
ಅಥಣಿ: ಪುರಸಭೆಯ ವಿವಿಧ ವಾರ್ಡ್‌ಗಳಲ್ಲಿ ಮತ್ತು ಪ್ರಮುಖ ರಾಜ್ಯ ಹೆದ್ದಾರಿಗಳ ದ್ವೀಪಥದಲ್ಲಿ ಗಿಡಗಳನ್ನು ನೆಡುವ ಮೂಲಕ ಪಟ್ಟಣದ ಹಸಿರೀಕರಣ ಮತ್ತು ಸೌಂದರ್ಯೀಕರಣ ಮಾಡುವ ಕಾಮಗಾರಿಗೆ ಬೇರೆಯವರ ಹೆಸರಿನಲ್ಲಿ ಟೆಂಡರ್ ಪಡೆದುಕೊಂಡು ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಇಲ್ಲಿನ ಪೌರಕಾರ್ಮಿಕರನ್ನು ಬಳಸಿಕೊಂಡು ಗಿಡ ನೆಡುವ ಕಾರ್ಯ ಮಾಡುತ್ತಿದ್ದು, ಇದರಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಿತೇಶ ಪಟ್ಟಣ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲ ಮತ್ತು ಚಳಿಗಾಲ ಕಳೆದ ನಂತರ ಇನ್ನೇನು ಒಂದೇ ತಿಂಗಳಲ್ಲಿ ಬೇಸಿಗೆ ಶುರುವಾಗುತ್ತದೆ. ಇಂತಹ ಬೇಸಿಗೆ ಈ ಸಂದರ್ಭದಲ್ಲಿ ಪುರಸಭೆ ಆಡಳಿತ ಗಿಡಗಳನ್ನು ನೆಡಲು ಮುಂದಾಗಿರುವುದು ವಿಪರ್ಯಾಸದ ಸಂಗತಿ. ಈಗಾಗಲೇ ಪುರಸಭೆ ಸದಸ್ಯರು ಸ್ವಂತ ಹಣ ಖರ್ಚು ಮಾಡಿ ನೀಡಲಾಗಿದ್ದ ಗಿಡಗಳನ್ನು ಕಿತ್ತುಹಾಕಿ ಬೇರೆ ಗಿಡಗಳನ್ನು ನೆಡುವ ಮೂಲಕ ಪುರಸಭೆಯ ಅನುದಾನವನ್ನು ದುರ್ಬಳಿಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸುತ್ತಿರುವ ಶoಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಅಂದಾಜು ₹1 ಕೋಟಿ ವೆಚ್ಚದ ಕಾಮಗಾರಿಯನ್ನು ಶೇಖರಗೌಡ ಪಾಟೀಲ ಎಂಬವರ ಹೆಸರಿನಲ್ಲಿ ಮೂರು ಹಂತಗಳಲ್ಲಿ ಟೆಂಡರ್ ನಡೆಸಲಾಗಿದೆ. ಟೆಂಡರ್ ಪಡೆದುಕೊಂಡ ವ್ಯಕ್ತಿ ಮಾಡಬೇಕಾದ ಕಾರ್ಯವನ್ನು ಇಲ್ಲಿನ ಮುಖ್ಯ ಅಧಿಕಾರಿ ಹಾಗೂ ಕೆಲ ಚುನಾಯಿತ ಪುರಸಭೆ ಸದಸ್ಯರು ಸೇರಿಕೊಂಡು ಪೌರಕಾರ್ಮಿಕ ಸಿಬ್ಬಂದಿ ಹಾಗೂ ವಾಹನಗಳನ್ನು ಬಳಸಿ ಗಿಡ ನೆಡುವ ಕಾಮಗಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಖ್ಯ ಅಧಿಕಾರಿ ಅಶೋಕ್ ಗುಡಿಮನಿಯವರ ಕೈವಾಡ ಎದ್ದು ಕಾಣುತ್ತದೆ ಎಂದು ಆರೋಪಿಸಿದರು.
ಆಡಳಿತ ಸದಸ್ಯರಿಂದಲೇ ವಿರೋಧ: ಅಥಣಿ ಪಟ್ಟಣದ ಪ್ರಮುಖ ರಸ್ತೆಗಳ ದ್ವಿಭಾಜಕದಲ್ಲಿ ಗಿಡ ನೆಡುವ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದ ಈ ಟೆಂಡರ್ ಪ್ರಕ್ರಿಯೆಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲದೆ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮಾತ್ರ ಆಗಿದ್ದು, ಇದು ಕಾನೂನು ಬಾಹಿರ. ಈ ಟೆಂಡರನ್ನು ರದ್ದುಪಡಿಸಬೇಕೆಂದು 18 ಜನ ಪುರಸಭೆಯ ಸದಸ್ಯರು, ಮುಖ್ಯಾಧಿಕಾರಿ ಸೇರಿದಂತೆ ಮೇಲಾಧಿಕಾರಿಗಳಿಗೆ ಡಿ.30 ರಂದು ಅರ್ಜಿ ಸಲ್ಲಿದ್ದಾರೆ. ಆದರೆ ಅದಕ್ಕೆ ಇನ್ನೂವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಡಳಿತ ಸದಸ್ಯರ ವಿರೋಧ ಇದ್ದರೂ ಕೂಡ ಪುರಸಭೆ ಮುಖ್ಯ ಅಧಿಕಾರಿ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಈ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಮೇಲಾಧಿಕಾರಿಗಳು ಈ ಬಗ್ಗೆ ಕುಲಂಕುಶವಾಗಿ ಪರಿಶೀಲಿಸಿ ಶಿಸ್ತುಕ್ರಮ ಜರುಗಿಸಬೇಕೆಂದು ಅಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.