ADVERTISEMENT

ಬೆಳಗಾವಿಯಲ್ಲಿ ಅಮಿತ್‌ ಶಾ ಗೋಪ್ಯ ಸಭೆ

ಜಿಲ್ಲೆಗೆ ಮತ್ತೊಮ್ಮೆ ಬರುತ್ತೇನೆ 18 ಸೀಟ್‌ ಗೆಲ್ಲಲು ತಂತ್ರ ರೂಪಿಸೋಣ: ನಾಯಕರಿಗೆ ಕಟ್ಟಪ್ಪಣೆ ಮಾಡಿದ ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 20:31 IST
Last Updated 28 ಜನವರಿ 2023, 20:31 IST
ಅಮಿತ್‌ ಶಾ
ಅಮಿತ್‌ ಶಾ    

ಬೆಳಗಾವಿ: ‘ನಾನು ಬೆಳಗಾವಿಗೆ ಮತ್ತೊಮ್ಮೆ ಬರುತ್ತೇನೆ ಅಷ್ಟರೊಳಗೆ ಎಲ್ಲ ಭಿನ್ನಮತ ಮುಗಿದಿರಬೇಕು. ಬೆಂಗಳೂರನ್ನು ಹೊರತುಡಿಸಿದರೆ ಬೆಳಗಾವಿಯಲ್ಲೇ ಹೆಚ್ಚು ಕ್ಷೇತ್ರಗಳು ಇವೆ. ಎಲ್ಲ 18 ಕ್ಷೇತ್ರಗಳನ್ನೂ ನಾವು ಗೆಲ್ಲಬೇಕು. ಇದು ಎಲ್ಲರೂ ಒಂದಾಗಿದ್ದರೆ ಮಾತ್ರ ಸಾಧ್ಯ. ಗೆಲುವಿಗೆ ಏನು ಬೇಕೋ ಆ ತಂತ್ರ ರೂಪಿಸೋಣ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಯ ನಾಯಕರಿಗೆ ಕಟ್ಟಪ್ಪಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಗರದ ಯುಕೆ–27 ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ ‘ಹೈ ವೋಲ್ಟೇಜ್‌ ಮೀಟಿಂಗ್‌’ನಲ್ಲಿ ಮಾತನಾಡಿದ ಅವರು, ‘ಈಗ 13 ಸೀಟ್‌ ಗೆದ್ದಿದ್ದೇವೆ. ಒಂದಾಗಿ ಶ್ರಮಪಟ್ಟರೆ 18 ಕ್ಷೇತ್ರಗಳನ್ನೂ ಗೆಲ್ಲುವುದು ಕಷ್ಟವಲ್ಲ. ರಾಜ್ಯಮಟ್ಟದ ನಾಯಕರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಜಿಲ್ಲಾ ನಾಯಕರು ಕಾರ್ಯಕರ್ತರೊಂದಿಗೆ ಸದಾ ಸಂಪರ್ಕದಲ್ಲಿರಬೇಕು. ಬೆಳಗಾವಿಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಇದ್ದ ಪರಿಸ್ಥಿತಿ ಈಗ ಇಲ್ಲ. ಬದಲಾವಣೆಗಳ ಬಗ್ಗೆ ಹಾಗೂ ಗೆಲುವಿನ ಸಾಧ್ಯತೆಗಳ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಬೇಕು’ ಎಂಬುದಾಗಿಯೂ ಅವರು ಸೂಚನೆ ನೀಡಿದರು ಎಂದು ಮುಖಂಡರೊಬ್ಬರು ತಿಳಿಸಿದರು.

ಈ ಸಭೆಗೆ ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಖಾನಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳನ್ನೂ ಆಹ್ವಾನಿಸಲಾಗಿತ್ತು.

ADVERTISEMENT

*
ರಾಜ್ಯದಲ್ಲಿ ಬಿಜೆಪಿ ಪರ ಅಲೆ

‘ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಹೀಗಾಗಿ, 140ಕ್ಕೂ ಹೆಚ್ಚು ಸೀಟ್‌ ಗೆಲ್ಲುತ್ತೇವೆ ಎಂದು ಅಮಿತ್ ಶಾ ಅವರಿಗೆ ಭರವಸೆ ನೀಡಿದ್ದೇನೆ. ಅವರು ನಡೆಸಿದ ಮುಖಂಡರ ಸಭೆ ಸಾಕಷ್ಟು ಫಲಪ್ರದವಾಗಿದೆ’ ಎಂದು ಶಾಸಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸಭೆಯ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಜಿಲ್ಲೆಗೆ ಮತ್ತೊಮ್ಮೆ ಬರುವುದಾಗಿ ಅಮಿತ್‌ ಶಾ ತಿಳಿಸಿದ್ದಾರೆ. ನಾವು ಗೆಲ್ಲುವಂಥ 15 ಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಇನ್ನಷ್ಟು ಶ್ರಮ ಹಾಕಲು ಸೂಚಿಸಿದ್ದಾರೆ. ನನಗೆ ಮುಂದಿನ ತಿಂಗಳು 80 ವರ್ಷ ತುಂಬುತ್ತದೆ. ಆದರೂ ರಾಜ್ಯದಾದ್ಯಂತ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ’ ಎಂದರು.

ಸಚಿವರಾದ ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ಶಾಸಕರಾದ ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಅನಿಲ ಬೆನಕೆ, ಲಕ್ಷ್ಮಣ ಸವದಿ, ಮಹಾಂತೇಶ ದೊಡ್ಡಗೌಡ್ರ, ಶ್ರೀಮಂತ ಪಾಟೀಲ, ಪಿ.ರಾಜೀವ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.