ADVERTISEMENT

ಈ ಆಸ್ಪತ್ರೆಯಲ್ಲಿ ಹಿತ್ತಲ ಗಿಡ ‘ಮದ್ದು’

ಸುಧಾಕರ ಎಸ್.ತಳವಾರ, ಬೆಂಗಳೂರು
Published 23 ಫೆಬ್ರುವರಿ 2021, 14:45 IST
Last Updated 23 ಫೆಬ್ರುವರಿ 2021, 14:45 IST
ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆ ಆವರಣದ ಆಯುರ್ವೇದ ಸಸಿಗಳನ್ನು ಬೆಳೆಸಿರುವುದು
ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆ ಆವರಣದ ಆಯುರ್ವೇದ ಸಸಿಗಳನ್ನು ಬೆಳೆಸಿರುವುದು   

ಚಿಕ್ಕೋಡಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಒಬ್ಬರು ರೋಗಿಗಳ ಆರೋಗ್ಯ ಸೇವೆಯೊಂದಿಗೆ ಆಸ್ಪತ್ರೆ ಆವರಣದಲ್ಲಿ ಆಯುರ್ವೇದ ಸಸ್ಯೋದ್ಯಾನ ಅಭಿವೃದ್ಧಿಪಡಿಸಿ, ಆಯುರ್ವೇದ ಔಷಧಿ ಕುರಿತು ಜನಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ ವೈದ್ಯಾಧಿಕಾರಿಯಾಗಿರುವ ಡಾ.ಲಕ್ಷ್ಮೀಕಾಂತ ಕಡ್ಲೆಪ್ಪಗೋಳ ಅವರು ಆಸ್ಪತ್ರೆ ಆವರಣ ಖಾಲಿ ಜಾಗದಲ್ಲಿ ಆಯುರ್ವೇದದ ಸಸಿಗಳನ್ನು ಬೆಳೆಸಿದ್ದಾರೆ.

ಡಾ.ಕಡ್ಲೆಪ್ಪಗೋಳ ಅವರು ಸರ್ಕಾರ ಜಾರಿಗೊಳಿಸಿದ್ದ ‘ಕಾಯಕಲ್ಪ’ ಯೋಜನೆಯನ್ನು ಬಳಸಿಕೊಂಡು ಆಸ್ಪತ್ರೆಯ ಆವರಣದ ಮೂಲೆಯೊಂದರಲ್ಲಿ ಪಾಳು ಬಿದ್ದಿದ್ದ ಜಾಗದಲ್ಲಿ ಯಕ್ಸಂಬಾದಿಂದ ಫಲವತ್ತಾದ ಮಣ್ಣು ತರಿಸಿಕೊಂಡು ಸಮತಟ್ಟಾಗಿ ಭೂಮಿಯನ್ನು ಸಿದ್ಧಪಡಿಸಿಕೊಂಡರು. ಅರಭಾವಿಯ ನರ್ಸರಿಯಿಂದ ವಿವಿಧ ಜಾತಿಯ ಆಯುರ್ವೇದದ ಸಸಿಗಳನ್ನು ಮತ್ತು ವಾಯುವಿಹಾರಕ್ಕೆ ಹೋದಾಗಲೆಲ್ಲ ರಸ್ತೆ ಪಕ್ಕಗಳಲ್ಲಿ ಸಿಗುವ ಅಮೂಲ್ಯವಾದ ಆಯುರ್ವೇದ ಔಷಧಿಯ ಗುಣವುಳ್ಳ ಸಸಿಗಳನ್ನು ತಂದು ನೆಟ್ಟು ಬೆಳೆಸಿದ್ದಾರೆ. ಈಗ ಅಲ್ಲಿ ನೂರಕ್ಕೂ ಹೆಚ್ಚು ಸಸಿಗಳು ಬೆಳೆದಿದೆ.

ADVERTISEMENT

ಸಸ್ಯೋದ್ಯಾನ ಅಭಿವೃದ್ಧಿಪಡಿಸುವಲ್ಲಿ ಆಸ್ಪತ್ರೆಯ ಆಗಿನ ಸಿಎಂಒ ಡಾ.ಎಸ್.ಎಸ್. ಗಡೇದ ಅವರ ಸಹಕಾರವನ್ನು ಡಾ.ಕಡ್ಲೆಪ್ಪಗೋಳ ಸ್ಮರಿಸುತ್ತಾರೆ. ‘ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವ ಚಿತ್ರಕಮೂಲ, ಇನ್ಸುಲಿನ್, ಹರಿತ ಮಂಜರಿ, ಶತಾವರಿ, ನಾಗದಾಳಿ, ಕಾಕಮಾಚಿ, ಚಾಂಗೇರಿ, ಭೃಂಗರಾಜ, ಏರಂಡೆ, ಅನ್ನಪೂರ್ಣಾ, ಬೆಟ್ಟದ ನೆಲ್ಲಿ, ತುಳಸಿ, ನಿರ್ಗುಂಡಿ, ಅಮೃತಬಳ್ಳಿ, ದೊಡ್ಡಪತ್ರಿ, ಗುಲಗಂಜಿ, ಕರಿಬೇವು, ಹಿಪ್ಪಲಿ, ವಚಾ (ಬಜ್ಜೆ ಬೇರು), ರಾಸ್ನಾ, ಸದಾಪುಷ್ಪ, ಅತ್ತಿಮರ, ನುಗ್ಗೆ, ನಿಂಬೆ, ಪಪ್ಪಾಯಿ, ಗವತಿ, ಕರಂಜ, ನೇರಳೆ ಸೇರಿದಂತೆ ತರಹೇವಾರಿ ಆಯುರ್ವೇದ ಸಸ್ಯಗಳನ್ನು ಬೆಳೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕಡ್ಲೆಪ್ಪಗೋಳ ಅವರು ಆಯುರ್ವೇದ ಕುರಿತ ಆಸಕ್ತರನ್ನು ಸಸ್ಯೋದ್ಯಾನಕ್ಕೆ ಕರೆದುಕೊಂಡು ಹೋಗಿ ಯಾವ ಕಾಯಿಲೆಗೆ ಯಾವ ಸಸ್ಯ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ತಿಳಿಸಿ ಆಯುರ್ವೇದದ ಕುರಿತು ಅರಿವು ಮೂಡಿಸುವಲ್ಲೂ ತೊಗಡಿದ್ದಾರೆ. ಕಾಯಿಲೆಯಿಂದ ಮುಕ್ತರಾಗಲು ಆಯುರ್ವೇದದ ಔಷಧಿ ಬಳಸುವಂತೆ ಮನವರಿಕೆ ಮಾಡಿಕೊಡುತ್ತಾರೆ. ಆಸಕ್ತರಿಗೆ ಸಸ್ಯಗಳಿಂದ ಎಲೆ ಅಥವಾ ಕಾಂಡ, ಹಣ್ಣುಗಳನ್ನು ನೀಡಿ ಸೇವಿಸಲು ತಿಳಿಸುತ್ತಾರೆ. ಅಲ್ಲದೇ, ಬೆಳೆಸಲು ಇಚ್ಛಿಸುವವರಿಗೆ ಸಸಿಗಳನ್ನು ಕೂಡ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.