
ಬೈಲಹೊಂಗಲ: ಸವದತ್ತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿರುವ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ. ಆದರೂ ಕಾರ್ಖಾನೆಯ ಮಾಲೀಕರು ಮತ್ತು ಆಡಳಿತ ಮಂಡಳಿ ಮೃತಪಟ್ಟವರ ಕುಟುಂಬಗಳಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದೆ. ಇದು ಖಂಡನಾರ್ಹ ಎಂದು ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ್ ಕುಲ್ಕರ್ ನೇತೃತ್ವದಲ್ಲಿ ಕಾರ್ಖಾನೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರ ಬಗ್ಗೆ ಮುಂಜಾಗೃತೆ ಕ್ರಮ ಕೈಗೊಳ್ಳದೇ ಇರುವ ಕಾರಣದಿಂದ ಎಂಟು ಜನ ಮೃತಪಟ್ಟಿದ್ದಾರೆ. ಆದ್ದರಿಂದ ಕಾರ್ಮಿಕರ ಕುಟುಂಬಕ್ಕೆ ತಲಾ ₹1 ಕೋಟಿ ಪರಿಹಾರ ಘೋಷಣೆ ಮಾಡಬೇಕು ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಇನ್ನು ಮುಂದಾದರೂ ಗುಣಮಟ್ಟದ ಸುರಕ್ಷತಾ ಕ್ರಮಗಳನ್ನು ಮತ್ತು ಭದ್ರತೆ ಒದಗಿಸುವ ಸಲುವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಷ್ಟೆಲ್ಲ ಅನಾಹುತಗಳು ನಡೆದರೂ ಕಾರ್ಖಾನೆಯ ಮಾಲೀಕರು ಬಂದು ಮೃತ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ. ಇದು ಖಂಡನೀಯ. ಸೌಜನ್ಯ ತೋರಿಸದಿದ್ದರೆ ಪರವಾಗಿಲ್ಲ; ಮೃತರ ಕುಟುಂಬದವರಿಗೆ ನ್ಯಾಯಸಮ್ಮತ ಪರಿಹಾರ ಕೊಡಿ ಎಂದೂ ಆಗ್ರಹಿಸಿದ್ದಾರೆ.
ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸನಗೌಡ ಸಂಗನಗೌಡರ, ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಬೋಳನ್ನವರ, ದೀಪಕ್ ಸಟೋಜಿ, ಶಿವಾನಂದ ಕುರಬೇಟ, ಮಲ್ಲಿಕಾರ್ಜುನ ಬಾಜಿ, ಅಭಿಷೇಕ ಕಲಾಲ್, ಸೋಮು ತೋಟಗಿ, ಪಕ್ರು ಕುಸ್ಲಾಪುರ ನೇತೃತ್ವ ವಹಿಸಿದ್ದರು.
‘ಸರ್ಕಾರದಿಂದಲೂ ಪರಿಹಾರ ನೀಡಿ’
ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಎಂಟೂ ಕಾರ್ಮಿಕರ ಕುಟುಂಬಗಳಿಗೆ ಕಾರ್ಖಾನೆಯಿಂದ ಸೂಕ್ತ ಪರಿಹಾರ ನೀಡಬೇಕು. ಮಾತ್ರವಲ್ಲ; ಕಾರ್ಮಿಕ ಇಲಾಖೆಯಿಂದ ತಲಾ ₹10 ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಕರ್ನಾಟಕ ರಕ್ಷಣಾವ ವೇದಿಕೆ (ನಾರಾಯಣಗೌಡ ಬಣ) ಮುಖಂಡರು ಆಗ್ರಹಿಸಿದ್ದಾರೆ.
ಈ ಬಗ್ಗೆ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಹುಡಗನಟ್ಟಿ ನೇತೃತ್ವದಲ್ಲಿ ಈಚೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ‘ಇನಾಮದಾರ ಕಾರ್ಖೆನೆಯ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಮೃತರ ಕುಟುಂಬದಲ್ಲಿ ಒಬ್ಬರಿಗೆ ನೌಕರಿ ನೀಡಬೇಕು. ಮುಂದೆ ಇಂಥ ಘಟನೆ ಸಂಭವಿಸದಂತೆ ಎಲ್ಲ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಬೇಕು’ ಎಂದೂ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.