ಬೆಳಗಾವಿ: ‘ನಮ್ಮ ಹಿತದೃಷ್ಟಿಯಿಂದ ಪ್ರಯಾಣ ಬಾಡಿಗೆ ದರ ಪರಿಷ್ಕರಿಸಬೇಕು’ ಎಂದು ಆಗ್ರಹಿಸಿ ಆಟೊರಿಕ್ಷಾ ಓನರ್ಸ್ ಮತ್ತು ಡ್ರೈವರ್ಸ್ ಅಸೋಸಿಯೇಷನ್‌ನವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲದಿದ್ದರೆ ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
‘ಕನಿಷ್ಠ ಬಾಡಿಗೆ ದರವನ್ನು(1.5 ಕಿ.ಮಿನೊಳಗೆ) ₹50 ದರ ನಿಗದಿಪಡಿಸಬೇಕು. ನಂತರ ಪ್ರತಿ ಕಿ.ಮೀ ಪ್ರಯಾಣಕ್ಕೆ ₹30 ನಿಗದಿಪಡಿಸಬೇಕು. ಇದು ದುಬಾರಿ ಯುಗ. ಡೀಸೆಲ್ ಸೇರಿ ಅಗತ್ಯವಸ್ತುಗಳ ದರ ಹೆಚ್ಚಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹಾಗಾಗಿ ನಮ್ಮ ಬೇಡಿಕೆಯಂತೆ ಪ್ರಯಾಣ ಬಾಡಿಗೆ ದರ ನಿಗದಿಪಡಿಸಬೇಕು. ನಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಯಾವುದೇ ನಿರ್ಣಯ ಕೈಗೊಳ್ಳಬೇಕು’ ಎಂದು ಅಸೋಸಿಯೇಷನ್ ಅಧ್ಯಕ್ಷ ಮನ್ಸೂರ್ ಒತ್ತಾಯಿಸಿದರು.
‘ಬೆಳಗಾವಿ ನಗರದಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಎಲೆಕ್ಟ್ರಿಕ್ ಆಟೊಗಳ ಸಂಚಾರ ಸ್ಥಗಿತಗೊಳಿಸಬೇಕು. ಬೆಳಗಾವಿ ನಗರದಿಂದ 16 ಕಿ.ಮೀ ವ್ಯಾಪ್ತಿಯಲ್ಲಿ ಆಟೊರಿಕ್ಷಾಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆ ಮಿತಿಯನ್ನು 30 ಕಿ.ಮೀಗೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
ಬಿ.ಕೆ.ಅವರೊಳ್ಳಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.