ಬೆಳಗಾವಿ ತಾಲ್ಲೂಕಿನಲ್ಲಿ ರೈತರು ಕೃಷಿ ಕಾಯಕದಲ್ಲಿ ನಿರತರಾಗಿರುವುದು
ಬೆಳಗಾವಿ: ಜಿಲ್ಲೆಯಲ್ಲಿ ಕೃಷಿ ಕೆಲಸದಲ್ಲಿ ತೊಡಗಿದಾಗ ಹಾವು ಕಡಿತ, ವಿದ್ಯುತ್ ಅವಘಡ ಮತ್ತಿತರ ಕಾರಣಗಳಿಂದ, ಕಳೆದ 21 ತಿಂಗಳಲ್ಲಿ 75 ರೈತರು ಮೃತಪಟ್ಟಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ. 7.40 ಲಕ್ಷ ಹೆಕ್ಟೇರ್‌ಗಿಂತ ಅಧಿಕ ಪ್ರದೇಶದಲ್ಲಿ ರೈತರು ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಕೆಲಸ ಮಾಡುವ ಭರದಲ್ಲಿ ಸುರಕ್ಷತೆಯನ್ನೇ ಕಡೆಗಣಿಸುತ್ತಿರುವುದರಿಂದ ಕೆಲ ವೊಮ್ಮೆ ಅವರ ಜೀವಕ್ಕೆ ಕುತ್ತು ಬರುತ್ತಿದೆ. ಹೊಲದಲ್ಲಿ ಕಳೆ ತೆಗೆಯುವಾಗ, ಎತ್ತರದ ಬೆಳೆಗಳಿಗೆ ಔಷಧ ಸಿಂಪಡಿಸಲು ಹೋದಾಗ, ಬೆಳೆಗಳ ರಾಶಿ ಮಾಡುವಾಗ, ಜಾನುವಾರುಗಳಿಗೆ ಹುಲ್ಲು ತರಲು ಹೋದಾಗ ಹಾವು ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇನ್ನೂ ವಿದ್ಯುತ್ ಅವಘಡಗಳೂ ರೈತರ ಬಲಿ ಪಡೆಯುತ್ತಿವೆ. ಹಾಗಾಗಿ ಸುರಕ್ಷತೆಯೊಂದಿಗೆ ಕೃಷಿ ಕಾಯಕ ಮಾಡುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕಿದೆ.
‘ಒಕ್ಕಲುತನ ಮಾಡುವಾಗ ಇಂಥ ಅವಘಡ ಸಂಭವಿಸುವುದು ಸಾಮಾನ್ಯ. ಇವುಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು ಕಷ್ಟ. ಆದರೆ, ಆಕಸ್ಮಿಕ ಅವಘಡಗಳಿಂದ ಪಾರಾಗುವ ಬಗ್ಗೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಕೃಷಿ ಇಲಾಖೆ, ಹೆಸ್ಕಾಂನವರು ಜಂಟಿಯಾಗಿ ಈ ಕೆಲಸ ಮಾಡಬೇಕು’ ಎಂಬ ಒತ್ತಾಯ ಕೇಳಿಬರುತ್ತಿದೆ.
ಹಾವು ಕಡಿತ ಮತ್ತು ಆಕಸ್ಮಿಕವಾಗಿ ನಡೆದ ಅವಘಡಗಳಲ್ಲಿ ಮೃತಪಟ್ಟ ರೈತನ ಅವಲಂಬಿತರಿಗೆ ತಲಾ ₹2 ಲಕ್ಷ ಪರಿಹಾರ ಕೊಡಲಾಗುತ್ತಿದೆ. ಕೃಷಿ ಇಲಾಖೆಯಲ್ಲಿ 2023–24ರಲ್ಲಿ ಇಂಥ 56 ಪ್ರಕರಣ ವರದಿಯಾಗಿದ್ದವು. ಈ ಪೈಕಿ 54 ಪ್ರಕರಣ ಅರ್ಹ ಎಂದು ಪರಿಗಣಿಸಲಾಗಿದೆ. ಎರಡು ಪ್ರಕರಣ ತಿರಸ್ಕೃತಗೊಂಡಿದ್ದು, 49 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಐದು ಪ್ರಕ ರಣಗ ಳಲ್ಲಷ್ಟೇ ಬಾಕಿ ಇದೆ.
2024ರ ಏಪ್ರಿಲ್ 1ರಿಂದ ಡಿಸೆಂಬರ್ 26ರವರೆಗೆ (21 ತಿಂಗಳಲ್ಲಿ) ವರದಿಯಾದ 19 ಪ್ರಕರಣಗಳಲ್ಲಿ 16 ಅರ್ಹವೆಂದು ಪರಿಗಣಿಸಲಾ ಗಿದೆ. ಮೂರು ಪ್ರಕರಣ ತಿರಸ್ಕೃತಗೊಳಿಸಲಾಗಿದೆ. 13 ಪ್ರಕರಣಗಳಲ್ಲಿ ಪರಿಹಾರ ಕೊಟ್ಟಿದ್ದು, ಮೂರು ಪ್ರಕರಣಗಳಲ್ಲಿ ಪರಿಹಾರ ನೀಡಬೇಕಿದೆ.
‘ಯಾವುದೇ ರೈತರು ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮೃತಪಟ್ಟರೆ, ಪರಿಹಾರ ಕೋರಿ ಅವರ ಕುಟುಂಬದವರು ಮೂರು ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು. ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿವರ, ಮರಣೋತ್ತರ ಪರೀಕ್ಷೆ ವರದಿ ಸೇರಿ ಎಲ್ಲ ದಾಖಲೆ ಸಲ್ಲಿಸಬೇಕು. ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿ ಸಮಗ್ರವಾಗಿ ಪರಿಶೀಲಿಸಿದ ನಂತರ, ಪರಿಹಾರ ಮಂಜೂರಾಗುತ್ತದೆ. 21 ತಿಂಗಳಲ್ಲಿನ 75 ಪ್ರಕರಣಗಳಲ್ಲಿ ಸುಮಾರು 40 ರೈತರು ಹಾವು ಕಡಿತಕ್ಕೆ ಬಲಿಯಾಗಿದ್ದಾರೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಹೊಲದಲ್ಲಿ ಉಳುಮೆ ಮಾಡುವಾಗ ಯಾವುದಾದರೂ ರೈತರು ಆಕಸ್ಮಿಕವಾಗಿ ಮೃತಪಟ್ಟರೆ, ಸರ್ಕಾರ ಪರಿಹಾರ ಕೊಡುತ್ತದೆ ಎಂಬ ಮಾಹಿತಿಯೇ ಹೆಚ್ಚಿನವರಿಗೆ ಗೊತ್ತಿಲ್ಲ. ಕ್ಷೇತ್ರಮಟ್ಟದಲ್ಲಿ ಕೃಷಿ ಇಲಾಖೆ ಸಿಬ್ಬಂದಿಯೂ ಮಾಹಿತಿ ಕೊಡುತ್ತಿಲ್ಲ. ಹಾಗಾಗಿ ಅವಘಡಕ್ಕೆ ತುತ್ತಾದರೂ ಆ ಕುಟುಂಬದವರು ಅರ್ಜಿ ಹಾಕಲಾಗದೆ, ಪರಿಹಾರದಿಂದ ವಂಚಿತರಾಗುತ್ತಿದ್ದಾರೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ರವಿ ಸಿದ್ದಮ್ಮನವರ ದೂರಿದರು. ‘ಇನ್ನೂ ಕೆಲವು ಪ್ರಕರಣಗಳಲ್ಲಿ ಎಲ್ಲ ದಾಖಲೆ ಸಲ್ಲಿಸಿದರೂ, ಸಕಾಲಕ್ಕೆ ಪರಿಹಾರ ಕೈಗೆಟುಕದೆ ಸಂತ್ರಸ್ತ ಕುಟುಂಬದವರು ಪರದಾಡುವಂತಾಗಿದೆ’ ಎಂದು ಆರೋಪಿಸಿದರು.
‘ಕೃಷಿಯಲ್ಲಿ ನಷ್ಟ ಉಂಟಾಗಿ ರೈತರು ಮೃತಪಟ್ಟರೆ, ಸರ್ಕಾರದಿಂದ ₹5 ಲಕ್ಷ ಪರಿಹಾರ ಕೊಡಲಾಗುತ್ತಿದೆ. ಹೀಗಿರುವಾಗ ಹಾವು ಕಡಿತ ಮತ್ತು ಆಕಸ್ಮಿಕ ಅವಘಡಗಳಲ್ಲಿ ಮೃತಪಟ್ಟಾಗ, ಕುಟುಂಬದವರಿಗೆ ₹2 ಲಕ್ಷ ಪರಿಹಾರ ಮಾತ್ರ ನೀಡಿದರೆ ಸಾಲದು. ₹5 ಲಕ್ಷ ಪರಿಹಾರ ಕೊಟ್ಟರೆ, ಒಂದು ಕುಟುಂಬಕ್ಕೂ ಅನುಕೂಲವಾಗುತ್ತದೆ. ಹಾಗಾಗಿ ಪರಿಹಾರ ಮೊತ್ತವನ್ನು ಸರ್ಕಾರ ಹೆಚ್ಚಿಸಬೇಕು’ ಎನ್ನುತ್ತಾರೆ ರಾಷ್ಟ್ರೀಯ ರೈತರ ಸಂಘದ ಮುಖಂಡ ಪ್ರಕಾಶ ನಾಯ್ಕ.
l ಕೃಷಿ ಕೆಲಸ ಮಾಡುವಾಗ ಗಮ್ ಬೂಟ್ ಧರಿಸಬೇಕು. l ಎತ್ತರದ ಮತ್ತು ದಟ್ಟವಾದ ಬೆಳೆಗಳಿಗೆ ಡ್ರೋನ್ ಬಳಸಿ ಔಷಧ ಸಿಂಪಡಿಸಬೇಕು.
l ಹೊಲದಲ್ಲಿ ವಿದ್ಯುತ್ ತಂತಿಗಳು ನಮ್ಮ ಸುರಕ್ಷತೆಗೆ ಪೂರಕವಾಗಿ(ಎತ್ತರದಲ್ಲಿ ಇರುವಂತೆ) ನೋಡಿಕೊಳ್ಳಬೇಕು.
l ಸಾಧ್ಯವಾದಷ್ಟು ಹಗಲಿನಲ್ಲೇ ಕೃಷಿ ಮಾಡಬೇಕು. ಅಗತ್ಯವಿದ್ದರಷ್ಟೇ ರಾತ್ರಿ ಕೆಲಸ ಮಾಡಬೇಕು.
l ಬೆಳೆಗಳಿಗೆ ಔಷಧ ಸಿಂಪಡಿಸುವಾಗ ಕಡ್ಡಾಯವಾಗಿ ಕೈಗವಸು, ಮಾಸ್ಕ್ ಬಳಕೆ ಮಾಡಬೇಕು. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಔಷಧ ಸಿಂಪಡಿಸಬಾರದು.
l ಕೃಷಿಭೂಮಿಯಲ್ಲಿ ಇರುವ ಜಲಮೂಲಗಳ(ತೆರೆದ ಬಾವಿ, ಕೃಷಿಹೊಂಡ, ಕೆರೆ) ಸುತ್ತಲು ತಂತಿ–ಬೇಲಿ ಅಳವಡಿಸಬೇಕು.
ಹಾವು ಕಡಿತದಿಂದ ಮತ್ತು ಆಕಸ್ಮಿಕವಾಗಿ ರೈತರು ಮೃತಪಟ್ಟರೆ, ತ್ವರಿತವಾಗಿ ಪರಿಹಾರ ಕೊಡುತ್ತಿದ್ದೇವೆ. ಸುರಕ್ಷತೆಯೊಂದಿಗೆ ಕೃಷಿ ಮಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆಶಿವನಗೌಡ ಪಾಟೀಲ ಜಂಟಿನಿರ್ದೇಶಕ, ಕೃಷಿ ಇಲಾಖೆ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.