ADVERTISEMENT

ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹಿಸಿ ನಾಳೆ ಅಥಣಿ ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:24 IST
Last Updated 9 ಡಿಸೆಂಬರ್ 2025, 4:24 IST
ಅಥಣಿಯ ಗಚ್ಚಿನಮಠದಲ್ಲಿ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಅಥಣಿ ಜಿಲ್ಲಾ ಹೋರಾಟ ಸಮಿತಿ ಸಭೆ  ನಡೆಯಿತು
ಅಥಣಿಯ ಗಚ್ಚಿನಮಠದಲ್ಲಿ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಅಥಣಿ ಜಿಲ್ಲಾ ಹೋರಾಟ ಸಮಿತಿ ಸಭೆ  ನಡೆಯಿತು   

ಅಥಣಿ: ‘ಆಡಳಿತಾತ್ಮಕ ಅನುಕೂಲತೆ ದೃಷ್ಟಿಯಿಂದ ಬೆಳಗಾವಿ ವಿಭಜಿಸಿದರೆ, ಅಥಣಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಡಿ.10ರಂದು ಅಥಣಿ ಬಂದ್‌ಗೆ ಕರೆ ನೀಡಿದ್ದೇವೆ’ ಎಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡ್ಕರ ಹೇಳಿದರು.

ಇಲ್ಲಿನ ಗಚ್ಚಿನಮಠದ ಸಭಾಂಗಣದಲ್ಲಿ ಅಥಣಿ ಜಿಲ್ಲಾ ಹೋರಾಟ ಸಮಿತಿ ಭಾನುವಾರ ರಾತ್ರಿ ಆಯೋಜಿಸಿದ್ದ ಪೂರ್ವಭಾವಿ ಸಭೆ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

‘ಬೆಳಗಾವಿ ಜಿಲ್ಲಾಕೇಂದ್ರದಿಂದ ಅಥಣಿ 150 ಕಿ.ಮೀ ದೂರದಲ್ಲಿದೆ. ಭೌಗೋಳಿಕವಾಗಿಯೂ ದೊಡ್ಡ ತಾಲ್ಲೂಕಾಗಿದೆ. ವಿವಿಧ ಕೆಲಸಗಳ ನಿಮಿತ್ತ ತಾಲ್ಲೂಕಿನ ಜನರು ಬೆಳಗಾವಿಗೆ ಹೋಗಲು ಪರದಾಡುವಂತಾಗಿದೆ. ಹಾಗಾಗಿ ಅಥಣಿಯನ್ನು ಜಿಲ್ಲೆಯಾಗಿ ಘೋಷಿಸುವುದು ಸೂಕ್ತ’ ಎಂದರು.

ADVERTISEMENT

‘ಆಡಳಿತ ಯಂತ್ರ ಜನರ ಬಳಿಗೆ ಬರಬೇಕು. ಅಭಿವೃದ್ಧಿ ಕೆಲಸಕ್ಕೂ ವೇಗ ಸಿಗಬೇಕು ಎಂಬ ಕಾರಣಕ್ಕೆ, ಕಳೆದೊಂದು ದಶಕದಿಂದ ಅಥಣಿ ಜಿಲ್ಲಾ ಕೇಂದ್ರಕ್ಕಾಗಿ ಹೋರಾಡುತ್ತಿದ್ದೇವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿ ವಿಭಜನೆ ಕುರಿತು ನಿರ್ಣಯ ಕೈಗೊಂಡರೆ, ಗೋಕಾಕ, ಚಿಕ್ಕೋಡಿ ಮತ್ತು ಬೈಲಹೊಂಗಲದೊಂದಿಗೆ ಅಥಣಿಯನ್ನೂ ಜಿಲ್ಲಾಕೇಂದ್ರವಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಅಥಣಿ ಬಂದ್ ಕರೆಗೆ ಮಠಾಧೀಶರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ  ವಿವಿಧ ಸಂಘ–ಸಂಸ್ಥೆಯವರು ಸಾಥ್‌ ನೀಡಿದ್ದಾರೆ. ಅಂದು ಅಥಣಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ರೈತ ಮುಖಂಡ ಶಿವಾನಂದ ಖೋತ, ಮಾಜಿ ಸೈನಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ಮಗದುಮ್ಮ, ಬಿಜೆಪಿ ಮಂಡಲ ಅಧ್ಯಕ್ಷ ಗಿರೀಶ ಬುಟಾಳಿ, ಸಂಪತಕುಮಾರ ಶೆಟ್ಟಿ, ಮಿತೇಶ ಪಟ್ಟಣ, ಶಬ್ಬೀರ್‌ ಸಾತಬಚ್ಚಿ, ಉದಯ ಮಹಾಕಾಣಿ, ಅಣ್ಣಾಸಾಹೇಬ ತೆಲಸಂಗ, ಶಶಿಧರ ಬರ್ಲಿ, ರವಿ ಬಡಕಂಬಿ, ಆಕಾಶ ನಂದಗಾಂವ, ವಿನಯಗೌಡ ಪಾಟೀಲ ಇತರರಿದ್ದರು.

‘ಸಮಿತಿ ತೀರ್ಮಾನಕ್ಕೆ ಬದ್ಧ’

‘ಕಾಗವಾಡ ರಾಯಬಾಗ ಕುಡಚಿ ತೇರದಾಳ ಜಮಖಂಡಿ ರಬಕವಿ ಸೇರಿಸಿಕೊಂಡು ಅಥಣಿಯನ್ನು ಜಿಲ್ಲೆಯಾಗಿ ಘೋಷಿಸಬೇಕು ಎಂಬ ಆಗ್ರಹ ಸಮಂಜಸವಾಗಿದೆ. ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ವಿಚಾರವಾಗಿ ಆಸಕ್ತಿ ತೋರಬೇಕು. ಹೋರಾಟ ಸಮಿತಿ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ’ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.