ADVERTISEMENT

ಬೆಳಗಾವಿ: ಕೃಷಿಯತ್ತ ಹೊರಳಿ ಯಶಸ್ಸು ಕಂಡ ಯುವತಿ, ಆರೇ ತಿಂಗಳಲ್ಲಿ ₹6 ಲಕ್ಷ ಲಾಭ

30 ಗುಂಟೆ ಜಮೀನಿನಲ್ಲೇ ಮೆಣಸಿನಕಾಯಿ ಬೆಳೆ, ಗೋವಾದಲ್ಲಿ ಹೆಚ್ಚು ಬೇಡಿಕೆ

ಇಮಾಮ್‌ಹುಸೇನ್‌ ಗೂಡುನವರ
Published 26 ಮೇ 2023, 6:33 IST
Last Updated 26 ಮೇ 2023, 6:33 IST
ಬೆಳಗಾವಿ ತಾಲ್ಲೂಕಿನ ಜಾಫರವಾಡಿಯ ತಮ್ಮ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದ ನಿಕಿತಾ ಪಾಟೀಲ
–ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ಜಾಫರವಾಡಿಯ ತಮ್ಮ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದ ನಿಕಿತಾ ಪಾಟೀಲ –ಪ್ರಜಾವಾಣಿ ಚಿತ್ರ   

ಜಾಫರವಾಡಿ (ಬೆಳಗಾವಿ): ಲೆಕ್ಕ ಪರಿಶೋಧಕಿಯಾಗುವ ಕನಸಿನೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿದ್ದ ಯುವತಿಯೊಬ್ಬರು, ಕೃಷಿಯಲ್ಲಿ ಹೊಸ ಪ್ರಯೋಗ ಕೈಗೊಂಡು ಯಶಸ್ವಿಯಾಗಿದ್ದಾರೆ. ಸಾಂಪ್ರದಾಯಿಕ ಬೆಳೆಗಳನ್ನೇ ಬೆಳೆಯುತ್ತಿದ್ದ ತಮ್ಮ 30 ಗುಂಟೆ ಜಮೀನಿನಲ್ಲಿ  ಮೆಣಸಿನಕಾಯಿ ಬೆಳೆದು ಆರೇ ತಿಂಗಳಲ್ಲಿ ₹6 ಲಕ್ಷ ಲಾಭ ಗಳಿಸಿದ್ದಾರೆ.

ಬೆಳಗಾವಿ ತಾಲ್ಲೂಕಿನ ಜಾಫರವಾಡಿಯ ನಿಕಿತಾ ಪಾಟೀಲ (26) ಅವರ ಯಶೋಗಾಥೆ ಇದು. ಈ ಗ್ರಾಮದಲ್ಲಿ ಕ್ಯಾಬೇಜ್‌, ಗಜ್ಜರಿ, ಆಲೂಗಡ್ಡೆ ಬೆಳೆಗಳನ್ನೇ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ನಿಕಿತಾ ‘ನವಲ್‌ ಭಟಕಾ’ ತಳಿಯ ಮೆಣಸಿನಕಾಯಿ ಬೆಳೆದು ಗಮನ ಸೆಳೆದಿದ್ದಾರೆ.

ಬಿ.ಕಾಂ. ಮುಗಿಸಿದ ಅವರು, ಲೆಕ್ಕ ಪರಿಶೋಧಕಿಯಾಗುವ ಆಸೆ ಹೊಂದಿದ್ದರು. ಆದರೆ, ಕುಟುಂಬಕ್ಕೆ ಆಧಾರವಾಗಿದ್ದ ಮತ್ತು ಕೃಷಿ ಕಾಯಕ ಮಾಡುತ್ತಿದ್ದ ತಂದೆ ವೈಜು ಒಂದೂವರೆ ವರ್ಷದ ಹಿಂದೆ ನಿಧನರಾದರು. ಮನೆಯಲ್ಲಿ ಕೃಷಿ ಮಾಡಲು ಯಾರೂ ಇಲ್ಲದ ಕಾರಣ, ಕಲಿಕೆ ಮುಂದುವರಿಸಬೇಕೇ ಅಥವಾ ಒಕ್ಕಲುತನ ಮಾಡಬೇಕೇ ಎಂದು ನಿಕಿತಾ ಗೊಂದಲಕ್ಕೆ ಒಳಗಾದರು. ಕೊನೆಗೆ ಶಿಕ್ಷಣವನ್ನೇ ಮೊಟಕುಗೊಳಿಸಿ, ಕೃಷಿಯತ್ತ ಹೊರಳಿದರು. ಈಗ ಹಿರಿಯ ಸಹೋದರ ಅಭಿಷೇಕ, ಚಿಕ್ಕಪ್ಪ ತಾನಾಜಿ ಸಹಕಾರದೊಂದಿಗೆ ಈ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಗೋವಾದಲ್ಲಿ ಬೇಡಿಕೆ: ‘ನಾನು ಬೆಳೆದಿರುವ ಮೆಣಸಿನಕಾಯಿಯನ್ನು ಭಜಿ, ಪಿಜ್ಜಾ, ಬರ್ಗರ್‌ ತಯಾರಿಕೆಗೆ ಬಳಸುತ್ತಾರೆ. ಗೋವಾದಲ್ಲಿ ಹೆಚ್ಚಿನ ಬೇಡಿಕೆಯೂ ಇದೆ. ಬೆಳಗಾವಿಯ ಮಾರುಕಟ್ಟೆಯಲ್ಲಿ ತಿಂಗಳ ಹಿಂದೆ 10 ಕೆ.ಜಿಗೆ ₹500 ದರವಿತ್ತು. ಈಗ ₹400 ಇದೆ. ಇದು 8 ತಿಂಗಳ ಬೆಳೆಯಾಗಿದ್ದು, ಈವರೆಗೆ ಮಾಡಿದ 8 ಬಾರಿಯ ಕಟಾವಿನಿಂದ ₹8 ಲಕ್ಷ ಆದಾಯ ಬಂದಿದೆ. ಕೀಟನಾಶಕ, ರಸಗೊಬ್ಬರ ಸಿಂಪಡಣೆ, ಕೂಲಿಯಾಳುಗಳ ವೆಚ್ಚ ಸೇರಿದಂತೆ ₹2 ಲಕ್ಷ ಖರ್ಚಾಗಿದ್ದು, ₹6 ಲಕ್ಷ ಲಾಭವಾಗಿದೆ. ಇನ್ನೆರಡು ತಿಂಗಳಲ್ಲಿ ₹2 ಲಕ್ಷವಾದರೂ ಕೈಗೆಟುಕುತ್ತದೆ ಎಂಬ ನಿರೀಕ್ಷೆಯಿದೆ’ ಎಂದರು.

‘ಶಿಸ್ತುಬದ್ಧವಾಗಿ ಮಾಡಿದರೆ ಯಾವ ವೃತ್ತಿಯೂ ಕೈಹಿಡಿಯುತ್ತದೆ. ಇದಕ್ಕೆ ನಾನೇ ಸಾಕ್ಷಿ. ಯುವಪೀಳಿಗೆ ಕೃಷಿಯಿಂದ ವಿಮುಖವಾಗಬಾರದು. ಬದಲಿಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಕೃಷಿ ರಂಗದಲ್ಲೂ ಸಾಧನೆ ಮೆರೆಯಬೇಕು’ ಎಂಬುದು ನಿಕಿತಾ ಅವರ ಸಲಹೆ.

ಬೆಳಗಾವಿ ತಾಲ್ಲೂಕಿನ ಜಾಫರವಾಡಿಯ ತಮ್ಮ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದ ನಿಕಿತಾ ಪಾಟೀಲ –ಪ್ರಜಾವಾಣಿ ಚಿತ್ರ
ನಿಕಿತಾ ಪಾಟೀಲ ತಮ್ಮ ಜಮೀನಿನಲ್ಲಿ ಬೆಳೆದ ‘ನವಲ್‌ ಭಟಕಾ’ ತಳಿಯ ಮೆಣಸಿನಕಾಯಿ

ಏನನ್ನಾದರೂ ಸಾಧಿಸುವ ತವಕ

‘ಸಾಂಪ್ರದಾಯಿಕ ಬೆಳೆಗಳು ಹೆಚ್ಚಿನ ಶ್ರಮ ಬೇಡುವುದಿಲ್ಲ. ಇನ್ನೂ ಆದಾಯವೂ ಕಮ್ಮಿ. ಜತೆಗೆ ಕೃಷಿಯಲ್ಲಿ ಏನನ್ನಾದರೂ ಸಾಧಿಸುವ ತವಕವಿತ್ತು. ಹಾಗಾಗಿ ಮೆಣಸಿನಕಾಯಿ ಬೆಳೆಯಲು ಮುಂದಾದೆ. 2 ಅಡಿಗೆ ಒಂದರಂತೆ ವೈಜ್ಞಾನಿಕ ಪದ್ಧತಿಯಲ್ಲಿ ಸಸಿಗಳನ್ನು ನಾಟಿ ಮಾಡಿದೆ. ಹನಿ ನೀರಾವರಿ ಪದ್ಧತಿ ಮೂಲಕ ಅವುಗಳಿಗೆ ನೀರುಣಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗುವ ಮಾಹಿತಿ ಮತ್ತು ಕೃಷಿ ಪರಿಣತರ ಸಲಹೆ ಆಧರಿಸಿ ಯೋಜನಾಬದ್ಧವಾಗಿ ಕೃಷಿ ಮಾಡಿದೆ. ಇದರ ಫಲವಾಗಿ ನಾಲ್ಕೈದು ಅಡಿಯವರೆಗೆ ಮೆಣಸಿನಕಾಯಿ ಗಿಡಗಳು ಬೆಳೆದುನಿಂತಿವೆ’ ಎಂದು ನಿಕಿತಾ ಪಾಟೀಲ ‘ಪ್ರಜಾವಾಣಿ’ ಎದುರು ಸಂತಸ ಹಂಚಿಕೊಂಡರು.

ಮೊದಲ ಪ್ರಯೋಗದಲ್ಲೇ ಮೆಣಸಿನಕಾಯಿ ಬೆಳೆದು ಯಶಸ್ವಿಯಾಗಿದ್ದೇನೆ. ಮುಂದೆ ಇನ್ನಷ್ಟು ಪ್ರಯೋಗಗಳನ್ನು ಕೈಗೊಳ್ಳಲು ಯೋಜಿಸಿದ್ದೇನೆ. ಮಳೆಯ ಪ್ರಮಾಣ ಆಧರಿಸಿ ವಿವಿಧ ತರಕಾರಿ ಬೆಳೆದು ಉತ್ತಮ ಆದಾಯ ಗಳಿಸುವುದೇ ನನ್ನ ಗುರಿ
–ನಿಕಿತಾ ಪಾಟೀಲ, ಕೃಷಿ ಸಾಧಕ ಯುವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.