ಮಹಾರಾಷ್ಟ್ರದ ವಿವಿಧ ನಗರಗಳಿಗೆ ತೆರಳುವವರು ಬಸ್‌ಗಾಗಿ ಕಾಯುತ್ತ ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನಿಂತಿರುವುದು ಪ್ರಜಾವಾಣಿ ಚಿತ್ರ
ಬೆಳಗಾವಿ: ‘ಮರಾಠಿ ಮಾತನಾಡಲು ಬರಲ್ಲ’ ಎಂದು ಹೇಳಿದ್ದಕ್ಕೆ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಮಾರಿಹಾಳ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಈಗಾಗಲೇ ಬಂಧಿಸಲಾಗಿತ್ತು. ಈಗ ಬಾಳೇಕುಂದ್ರಿಯ ಮೋಹನ ಹಂಚಿನಾಳ ಬಂಧಿಸಿದ್ದು, ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಕರ್ನಾಟಕ–ಮಹಾರಾಷ್ಟ್ರ ಮಧ್ಯೆ ಭಾನುವಾರವೂ ಬಸ್ ಸಂಚಾರ ಸ್ಥಗಿತ ಮುಂದುವರಿದಿದ್ದು, ಪ್ರಯಾಣಿಕರು ಪರದಾಡಿದರು. ಬೆಳಗಾವಿಯಿಂದ ಕೊಲ್ಹಾಪುರ, ಪುಣೆ, ಸಾತಾರಾ, ಮುಂಬೈ ಮತ್ತಿತರ ಕಡೆ ತೆರಳುವವರು ಬಸ್ ಸಿಗದೆ ಹೈರಾಣಾದರು. ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆಗಳ ಬಸ್‌ಗಳು ತಮ್ಮ ಗಡಿಯವರೆಗಷ್ಟೇ ಕಾರ್ಯಾಚರಣೆ ನಡೆಸಿದವು.
ಕರ್ನಾಟಕ ಬಸ್‌ಗೆ ಮಸಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೊ ಬಸ್‌ಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಪ್ಪು ಮಸಿ ಬಳಿಯಲಾಗಿದೆ. ಬೆಳಗಾವಿಯಿಂದ ನಾಸಿಕ್‌ಗೆ ಹೋಗಿದ್ದ ಬಸ್‌ಗೆ ಮಸಿ ಬಳಿದು, ‘ಮನಸೇ ಮರಾಠಿ’ ಹಾಗೂ ‘ಜೈ ಮಹಾರಾಷ್ಟ್ರ’ ಎಂದು ಬರೆಯಲಾಗಿದೆ.
‘ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಜತೆಗೆ, ನಿರ್ವಾಹಕನ ವಿರುದ್ಧ ದಾಖಲಿಸಿದ ಪೋಕ್ಸೊ ಪ್ರಕರಣ ಹಿಂದಕ್ಕೆ ಪಡೆಯುವವರೆಗೆ ಹೋರಾಡುತ್ತೇವೆ. ನಮ್ಮ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಫೆ.25ರಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಅಲ್ಲಿಂದ ಸಣ್ಣ ಬಾಳೇಕುಂದ್ರಿಯವರೆಗೆ ಮೆರವಣಿಗೆ ಮಾಡಿ ಪ್ರತಿಭಟಿಸುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.
ಸಾರಿಗೆ ಸಚಿವರ ಭೇಟಿ ಇಂದು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಬೆಳಗಾವಿಗೆ ಬರಲಿದ್ದು, ಬೆಳಿಗ್ಗೆ 9.30ಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ.
ಒಳ್ಳೆ ಬೆಳವಣಿಗೆಯಲ್ಲ–ಪಾಟೀಲ
ಹುಬ್ಬಳ್ಳಿ: ‘ವಾಯವ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ಮತ್ತು ಚಾಲಕ ಮೇಲಿನ ಹಲ್ಲೆ ಪ್ರಕರಣ ಬೇರೆಬೇರೆ ಸ್ವರೂಪ ಪಡೆಯುತ್ತಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕನ್ನಡಿಗರು ಮತ್ತು ಮರಾಠಿಗರು ಎನ್ನುವ ಭೇದ ಸರಿಯಲ್ಲ. ಬೆಳಗಾವಿಯಲ್ಲಿ ಎಲ್ಲರೂ ನೆಮ್ಮದಿಯಾಗಿದ್ದಾರೆ. ಹೀಗಿದ್ದಾಗ ಅನವಶ್ಯಕ ವಿಚಾರಗಳು ಮುನ್ನಲೆಗೆ ಬರಬಾರದು. ನಿರ್ವಾಹಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದರಿಂದ ಸೃಷ್ಟಿಯಾಗಿರುವ ಗೊಂದಲ ಶೀಘ್ರ ಪರಿಹರಿಸಲಾಗುವುದು’ ಎಂದರು.
‘ಸಂಪುಟ ಪುನರ್ ರಚನೆ, ಏಳು ಸಚಿವರ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ ಎಲ್ಲವೂ ಕಪೋಲಕಲ್ಪಿತ, ಅನವಶ್ಯಕ ಚರ್ಚೆ. ಗೃಹ ಸಚಿವ ಜಿ. ಪರಮೇಶ್ವರ ಅವರು ರಾಜೀನಾಮೆ ನೀಡುವ ವಿಚಾರ ನನಗೆ ಗೊತ್ತಿಲ್ಲ’ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
‘ಪ್ರಸ್ತುತ ಮಾರ್ಚ್‌ನಲ್ಲಿ ಮಂಡನೆಯಾಗುವ ರಾಜ್ಯ ಬಜೆಟ್ ವಿಚಾರದಲ್ಲಿ ಸಾಕಷ್ಟು ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇವೆ. ನಮಗೆ ಕೊಡಬೇಕಾದ ಪಾಲನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಣಾಕ್ಷತನದಿಂದ ಬಜೆಟ್ ಮಂಡಿಸಲಿದ್ದಾರೆ’ ಎಂದರು.
‘ರಾಜ್ಯದ ವಿರುದ್ಧ ಪಿತೂರಿ ಸಹಿಸಲ್ಲ’
ಬೆಂಗಳೂರು: ‘ಈ ನೆಲದ ನೀರು, ಅನ್ನ, ಗಾಳಿ ಸೇವಿಸಿ ಕನ್ನಡದ ವಿರುದ್ಧ ಮಾತನಾಡುವುದು, ರಾಜ್ಯದ ವಿರುದ್ಧ ಪಿತೂರಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಳಗಾವಿ ಗಡಿಭಾಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್‌ನ ಕಂಡಕ್ಟರ್ ಮೇಲೆ ನಡೆಸಿದ ಹಲ್ಲೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
‘ನಮ್ಮ ನೆಲದಲ್ಲೇ ಇದ್ದುಕೊಂಡು ಕನ್ನಡಿಗರ ತೇಜೋವಧೆ ಮಾಡುವುದು ಅಕ್ಷಮ್ಯ. ಅನೇಕ ಕನ್ನಡಪರ ಹೋರಾಟಗಾರರ ಹೇಳಿಕೆಗಳನ್ನು ಗಮನಿಸಿದ್ದೇನೆ. ಇದರ ವಿರುದ್ಧ ಕನ್ನಡಿಗರು ಧ್ವನಿ ಎತ್ತಬೇಕು. ಷಡ್ಯಂತ್ರ, ಪಿತೂರಿ ಮಾಡುವವರನ್ನು ಸರ್ಕಾರ ಹತ್ತಿಕ್ಕಬೇಕು’ ಎಂದು ಅವರು ಒತ್ತಾಯಿಸಿದರು.
‘ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಕೊಲೆ, ದರೋಡೆಗಳು ನಡೆಯುತ್ತಿವೆ. ಬೆಂಗಳೂರು ಸುರಕ್ಷಿತವಾಗಿಲ್ಲ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು. ಆದರೆ, ಗೃಹ ಸಚಿವರು ರಾಜೀನಾಮೆ ಕೊಡಬೇಕೇ... ಕೊಡುತ್ತೇನೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಇದು ಅವಿವೇಕದ ಪರಮಾವಧಿ. ಕಾನೂನು– ಸುವ್ಯವಸ್ಥೆ ಕಾಪಾಡಬೇಕು ಎಂದು ಜನ ಇವರಿಗೆ ಮತ ಕೊಟ್ಟಿದ್ದಾರೆ. ಆ ಕೆಲಸ ಮಾಡದೇ, ಅಸಂಬದ್ಧ ಹೇಳಿಕೆಗಳನ್ನು ನೀಡಿದರೆ ದೇಶದ್ರೋಹಿಗಳು ಮತ್ತು ಕೊಲೆಗಡುಕರಿಗೆ ಆನೆ ಬಲ ಬಂದಂತಾಗುತ್ತದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.