ADVERTISEMENT

ಟ್ಯಾಂಕರ್‌ ನೀರು ಪೂರೈಕೆ ಅವ್ಯವಹಾರ: ಶಾಸಕರ ಭರವಸೆಯ ಮೇರೆಗೆ ಪ್ರತಿಭಟನೆ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 14:41 IST
Last Updated 13 ಮೇ 2019, 14:41 IST
ಎಂ.ಕೆ. ಹುಬ್ಬಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಿರತ ಜನರ ಸಮಸ್ಯೆಯನ್ನು ಶಾಸಕ ಮಹಾಂತೇಶ ದೊಡಗೌಡರ ಆಲಿಸಿದರು
ಎಂ.ಕೆ. ಹುಬ್ಬಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಿರತ ಜನರ ಸಮಸ್ಯೆಯನ್ನು ಶಾಸಕ ಮಹಾಂತೇಶ ದೊಡಗೌಡರ ಆಲಿಸಿದರು   

ಎಂ.ಕೆ.ಹುಬ್ಬಳ್ಳಿ: ಬೋರ್‌ವೆಲ್‌ಗಳಲ್ಲಿ ನೀರಿದ್ದರೂ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಹಣ ಲಪಟಾಯಿಸುತ್ತಿದ್ದಾರೆ ಎಂದು ಆರೋಪಿಸಿ ಕಳೆದ ಮೂರು ದಿನಗಳಿಂದ ಪಟ್ಟಣ ಪಂಚಾಯ್ತಿ ಸದಸ್ಯರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರು, ಶಾಸಕ ಮಹಾಂತೇಶ ದೊಡಗೌಡರ ಅವರ ಭರವಸೆಯ ಮೇರೆಗೆ ಸೋಮವಾರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಇದಕ್ಕೂ ಮುಂಚೆ, ಪಂಚಾಯ್ತಿ ಕಚೇರಿಗೆ ಹಾಕಿದ್ದ ಬೀಗವನ್ನು ತೆಗೆಯಲು ಬಂದಿದ್ದ ತಹಶೀಲ್ದಾರ್‌ ಅವರ ಕಾರಿಗೆ ಜನರು ಘೇರಾವ್‌ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು. ನೀರು ಪೂರೈಸುವ ನೆಪದಲ್ಲಿ ಅನಾವಶ್ಯಕವಾಗಿ ಪಂಚಾಯ್ತಿ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದ್ದು, ಇದರಲ್ಲಿ ಭಾಗಿಯಾಗಿರುವ ಪಂಚಾಯ್ತಿ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್‌ ಹಾಗೂ ಪೊಲೀಸ್‌ ಅಧಿಕಾರಿಗಳು ಹಲವು ಬಾರಿ ಸಮಾಧಾನಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಮಹಾಂತೇಶ ದೊಡಗೌಡರ, ಪ್ರತಿಭಟನಾ ನಿರತರ ಜೊತೆ ಮಾತುಕತೆ ನಡೆಸಿದರು.

ADVERTISEMENT

‘ಈಗ ನೀತಿ ಸಂಹಿತೆ ಇರುವುದರಿಂದ ಅಧಿಕಾರಿಗಳ ಸಭೆ ನಡೆಸುವುದಾಗಲೀ ಅಥವಾ ಕ್ರಮಕೈಗೊಳ್ಳಲಾಗಲಿ ಬರುವುದಿಲ್ಲ. ನೀತಿ ಸಂಹಿತೆ ಮುಗಿದ ನಂತರ ಇದೇ ತಿಂಗಳ 28ರಂದು ಅಧಿಕಾರಿಗಳ ಸಭೆ ನಡೆಸೋಣ. ಈಗ ಪ್ರತಿಭಟನೆ ಮಾಡಿ, ಸರ್ಕಾರಿ ಕೆಲಸಗಳಿಗೆ ಅಡ್ಡಿ ಪಡಿಸಬಾರದು’ ಎಂದು ಮನವರಿಕೆ ಮಾಡಿಕೊಟ್ಟರು.

ನಂತರ ಪೊಲೀಸರು ಪಂಚಾಯ್ತಿ ಕಚೇರಿಯ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ತೆಗೆಯಿಸಿದರು. ಕಚೇರಿ ಕೆಲಸಕ್ಕೆ ಅನುವು ಮಾಡಿಕೊಡಲಾಯಿತು. ಕಚೇರಿ ಸುತ್ತಲೂ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಮನೆಗಳ ಎದುರೂ ಪ್ರತಿಭಟನೆ:

ಕೆಲವು ಜನರು ಪಂಚಾಯ್ತಿ ಸದಸ್ಯರ ಮನೆಗಳ ಎದುರೂ ಪ್ರತಿಭಟನೆ ನಡೆಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನಾಕಾರರ ಮನವೊಲಿಸಿದರು. ಅವರವರ ಮನೆಗಳತ್ತ ಕಳುಹಿಸಿಕೊಟ್ಟರು.

ಖಾಲಿ ಕೊಡ ಹಿಡಿದು ಪ್ರತಿಭಟನೆ:

ಪಟ್ಟಣದ ಗಾಂಧಿ ನಗರದಲ್ಲಿ ಕೆಲವರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಕೆಲಸ ಕಾರ್ಯಗಳನ್ನು ಬಿಟ್ಟು ನೀರಿಗಾಗಿಯೇ ದಿನವಿಡಿ ಸುತ್ತುವಂತಾಗಿದೆ. ಹನಿ ನೀರಿಗೂ ಹಾಹಾಕಾರ ಪಡುತ್ತಿದ್ಧೇವೆ. ತಕ್ಷಣ ನಮಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಅಲ್ಲಿನ ನಿವಾಸಿಗಳು ಖಾಲಿ ಕೊಡ ಹಿಡಿದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.