
ಮಾಜಿ ಶಾಸಕ ಮಹೇಶ ಕುಮಠಳ್ಳಿ
ಬೆಳಗಾವಿ: ‘ಬಿಡಿಸಿಸಿ ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷನ ಮೇಲೆ ಶಾಸಕ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಸವದಿ ಮತ್ತು ಬೆಂಬಲಿಗರು ಹಲ್ಲೆ ನಡೆಸಿರುವುದು ಖಂಡನೀಯ. ಇದನ್ನು ಗಮನಿಸಿದರೆ ಅಥಣಿ ಬಿಹಾರ ಆಗುತ್ತಿದೆ ಎನಿಸುತ್ತಿದೆ’ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ದೂರಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಕ್ಷ್ಮಣ ಸವದಿ ಅಳಿಯನನ್ನು ನಿಯಮಾನುಸಾರವೇ ಅಥಣಿ ಶಾಖೆಯಿಂದ ಬೆಳಗಾವಿಗೆ ವರ್ಗಾವಣೆ ಮಾಡಲಾಗಿದೆ. ಹೀಗಿರುವಾಗ ಮನೆಗೆ ಬಂದವರ ಮೇಲೆ ಜವಾಬ್ದಾರಿ ಸ್ಥಾನದಲ್ಲಿರುವ ಇರುವ ಸವದಿ ಹಲ್ಲೆ ನಡೆಸಿರುವುದು ಸರಿಯಲ್ಲ’ ಎಂದು ಆರೋಪಿಸಿದರು.
‘ಈ ಹಿಂದೆ ಬೇರೆಯವರ ಕಡೆಯಿಂದ ಇಂಥ ಕೃತ್ಯ ಮಾಡಿಸುತ್ತಿದ್ದರು. ಈಗ ಅವರೇ ಮಾಡಿದ್ದಾರೆ. ಪೊಲೀಸರೂ ಅವರ ಕಪಿಮುಷ್ಠಿಯಲ್ಲಿದ್ದಾರೆ. ಜನರಿಗೆ ರಕ್ಷಣೆ ನೀಡುವವರೇ ಅವರು ಹೇಳಿದಂತೆ ಕೇಳಿದರೆ ಸರಿಯಲ್ಲ. ಇದು ಶಾಸಕರು ಮಾಡುತ್ತಿರುವ ದ್ವೇಷದ ರಾಜಕಾರಣ’ ಎಂದು ಆಪಾದಿಸಿದರು.
‘ಅಥಣಿಯಲ್ಲಿ ಸವದಿ ಕುಟುಂಬದವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಕನಿಷ್ಠ ಪಕ್ಷ ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬಹುದಿತ್ತು. ಆ ಕೆಲಸವೂ ಆಗಿಲ್ಲ. ಪೊಲೀಸರೂ ಹಲ್ಲೆಗೊಳಗಾದವರ ಮೇಲೆ ಪ್ರಕರಣ ದಾಖಲಿಸಲು ಪ್ರಯತ್ನಿಸಿದ್ದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಈ ಘಟನೆಗೆ ಸಂಬಂಧಿಸಿ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.