ADVERTISEMENT

ನ್ಯಾಯ ಕೊಡಿ ಇಲ್ಲವೆ ದಯಾಮರಣಕ್ಕೆ ಅನುಮತಿ ಕೊಡಿ: ತಮ್ಮಣ್ಣ ಕಾಂಬಳೆ ಕುಟುಂಬದ ಧರಣಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 15:53 IST
Last Updated 21 ಆಗಸ್ಟ್ 2024, 15:53 IST
<div class="paragraphs"><p>ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ನಿಲಜಿಯ ತಮ್ಮಣ್ಣ ಕಾಂಬಳೆ ಕುಟುಂಬಸ್ಥರು ಬುಧವಾರ ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ</p></div>

ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ನಿಲಜಿಯ ತಮ್ಮಣ್ಣ ಕಾಂಬಳೆ ಕುಟುಂಬಸ್ಥರು ಬುಧವಾರ ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ

   

ಬೆಳಗಾವಿ: ‘ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸಂಬಂಧಿಕರು ನಮಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅವಕಾಶ ನೀಡುತ್ತಿಲ್ಲ. ದೈಹಿಕವಾಗಿ ಹಲ್ಲೆಯನ್ನೂ ಮಾಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ. ಇಲ್ಲದಿದ್ದರೆ ದಯಾಮರಣಕ್ಕೆ ಅನುಮತಿ ಕೊಡಿ’ ಎಂದು ಆಗ್ರಹಿಸಿ ರಾಯಬಾಗ ತಾಲ್ಲೂಕಿನ ನಿಲಜಿಯ ತಮ್ಮಣ್ಣ ಕಾಂಬಳೆ ಕುಟುಂಬಸ್ಥರು ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಪಿ) ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ನಮ್ಮ ಮೇಲೆ ಆಗಿರುವ ಅನ್ಯಾಯದ ಕುರಿತು ಕುಡಚಿ ಪೊಲೀಸರಿಗೆ ತಿಳಿಸಿದ್ದೇವೆ. ಆದರೆ, ಯಾವುದೇ ಕ್ರಮ ವಹಿಸಿಲ್ಲ. ಹಾಗಾಗಿ ನಾನು, ಪತ್ನಿ ತಾರವ್ವ, ಪುತ್ರ ಕಲ್ಲಪ್ಪ, ಸೊಸೆ ಆರತಿ, ಮೊಮ್ಮಕ್ಕಳಾದ ಆಯುಷ್, ಶ್ರದ್ಧಾ, ಆರುಷ್ ಸೇರಿ ಏಳು ಮಂದಿ ನ್ಯಾಯ ಕೋರಿ ಬೆಳಗಾವಿಗೆ ಬಂದಿದ್ದೇವೆ. ಕಳೆದ ಮೂರು ದಿನಗಳಿಂದ ಎಸ್‌ಪಿ ಕಚೇರಿಗೆ ಭೇಟಿ ನೀಡುತ್ತಿದ್ದೇವೆ. ಇಲ್ಲಿಯೂ ನಮಗೆ ಸ್ಪಂದನೆ ಸಿಗುತ್ತಿಲ್ಲ’ ಎಂದು ತಮ್ಮಣ್ಣ ಕಾಂಬಳೆ ಅವಲತ್ತುಕೊಂಡರು.

ADVERTISEMENT

‘ನಿಲಜಿಯಲ್ಲಿ ನಮ್ಮ ಅತ್ತೆ ನಾಗವ್ವ(ವಿವಾಹವಾದ ನಂತರ ಮುಮ್ತಾಜ್‌ ಎಂದು ಹೆಸರು ಬದಲಿಸಿಕೊಂಡಿದ್ದಾರೆ) ನಿರ್ಮಿಸಿದ ಮನೆಯಲ್ಲಿ ನಾವು ಮತ್ತು ಸಂಬಂಧಿಕರು ವಾಸಿಸುತ್ತಿದ್ದೇವೆ. ನೆಲಮಹಡಿಯಲ್ಲಿ ಸಂಬಂಧಿಕರು ಇದ್ದರೆ, ಮೊದಲ ಮಹಡಿಯಲ್ಲಿ ನಾವು ಜೀವನ ಸಾಗಿಸುತ್ತಿದ್ದೇವೆ. ಅತ್ತೆ ಈಗ ಮುಂಬೈನಲ್ಲಿ ವಾಸವಿದ್ದು, ಅವರ ಮಕ್ಕಳು ಕೆನಡಾದಲ್ಲಿದ್ದಾರೆ. ಆ ಆಸ್ತಿ ಕಬಳಿಸಲು

ಚಿಕ್ಕಪ್ಪಂದಿರಾದ ವಸಂತ ಕಾಂಬಳೆ, ಭೀಮಪ್ಪ ಕಾಂಬಳೆ ಹಾಗೂ ಅವರ ಮಕ್ಕಳು ನಮಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಕಲ್ಲಪ್ಪ ದೂರಿದರು.

‘ಇತ್ತೀಚೆಗೆ ಶೌಚಗೃಹದ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸುವ ಪೈಪ್‌ಗಳನ್ನು ಹಾನಿಗೊಳಿಸಲಾಗಿದೆ. ಅವುಗಳನ್ನು ಮತ್ತೆ ಅಳವಡಿಸಲು ಪ್ಲಂಬರ್‌ ಕರೆತಂದಾಗ, ಸಂಬಂಧಿಕರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ದೂರು ಕೊಡಲು ಎಸ್‌ಪಿ ಕಚೇರಿಗೆ ಬಂದರೆ, ‘ನೀವು ನಾಟಕವಾಡುತ್ತಿದ್ದೀರಿ. ಕಚೇರಿಯಿಂದ ಹೊರಹೋಗಿ’ ಎಂದು ಕೆಲವು ಅಧಿಕಾರಿಗಳು ನಿಂದಿಸಿದ್ದಾರೆ’ ಎಂದು ಆರೋಪಿಸಿದರು.

‘ಪ್ರತಿದಿನ ರಾತ್ರಿ ಬಸ್‌ ನಿಲ್ದಾಣದಲ್ಲಿ ನಾವು ಮಲಗುತ್ತಿದ್ದೇವೆ. ನಮಗೆ ನ್ಯಾಯ ಕೊಡಿಸಬೇಕು ಅಥವಾ ದಯಾಮರಣಕ್ಕೆ ಅನುಮತಿ ಕೊಡಬೇಕು’ ಎಂದು ಒತ್ತಾಯಿಸಿದರು.

‘ತಮ್ಮಣ್ಣ ಕಾಂಬಳೆ ಕುಟುಂಬಸ್ಥರು ಹಿಂದೊಮ್ಮೆ ನ್ಯಾಯ ಕೋರಿ ಕಚೇರಿಗೆ ಬಂದಿದ್ದರು. ಆಗ ಪೊಲೀಸರು ವಿಚಾರಣೆಗೆ ಕರೆದರೂ, ಕುಡಚಿ ಠಾಣೆಗೆ ಬಾರದೆ ಅಸಹಕಾರ ತೋರಿದ್ದರು. ಈ ಬಾರಿಯೂ ಠಾಣೆಯಲ್ಲಿ ದೂರು ದಾಖಲಿಸಿಲ್ಲ. ಒಂದುವೇಳೆ ದೂರು ಸಲ್ಲಿಸಿ ವಿಚಾರಣೆಗೆ ಸಹಕರಿಸಿದರೆ, ಮುಂದಿನ ಕ್ರಮ ವಹಿಸಲಾಗುವುದು’ ಎಂದು ಭೀಮಾಶಂಕರ ಗುಳೇದ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.