ADVERTISEMENT

ಅಥಣಿ| ಅಂತರ್ಜಲ ಹೆಚ್ಚಿಸಲು ₹25 ಕೋಟಿ ಮೀಸಲು: ಸಚಿವ ಬೋಸರಾಜು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 2:58 IST
Last Updated 25 ಜನವರಿ 2026, 2:58 IST
ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹಾಗೂ ಶಾಸಕ ಲಕ್ಷ್ಮಣ ಸವದಿ ಅವರಿಗೆ ರೈತರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು
ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹಾಗೂ ಶಾಸಕ ಲಕ್ಷ್ಮಣ ಸವದಿ ಅವರಿಗೆ ರೈತರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು   

ಅಥಣಿ: ‘ತಾಲ್ಲೂಕಿನ ಪೂರ್ವ ವಿವಿಧ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೋರ್‌ವೆಲ್‌ಗಳಿಗೆ ನೀರು ತುಂಬಿಸುವ ವಿನೂತನ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯ ಸಹಕಾರವಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಜೊತೆ ಮಾತನಾಡಿ ಬರುವ ಬಜೆಟ್‌ನಲ್ಲಿ ₹25 ಕೋಟಿ ಅನುದಾನ ಮೀಸಲಿಡುತ್ತೇವೆ’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಭರವಸೆ ನೀಡಿದರು.

ತಾಲ್ಲೂಕಿನ ಕೋಹಳ್ಳಿ ಗ್ರಾಮದಲ್ಲಿ ₹140 ಕೋಟಿ ವೆಚ್ಚದಲ್ಲಿಏಳು ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಶನಿವಾರ ವೀಕ್ಷಿಸಿ ಭಾಗಿನ ಅರ್ಪಿಸಿ ಮಾತನಾಡಿದರು.

‘ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಪ್ರದೇಶಗಳನ್ನು ಗುರುತಿಸಿ, ನಮ್ಮ ಚಿಕ್ಕ ನೀರಾವರಿ ಇಲಾಖೆಯಿಂದ 8,000ಕ್ಕೂ ಅಧಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೆರೆಗಳಿಗೆ ನೀರು ತುಂಬಿಸುವುದು, ಚೆಕ್‌ಡ್ಯಾಮ್‌ ನಿರ್ಮಾಣ, ನಾಲಾಗಳಿಗೆ ಬಾಂದಾರ್ ನಿರ್ಮಾಣ ಸೇರಿದಂತೆ ಇನ್ನಿತರ ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.

ADVERTISEMENT

‘ಲಕ್ಷ್ಮಣ ಸವದಿ ಅವರು ಈ ಭಾಗದ ಜನನಾಯಕ. ದೂರದೃಷ್ಟಿಯ ಕಾರಣ ಈ ಭಾಗದಲ್ಲಿ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ’ ಎಂದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ‘ತಾಲ್ಲೂಕಿನ ಪೂರ್ವ ಭಾಗದ ಹಳ್ಳಿಗಳಲ್ಲಿ 2004ರಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇತ್ತು. ನಾನು ಬಿಜೆಪಿ ಪಕ್ಷದ ಶಾಸಕನಿದ್ದ ಸಂದರ್ಭದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 46 ಗ್ರಾಮಗಳಿಗೆ ಅನುಷ್ಠಾನ ಮಾಡಬೇಕಾದರೆ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಸಚಿವರಾಗಿದ್ದ ಎನ್.ಎಸ್. ಬೋಸರಾಜು ಅವರ ಸಹಕಾರ ಬಹಳ ಮುಖ್ಯವಾಗಿತ್ತು’ ಎಂದರು.

ಕೆರೆಗಳಿಗೆ ನೀರು ತುಂಬಿಸಲು ಸರ್ಕಾರದಿಂದ ಅನುದಾನ ತಂದು ಶ್ರಮಿಸಿದ ಸಣ್ಣ ನೀರಾವರಿ ಸಚಿವರಿಗೆ ಮತ್ತು ಶಾಸಕರಿಗೆ ಈ ಭಾಗದ ರೈತರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್‌ ಶ್ರೀಕಾಂತ ಮಾಕಾಣಿ ಅವರನ್ನು ಸನ್ಮಾನಿಸಲಾಯಿತು.

ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ್ ಸ್ವಾಮೀಜಿ, ಬಾಲ್ಕಿಯ ಸಿದ್ದರಾಮೇಶ್ವರ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಬಿತಾ ಮರಗಾಳಿ, ಮುಖಂಡರಾದ ಎಸ್ ಕೆ ಬೂಟಾಳಿ, ಪರಪ್ಪ ಸವದಿ, ಸಿ.ಎಸ್. ನೇಮಗೌಡ, ಸಿದ್ದರಾಯ ಎಲ್ಲಡಗಿ, ಗುರಪ್ಪ ದಶ್ಯಳ, ಶಾಮ ಪೂಜಾರಿ, ಸಂಗಯ್ಯ ಪೂಜಾರಿ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.