ADVERTISEMENT

3,606 ಏರ್‌ಮನ್‌ಗಳು ಸೇವೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 11:34 IST
Last Updated 31 ಜುಲೈ 2021, 11:34 IST
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಏರ್‌ಮನ್‌ ತರಬೇತಿ ಶಾಲೆಯಲ್ಲಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಶನಿವಾರ ನಡೆಯಿತು
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಏರ್‌ಮನ್‌ ತರಬೇತಿ ಶಾಲೆಯಲ್ಲಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಶನಿವಾರ ನಡೆಯಿತು   

ಬೆಳಗಾವಿ: ತಾಲ್ಲೂಕಿನ ಸಾಂಬ್ರಾದಲ್ಲಿರುವ ಏರ್‌ಮನ್‌ ತರಬೇತಿ ಶಾಲೆಯಲ್ಲಿ 3,606 ಟ್ರೇನಿ ಏರ್‌ಮನ್‌ಗಳು ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ್ದು, ಸೇವೆಗೆ ಸಜ್ಜಾಗಿದ್ದಾರೆ.

ಶನಿವಾರ ನಡೆದ ನಿರ್ಗಮನ ಪಥಸಂಚಲನದಲ್ಲಿ ಅವರು ಪಾಲ್ಗೊಂಡರು. ಶಾಲೆಯ ಕಮಾಂಡಿಂಗ್ ಏರ್‌ ಆಫೀಸರ್‌ ಎಸ್‌.ಡಿ. ಮುಕುಲ್‌ ಪಥಸಂಚನವನ್ನು ಪರಿವೀಕ್ಷಿಸಿ, ಉತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಟ್ರೋಫಿಗಳನ್ನು ವಿತರಿಸಿದರು.

ಈ ವೇಳೆ ಮಾತನಡಿದ ಅವರು, ‘ವಾಯುದಳದಲ್ಲಿ ಉತ್ತಮ ಕಾರ್ಯನಿರ್ವಣೆಗೆ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿವಳಿಕೆ ಹೊಂದುವುದು ಮುಖ್ಯವಾಗುತ್ತಿದೆ. ಹೀಗಾಗಿ, ಬದಲಾಗುತ್ತಿರುವ ತಂತ್ರಜ್ಞಾನಗಳ ಅರಿವನ್ನು ಪಡೆಯಬೇಕು. ಔದ್ಯೋಗಿಕ ಕೌಶಲವನ್ನು ವೃದ್ಧಿಸಿಕೊಳ್ಳಬೇಕು. ಇದಕ್ಕಾಗಿ ಇಲ್ಲಿ ಪಡೆದ ತರಬೇತಿಯನ್ನು ಬಳಸಿಕೊಳ್ಳಬೇಕು. ವೃತ್ತಿಯಲ್ಲಿ ಮುಂದೆ ಬರುವುದಕ್ಕೆ ಬಹಳಷ್ಟು ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದಕ್ಕೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೋವಿಡ್–19 ವಿರುದ್ಧದ ಹೋರಾಟವನ್ನು ಮುಂದುವರಿಸಬೇಕು. ತರಬೇತಿಯಲ್ಲಿ ಅನುಸರಿಸಿದ ಮಾರ್ಗಸೂಚಿಗಳ ಪಾಲನೆಯನ್ನು ಮುಂದುವರಿಸಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಅಂತರ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ನಿಯೋಜಿಸಲಾದಲ್ಲಿ ಉತ್ತಮ ಕೆಲಸ ಮಾಡಿ ಅತ್ಯುತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು’ ಎಂದು ತಿಳಿಸಿದರು.

ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಆಕರ್ಷಿಸಿತು. ಸಾಮಾನ್ಯ ಸೇವಾ ತರಬೇತಿಯಲ್ಲಿ ಬಾಲಾಜಿ ಎಂ., ಶೈಕ್ಷಣಿಕ ವಿಭಾಗದಲ್ಲಿ ಸುರೇಂದ್ರಕುಮಾರ್‌ ಉತ್ತಮ ಪ್ರಶಿಕ್ಷಣಾರ್ಥಿಗಳೆನಿಸಿಕೊಂಡರು. ಮನಿಷ್ ಚೌರಾಸಿಯಾ ‘ಬೆಸ್ಟ್‌ ಮಾರ್ಕ್ಸ್‌ಮನ್‌’ ಎನಿಸಿದರೆ, ಕುಲದೀಪ್‌ ಸಮಗ್ರ ಪಾರಿತೋಷಕವನ್ನು ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.