
ಬೈಲಹೊಂಗಲ: ‘ಜಿಲ್ಲಾ ಕೇಂದ್ರವಾಗಲು ಬೈಲಗೊಂಗಲ ಎಲ್ಲ ಸೌಕರ್ಯಗಳನ್ನೂ ಹೊಂದಿದೆ. ಮೂರು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಪ್ರಕಟಿಸಬೇಕು’ ಎಂದು ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಆಗ್ರಹಿಸಿದರು.
ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಬೈಲಹೊಂಗಲ ಕೇಂದ್ರವಾಗಿ ಹೊಸ ಜಿಲ್ಲೆ ರಚನೆ ಮಾಡಬೇಕು ಎಂದು ಆಗ್ರಹಿಸಿ, ಶನಿವಾರ ಕರೆ ನೀಡಿದ್ದ ‘ಬೈಲಹೊಂಗಲ ಬಂದ್’ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಅವರಂಥ ಐತಿಹಾಸಿಕ ಪುರುಷರ ನಾಡು ಇದು. ಬ್ರಿಟಿಷ್ ಕಾಲದಿಂದಲೂ ಪ್ರಾದೇಶಿಕ ಮಹತ್ವ ಪಡೆದಿದೆ. ದಿವಂಗತ ಸಿ.ಎಂ ಪಾಟೀಲ ಅವರು ಬೈಲಹೊಂಗಲ ಜಿಲ್ಲಾ ಕೇಂದ್ರವಾಗಿಸಲು ಅನೇಕ ಹೋರಾಟ ಮಾಡಿದ್ದಾರೆ. ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆ ವಿಭಜನೆ ಮಾಡುವುದಾದರೆ ಬೈಲಹೊಂಗಲವೇ ಜಿಲ್ಲಾ ಕೇಂದ್ರವಾಗಬೇಕು’ ಎಂದರು.
ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ಮಾತನಾಡಿದರು.
‘ಕಳೆದ ಅಧಿವೇಶನದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮುಂದಾಳತ್ವದಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ ಒಯ್ದು 258 ಪುಟಗಳ ಸಮಗ್ರ ಮಾಹಿತಿ ಹೊಂದಿರುವ ‘ಬೈಲಹೊಂಗಲ ಕೈಪಿಡಿ’ ನೀಡಲಾಗಿದೆ. ಮತ್ತೆ ಶಾಸಕರ ನೇತೃತ್ವ, ಮಠಾಧೀಶರ ಮಾರ್ಗದರ್ಶನ ಹಾಗೂ ಎಲ್ಲ ಸಂಘಟನೆಗಳ ಮುಖಂಡರ ಸಹಯೋಗದಲ್ಲಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗುವುದು. ಒಂದು ವೇಳೆ ಸರ್ಕಾರ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಬೈಲಹೊಂಗಲ ನಿರ್ಲಕ್ಷಿಸಿದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ.ಮಹಾಂತಯ್ಯ ಆರಾದ್ರಮಠ ಶಾಸ್ತ್ರಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಮಹಾಂತೇಶ ತುರಮರಿ, ವಿಜಯ ಮೆಟಗುಡ್ಡ, ಮಲ್ಲಿಕಾರ್ಜುನ ಹುಂಬಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್. ಮೇಳವಂಕಿ, ಬಿ.ಬಿ. ಗಣಾಚಾರಿ, ಬಾಬು ಸುತಗಟ್ಟಿ, ಮಲ್ಲಪ್ಪ ಮುರಗೋಡ, ಶಿವಾನಂದ ಕೋಲಕಾರ, ಡಾ.ಶಿವನಾಗ ಅವ್ವಕ್ಕನವರ ಹಲವರು ನೇತೃತ್ವ ವಹಿಸಿದ್ದರು.
ಇದೇ ವೇಳೆ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಹಾಗೂ ಲೋಕಾಯುಕ್ತ ಇನ್‌ಸ್ಪೆಕ್ಟರ್ ಪಂಚಾಕ್ಷರಯ್ಯ ಸಾಲಿಮಠ ಅವರ ನಿಧನಕ್ಕೆ ಮೌನ ಆಚರಿಸಿ ಸಂತಾಪ ವ್ಯಕ್ತಪಡಿಸಲಾಯಿತು.
ನಂತರ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಪ್ರಮುಖ ಬಜಾರ್ ರಸ್ತೆಯ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ಉಪವಿಭಾಗಾಧಿಕಾರಿ ಪ್ರವೀಣ ಜೈನ ಮನವಿ ಸ್ವೀಕರಿಸಿದರು.
ಜಿಲ್ಲೆ ವಿಭಜನೆ ಮಾಡುವುದಾದರೆ ಉಪ ವಿಭಾಗ ಕೇಂದ್ರವಾಗಿರುವ ಬೈಲಹೊಂಗಲವನ್ನೇ ಜಿಲ್ಲೆ ಮಾಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲಾಗುವುದುಬಾಬಾಸಾಹೇಬ ಪಾಟೀಲ ಶಾಸಕ ಚನ್ನಮ್ಮನ ಕಿತ್ತೂರು
ಸರ್ಕಾರ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಲು ಮುಂದಾದರೆ ಬೈಲಹೊಂಗಲಕ್ಕೆ ಪ್ರಥಮ ಆದ್ಯತೆ ನೀಡಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲದುಶಿವರಂಜನ ಬೋಳನ್ನವರ ಅಧ್ಯಕ್ಷ ಜಿಲ್ಲಾ ಹೋರಾಟ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.