ್ಯವನ್ನು ಹೆಚ್ಚಿಸುವ ಸಾಧನಗಳು. ಇವುಗಳು ಮುಖ್ಯವಾಗುತ್ತವೆಯೇ ಹೊರತು ಬಹಿರಂಗದ ಆಡಂಬರಗಳಲ್ಲ ಎಂಬುದು ಈ ವಚನದ ತಾತ್ಪರ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.