
ಬೈಲಹೊಂಗಲ: ‘ವೀರರಾಣಿ ಕಿತ್ತೂರು ಚನ್ನಮ್ಮನ ಅಂಗರಕ್ಷಕ ವೀರಕೇಸರಿ ಅಮಟೂರ ಬಾಳಪ್ಪ ಅವರ ಶೌರ್ಯ, ಸಾಹಸ, ನಾಡಪ್ರೇಮ, ದೇಶಭಕ್ತಿ ಎಲ್ಲರಿಗೂ ಸ್ಫೂರ್ತಿ ಆಗಿದೆ. ಆ ವೀರ ಪರಾಕ್ರಮಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಗೌರವವನ್ನು ಒದಗಿಸಿಕೊಡಲು ಪ್ರಯತ್ನ ನಡೆಸಲಾಗುವುದು’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ವೀರಕೇಸರಿ ಅಮಟೂರ ಬಾಳಪ್ಪ ಟ್ರಸ್ಟ್ ಕಮಿಟಿ ನೇತೃತ್ವದಲ್ಲಿ ಗುರುವಾರ ನಡೆದ ವೀರಕೇಸರಿ ಅಮಟೂರ ಬಾಳಪ್ಪ ಪುಣ್ಯಸ್ಮರಣೆ ಹಾಗೂ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಬಾಳಪ್ಪನವರ ಚಿತ್ರದ ಮೆರವಣಿಗೆಗೆ ಪೂಜೆ ಚಾಲನೆ ನೀಡಿ, ‘ವೀರಕೇಸರಿ ಅಮಟೂರ ಬಾಳಪ್ಪ ಅವರ ಪುಣ್ಯಸ್ಮರಣೆಯನ್ನು, ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆ ಜವಾಬ್ದಾರಿ’ ಎಂದರು.
ಗ್ರಾಮದ ಸರ್ಕಾರಿ ಶಾಲೆ ಪಕ್ಕದ ಬಾಳಪ್ಪ ಉದ್ಯಾನದಲ್ಲಿ ಬಾಳಪ್ಪನ ಪ್ರತಿಮೆ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಶಾಲಾ ಮಕ್ಕಳು ಸ್ವಾತಂತ್ರ್ಯ ಸೇನಾನಿಗಳ ಉಡುಗೆ ತೊಟ್ಟು ಮಿಂಚಿದರು.
ನಯಾನಗರ ಸುಖದೇವಾನಂದಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್ ಎಚ್.ಎನ್. ಶಿರಹಟ್ಟಿ, ಕ್ಷೇತ್ರಶಿಕ್ಷಣಾಧಿಕಾರಿ ಎ.ಎನ್. ಪ್ಯಾಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣಕುಮಾರ, ಕಂದಾಯ ನಿರೀಕ್ಷಕ ಬಿ.ಆರ್. ಬೋರಗಲ್ಲ, ಗ್ರಾಮಲೆಕ್ಕಾಧಿಕಾರಿ ಅಭಿಷೇಕ, ವೀರಕೇಸರಿ ಅಮಟೂರ ಬಾಳಪ್ಪ ಟ್ರಸ್ಟ್ ಅಧ್ಯಕ್ಷ ಸೋಮನಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಸಂಗಪ್ಪನವರ, ಹಿರಿಯರಾದ ಪಾಯಪ್ಪ ಬೆಳಗಾವಿ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.