ADVERTISEMENT

ಪತ್ರಕರ್ತರಿಗೆ ‘ಆಯುಷ್ಮಾನ್ ಕಾರ್ಡ್' ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 8:18 IST
Last Updated 2 ಅಕ್ಟೋಬರ್ 2020, 8:18 IST
ಬೆಳಗಾವಿಯಲ್ಲಿ ಸರ್ಕಾರದಿಂದ ಪತ್ರಕರ್ತರಿಗೆ ನೀಡಲಾದ ‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ’ ವಿಶೇಷ ಆರೋಗ್ಯ ಕಾರ್ಡ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಶುಕ್ರವಾರ ವಿತರಿಸಿದರು
ಬೆಳಗಾವಿಯಲ್ಲಿ ಸರ್ಕಾರದಿಂದ ಪತ್ರಕರ್ತರಿಗೆ ನೀಡಲಾದ ‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ’ ವಿಶೇಷ ಆರೋಗ್ಯ ಕಾರ್ಡ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಶುಕ್ರವಾರ ವಿತರಿಸಿದರು   

ಬೆಳಗಾವಿ: ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಸರ್ಕಾರದಿಂದ ನೀಡಿರುವ ‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ’ ವಿಶೇಷ ಆರೋಗ್ಯ ಕಾರ್ಡ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಶುಕ್ರವಾರ ಇಲ್ಲಿನ ಪ್ರವಾಸಿಮಂದಿರದಲ್ಲಿ ಸಾಂಕೇತಿಕವಾಗಿ ವಿತರಿಸಿದರು.

‘ವಾರ್ತಾ ಇಲಾಖೆಯ ಮಾನ್ಯತಾ ಕಾರ್ಡ್‌ ಹೊಂದಿರುವ ಪತ್ರಕರ್ತರು, ಅವರ ಪತ್ನಿ ಮತ್ತು ಮಕ್ಕಳಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ತಂದೆ-ತಾಯಿಯನ್ನೂ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು’ ಎಂದು ಪತ್ರಕರ್ತರು ಕೋರಿದರು.

ಪ್ರತಿಕ್ರಿಯಿಸಿದ ಸಚಿವರು, ‘ಮೊದಲ ಹಂತದಲ್ಲಿ ಕಾರ್ಡ್ ವಿತರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಕೂಡ ತಿಳಿಸಿದರು.

ADVERTISEMENT

‘ಮೊದಲ ಹಂತದಲ್ಲಿ ‌ಅರ್ಜಿ ಸಲ್ಲಿಸಿರುವ ವಾರ್ತಾ ಇಲಾಖೆಯ ಮಾನ್ಯತಾ ಕಾರ್ಡ್‌ ಹೊಂದಿದ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಅರ್ಜಿ ಸಲ್ಲಿಸದಿರುವ ಪತ್ರಕರ್ತರಿಗೆ ಮುಂದಿನ ದಿನಗಳಲ್ಲಿ ಕಾರ್ಡ್‌ಗಳನ್ನು ವಿತರಿಸಲಾಗುವುದು’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಮಾಹಿತಿ ನೀಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜಿತ ಆರೋಗ್ಯ ಯೋಜನೆಯಡಿ ಪತ್ರಕರ್ತರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಈ ಮೂಲಕ ಒದಗಿಸಲಾಗುತ್ತಿದೆ’ ಎಂದು ವಿವರಿಸಿದರು.

ಪತ್ರಕರ್ತರಾದ ಶ್ರೀಶೈಲ ಮಠದ, ಕುಂತಿನಾಥ ಕಲಮನಿ, ಸುರೇಶ್ ನೇರ್ಲಿ, ಮೆಹಬೂಬ್ ಮಕಾನದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.