ADVERTISEMENT

`33.22 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ'

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 5:33 IST
Last Updated 8 ಜುಲೈ 2013, 5:33 IST

ಬೆಳಗಾವಿ: `ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಗೊಳಿಸಲು ಭಾರತೀಯ ವಾಯುಪಡೆ ಪ್ರಾಧಿಕಾರವು 33.22 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ' ಎಂದು ಸಕ್ಕರೆ, ಮುಜರಾಯಿ ಹಾಗೂ ಸಣ್ಣ ಕೈಗಾರಿಕೆ ಖಾತೆ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಈ ಕಾಮಗಾರಿಗಳಿಗೆ ಕುರಿತಂತೆ ಇ-ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರನ್‌ವೇ ವಿಸ್ತರಣೆ, ಎಪ್ರಾನ್ ನಿರ್ಮಾಣ, ಟ್ಯಾಕ್ಸಿ ಮಾರ್ಗ ಸೇರಿದಂತೆ ಇತರ ಅವಶ್ಯಕ ಕಾಮಗಾರಿಗಳನ್ನು 33.22 ಕೋಟಿ ರೂಪಾಯಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಮುಂದಿನ 15 ತಿಂಗಳ ಅವಧಿಯಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ' ಎಂದು ಅವರು ತಿಳಿಸಿದರು.

`ಆಗಸ್ಟ್ 15ರಂದು ಬೆಳಗಾವಿ- ಗೋವಾ ಹಾಗೂ ಮುಂಬೈ ನಡುವೆ ಸ್ಪೈಸ್ ಜೆಟ್ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಇದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ' ಎಂದು ಹುಕ್ಕೇರಿ ತಿಳಿಸಿದರು.

`ಕಳೆದ ಅಕ್ಟೋಬರ್ 2ರಂದು ಆರಂಭಗೊಂಡಿದ್ದ ಮಿರಜ್- ಯಶವಂತಪುರ ರೈಲನ್ನು ಮೇ 30ರಿಂದ ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ತಾವು ಕೇಂದ್ರ ರೈಲ್ವೆ ಖಾತೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜುಲೈ 4ರಂದು ಖುದ್ದಾಗಿ ಭೇಟಿಯಾಗಿ ಈ ರೈಲನ್ನು ಪ್ರಾರಂಭಿಸುವಂತೆ ಮನವಿ ಮಾಡಿಕೊಂಡಿದ್ದೆ. ಅವರು ಅದನ್ನು ಪುನಃ ಆರಂಭಿಸಲು ಆದೇಶಿಸಿದ್ದರು. ಹೀಗಾಗಿ ಜುಲೈ 6ರಿಂದ ಈ ರೈಲು ಪುನರ್ ಪ್ರಾರಂಭವಾಗಿದ್ದು, ವಾರದಲ್ಲಿ 5 ದಿನಗಳ ಕಾಲ ಸಂಚರಿಸಲಿದೆ' ಎಂದು ಸಚಿವರು ಮಾಹಿತಿ ನೀಡಿದರು.

`ಹೊಸಪೇಟೆ- ಹುಬ್ಬಳ್ಳಿ- ಲೋಂಡಾ ಹೊಸ ರೈಲ್ವೆ ಮಾರ್ಗಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಜುಲೈ 13ರಂದು ಲೋಂಡಾದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.