
ಬೈಲಹೊಂಗಲ: 'ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತಿರುವ ಇಂಚಲ ಶಿವಾನಂದ ಭಾರತಿ ಸ್ವಾಮೀಜಿ ಅವರ ನೇತೃತ್ವದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯ ಅನನ್ಯವಾಗಿದೆ' ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧುಸಂಸ್ಥಾನ ಮಠದಲ್ಲಿ ಗುರುವಾರ ನಡೆದ ಶ್ರೀಶಿವಯೋಗೀಶ್ವರ ಇಂಗ್ಲಿಷ್ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
'ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಇಂಚಲ ಗ್ರಾಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ ಕೀರ್ತಿ ಶಿವಾನಂದ ಭಾರತಿ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ರಾಜಕೀಯ, ಅಧಿಕಾರ, ಹುದ್ದೆಗಳನ್ನು ಹೊರಗೆ ಬಿಟ್ಟು ಇಂಚಲ ಮಠಕ್ಕೆ ಒಬ್ಬ ಭಕ್ತನಾಗಿ, ಸೇವಕನಾಗಿ ಬಂದಿದ್ದೇನೆ. ಮುಂಬರುವ ದಿನಗಳಲ್ಲಿ ಅಜ್ಜನವರ ಜನ್ಮಶತಮಾನೋತ್ಸವವನ್ನು ಅದ್ಧೂರಿಯಾಗಿ ಮಾಡುವ ಸಂಕಲ್ಪ ಇಟ್ಟುಕೊಂಡಿದ್ದೇನೆ. ಒಂದೇ ವರ್ಷದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯ ನೂತನ ಕಟ್ಟಡ ನಿರ್ಮಿಸಿದ್ದು ಶ್ಲಾಘನೀಯವಾಗಿದೆ' ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ‘ಇಂಚಲ ಮಠದ ಪರಮಭಕ್ತನಾದ ನಾನು ಇಂಚಲ ಮಠದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದು, ಶ್ರೀಗಳ ಆಶೀರ್ವಾದಿಂದ ನಮ್ಮ ನಾಡು ಸಮೃದ್ಧಿಯಿಂದ ಇದೆ. ಎಲ್ಲರೂ ಚನ್ನಾಗಿದ್ದೇವೆ, ಇಂಚಲ ಶಿಕ್ಷಣ ಕಾಶಿ' ಎಂದರು.
ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಇಂಚಲ ಶ್ರೀಗಳಿಗೆ ಭಕ್ತಿಯಿಂದ ನಡೆದುಕೊಂಡರೆ ಜೀವನ ಸಾರ್ಥಕ ಪಡೆಯುತ್ತದೆ ಎಂದರು.
ಇಂಚಲ ಸಾಧುಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಧಾರವಾಡದ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿದರು. ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ, ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಇಂಚಲ ಸಂಸ್ಥೆ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ಪರಪ್ಪ ಸವದಿ, ಶಂಕರ ಮಾಡಲಗಿ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಶಾಸಕ ದುಯೋಧನ ಐಹೊಳೆ, ತಹಶೀಲ್ದಾರ್ ಹನುಮಂತ ಶಿರಹಟ್ಟಿ, ಮಾಜಿ ಶಾಸಕ ಅರವಿಂದ ಪಾಟೀಲ, ಬಸವರಾಜ ಜನ್ಮಟ್ಟಿ, ಶಿವಾನಂದ ಬೆಳಗಾವಿ, ಸೆದೆಪ್ಪ ವಾರಿ, ನಾಗಪ್ಪ ಮೇಟಿ, ಚಂದ್ರು ನರಗುಂದ ಇದ್ದರು.
ಇದೇ ವೇಳೆ ಸಾಧಕರನ್ನು ಮತ್ತು ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. ಬಾಬಾನಾಯ್ಕ ರಾಯನಾಯ್ಕರ ಪ್ರಾರ್ಥಿಸಿದರು. ಸಿಪಿಐ ಶಿವಾನಂದ ಗುಡಗನಟ್ಟಿ, ಎಂ.ಬಿ.ಖನ್ನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲೇಶ ಮಲಮೇತ್ರಿ ಮತ್ತು ರವಿಕುಮಾರ ಹಣ್ಣಿಕೇರಿ ಸ್ವಾಗತಿಸಿದರು. ಲಿಂಗನಾಯ್ಕ ರಾಯನಾಯ್ಕರ, ಶೋಭಾ ಗುರವನ್ನವರ ನಿರೂಪಿಸಿದರು. ಈರಣ್ಣಾ ಕಾಜಗಾರ ಮತ್ತು ಚಂದ್ರಕಾಂತ ಹೈಬತ್ತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.